ನಾಗರಿಕತೆ ಬೆಳೆದಿದೆ, ನೈತಿಕತೆ ಕುಸಿದಿದೆ
ಕ.ಪ್ರ. ವಾರ್ತೆ ತುಮಕೂರು ಮಾ.3
ನಾಗರಿಕತೆ ಬೆಳೆದಿದೆ, ನೈತಿಕತೆ ಕುಸಿದಿದೆ. ದೇಶ ಅಧೋಗತಿಯತ್ತ ಸಾಗಿದೆ ಎಂದು ಹಿರಿಯ ವಕೀಲ ಜಿಲ್ಲಾ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷ ಎಸ್.ವಿ. ರವೀಂದ್ರನಾಥ ಠಾಗೂರ್ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ಡಯಟ್‌ನಲ್ಲಿ ಏರ್ಪಾಟಾಗಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ನೈತಿಕ ಶಿಕ್ಷಣ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇಂದಿನ ವಿಜ್ಞಾನ-ತಂತ್ರಜ್ಞಾನದ ನಾಗಾಲೋಟದ ಪರಿಣಾಮ ನಾಗರಿಕತೆಯೂ ಅಷ್ಟೇ ವೇಗದಲ್ಲಿ ಮುನ್ನಡೆದಿದೆ. ಆದರೆ ನೈತಿಕತೆಯ ವೇಗ ಮಾತ್ರ ನಾಗರಿಕತೆಯ ವೇಗದಲ್ಲಿ ಬೆಳೆದಿಲ್ಲ. ವ್ಯಾವಹಾರಿಕ ಚಿಂತನೆಯೇ ಮುಂದಾಗಿ, ಲಾಭ-ನಷ್ಟಗಳೇ ಮುಖ್ಯವಾಗಿ, ಮಾನವೀಯತೆ, ನೈತಿಕತೆಗಳನ್ನು ಬದಿಗೆ ಸರಿಸಲಾಗುತ್ತಿದೆ. ಪರಿಣಾಮ ದೇಶ ಅಪಾಯಕಾರಿ ಸನ್ನಿವೇಶದತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಂಪರೆ ಅವಲೋಕಿಸುತ್ತಾ ಬಂದಲ್ಲಿ, ಹಿಂದೆ ನಿರಕ್ಷರಕುಕ್ಷಿಗಳಲ್ಲೂ ನೈತಿಕತೆ ಎದ್ದು ಕಾಣುತ್ತಿತ್ತು. ಆದರೆ ಅಕ್ಷರಸ್ಥರ ಸಂಖ್ಯೆ ಹೆಚ್ಚಿ, ನಾಗರಿಕತೆ ಬೆಳೆದಂತೆ ನೈತಿಕತೆಯ ಕೊರತೆ ಎದ್ದು ಕಾಣುತ್ತಿರುವುದು ಆಘಾತಕಾರಿ ಸಂಗತಿ. ಅಷ್ಟೇ ಅಲ್ಲ, ದೇಶದ ಭವಿಷ್ಯಕ್ಕೆ ಕಂಟಕಪ್ರಾಯ ಎಂದರು.
ಇಂದಿನ ವಿದ್ಯೆ ಕಲಿಕೆ ಕೇವಲ ಹಣ ಸಂಪಾದನೆಗಷ್ಟೇ ಸೀಮಿತವಾದ ಪರಿಣಾಮ ದೇಶ ಯಾಂತ್ರಿಕವಾಗಿ ಸಾಗುತ್ತಿದೆ. ಸೃಜನಾತ್ಮಕ ಶಿಕ್ಷಣದ ಕೊರತೆಯಿಂದಾಗಿ ನೈತಿಕತೆಗೆ ಆದ್ಯತೆ ಇಲ್ಲದಂತಾಗಿದೆ. ಮಾಹಿತಿ ಕ್ರೋಢೀಕರಣವೇ ಆದ್ಯತೆಯಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣಕ್ಕೆ ನೀಡಬೇಕಾದ ಆದ್ಯತೆ ನೀಡುತ್ತಿಲ್ಲ.
ಆತ್ಮಸ್ಥೈರ್ಯ ಬೆಳೆಸದ ಇಂದಿನ ಶಿಕ್ಷಣ ದೂರದೃಷ್ಟಿಯ ಕೊರತೆಯಿಂದ ನರಳುತ್ತಿದೆ. ಸರ್ಕಾರಗಳು ನೈತಿಕತೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿವೆ. ಮನುಷ್ಯ ವ್ಯವಹಾರಮುಖಿಯಾಗಿ, ಪ್ರಕೃತಿ ಸಂಪತ್ತನ್ನು ಲೂಟಿ ಮಾಡುತ್ತಿದ್ದಾನೆ. ಕನಿಷ್ಠ ತನ್ನ ಮುಂದಿನ ಪೀಳಿಗೆಗಾದರೂ ಉಳಿಸಬೇಕೆಂಬ ಕನಿಷ್ಠ ಕಾಳಜಿಯನ್ನು ಇಂದಿನ ಮಾನವ ಬೆಳೆಸಿಕೊಳ್ಳದಿರುವುದು, ಪರಿಸರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ವಿಷಾದನೀಯ. ಪ್ರಕೃತಿ ಕಾಪಾಡಿಕೊಂಡಲ್ಲಿ, ಪರಿಸರವಿದ್ದಲ್ಲಿ ತನ್ನ ಅಸ್ತಿತ್ವ ಎಂಬ ಮೂಲ ತತ್ವವನ್ನೇ ಮರೆತಿರುವ ಮಾನವ ಹಣವನ್ನೇ ಉಸಿರಾಡುತ್ತಿದ್ದು, ಮಾನವೀಯ ಮೌಲ್ಯಗಳನ್ನು ಬಹುತೇಕ ಮರೆತಿದ್ದಾನೆ. ಪರಿಣಾಮ ರೈತರ ಆತ್ಮಹತ್ಯೆ, ಬಡತನ, ಹಸಿವಿನ ಹೆಚ್ಚಳ ಕಣ್ಣಿಗೆ ರಾಚುತ್ತಿದೆ. ದೇಶ ವರ್ಗ ಸಂಘರ್ಷದತ್ತ ಜಾರುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರರ ನೈತಿಕತೆ: ಸ್ವಾತಂತ್ರ್ಯ ಹೋರಾಟಗಾರರ ನೈತಿಕತೆ, ನಿಸ್ವಾರ್ಥ ಹೋರಾಟ, ಮನೋಭಾವದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಸ್ವಾತಂತ್ರ್ಯ ಹೋರಾಟಗಾರರ ಸೇವೆಯನ್ನು ಇಂದು ಸಂಪೂರ್ಣವಾಗಿ ಮರೆತಿರುವ ಸಂದರ್ಭದಲ್ಲಿದ್ದೇವೆ. ಸ್ವಾತಂತ್ರ್ಯ ದಿನಾಚರಣೆ ಕೇವಲ ಯಾಂತ್ರಿಕವಾಗಿ ಸಾಗಿದ್ದು, ಅರ್ಥ, ಮೌಲ್ಯಗಳನ್ನು ಕಳೆದುಕೊಂಡಿದೆ. ದೇಶದ ಹಿತಕ್ಕಿಂತ ಸ್ವಾರ್ಥವೇ ಮೊದಲಾಗಿ, ಸಂಪತ್ತು ಲೂಟಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಠಾಗೂರ್ ವಿಷಾದಿಸಿದರು.
ಅಧಿಕಾರಸ್ಥರ ಅರ್ಹತೆ: ರಾಜಕಾರಣಿಗಳು, ಅಧಿಕಾರಸ್ಥರಲ್ಲಿ ನೈತಿಕತೆಯ ಕೊರತೆಯ ಪರಿಣಾಮ ದೇಶ ಅಧೋಗತಿಯತ್ತ ಸಾಗಿದೆ. ಉನ್ನತ ಹುದ್ದೆ ಅಲಂಕರಿಸುವವರಿಗೆ ಇರಬೇಕಾದ ಮೊದಲ ಅರ್ಹತೆಯೇ ನೈತಿಕತೆ. ಆದರೆ ನೈತಿಕತೆಯ ಕೊರತೆಯೇ ಅಧಿಕಾರಸ್ಥರ ಅರ್ಹತೆಯೇನೋ ಎಂಬಂತ ವಾತಾವರಣ ನಿರ್ಮಾಣವಾಗಿರುವುದು ವಿಷಾದನೀಯ ಸಂಗತಿ. ಅಧಿಕಾರಸ್ಥರು ಸರಿ ಹೋದಲ್ಲಿ ವ್ಯವಸ್ಥೆ ತಾನೇ-ತಾನಾಗಿ ಸರಿ ಹೋಗುತ್ತದೆ. ಆದರೆ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡದ ದೇಶದಲ್ಲಿ ಅಧಿಕಾರಸ್ಥರು ಸರಿಹೋಗಲು ಸಾಧ್ಯವೇ ಎಂದು ಠಾಗೂರ್ ಮಾರ್ಮಿಕವಾಗಿ ಪ್ರಶ್ನಿಸಿದರು.
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.