ಪೌರಕಾರ್ಮಿಕರ ಮಾನಸಿಕ, ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಕುಣಿಗಲ್: ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಮಾನಸಿಕ, ದೈಹಿಕ ಆರೋಗ್ಯದ ಬಗ್ಗೆ ಸಾಮಾನ್ಯ ನಾಗರಿಕರೂ ಸೇರಿದಂತೆ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗ ಕಾಳಜಿ ವಹಿಸಬೇಕೆಂದು ತುಮಕೂರು ಉಪವಿಭಾಗಾಧಿಕಾರಿ, ಪುರಸಭೆ ಆಡಳಿತಾಧಿಕಾರಿ ಆನಂದ್ ತಿಳಿಸಿದರು.
ಶನಿವಾರ, ಪುರಸಭೆ ಆವರಣದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರಿಗೆ ದೈನಂದಿನ ಬೆಳಗಿನ ಉಪಹಾರ ವಿತರಣ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರು ತಮ್ಮ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ತೊಡಗುವುದರಿಂದ, ಆರೋಗ್ಯವಂತ ಸಮಾಜ ಮತ್ತು ಪಟ್ಟಣ ನಿರ್ಮಾಣ ಸಾಧ್ಯವಾಗುತ್ತದೆ. ಇಂತಹ ಪೌರಕಾರ್ಮಿಕರಿಗೆ ಹಲವು ಸವಲತ್ತುಗಳನ್ನು ರಾಜ್ಯ ಸರ್ಕಾರ ನೀಡಿದ್ದು, ಕಾರ್ಮಿಕರು ಇವುಗಳ ಬಗ್ಗೆ ಅರಿವನ್ನು ಹೊಂದಿ ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ಅನ್ನದಾನಿ, ಪಟ್ಟಣದ ವಿಶಾಲತೆಗೆ ತಕ್ಕಂತೆ ಪೌರಕಾರ್ಮಿಕರ ನೇಮಕಾತಿಯಾಗದ ಕಾರಣ ಇರುವ ಪೌರಕಾರ್ಮಿಕರ ಮೇಲೆ ಹಚ್ಚಿನ ಕಾರ್ಯಾಭಾರದ ಒತ್ತಡವಿದ್ದು, ಇದರಿಂದಾಗಿ ಪೌರಕಾರ್ಮಿಕರು ಮದ್ಯವ್ಯಸನ ಸೇರಿದಂತೆ ಹಲವು ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು. ಪೌರ ಸೇವಾ ಸಂಘದ ರಾಜ್ಯ ಗೌರವಾಧ್ಯಕ್ಷ ಹನುಮಂತಪ್ಪ, ತಾಲೂಕು ಸಂಘದ ಅಧ್ಯಕ್ಷೆ ಸರಸಮ್ಮ, ಪದಾಧಿಕಾರಿಗಳಾದ ರಾಮು, ರಫೀಕ್, ಪರಿಸರ ಎಂಜಿನಿಯರ್ ಶಿಲ್ಪ, ಸಿಬ್ಬಂದಿಗಳಾದ ರಮೇಶ್, ಶೀಲ ಇದ್ದರು.