ರಾಜಕೀಯ ನಾಟಕಕ್ಕೆ ಬಲಿಯಾಗದಿರಿ
ತುಮಕೂರು: 2014 ರ ಲೋಕಸಭಾ ಚುನಾವಣೆಗಳಲ್ಲಿ ದುಡಿವಜನರು ಜಾತಿ-ಧರ್ಮದ ಹೆಸರಿಗೆ ಮಣೆಹಾಕದೆ ರಾಜಕೀಯ ನಾಟಕಗಳಿಗೆ ಬಲಿಯಾಗದೆ ನೀತಿ ಆಧಾರಿತವಾಗಿ ಮತ ಚಲಾಯಿಸುವ ಮೂಲಕ ಪ್ರಜ್ಞಾವಂತಿಗೆ ತೋರಬೇಕಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮೀನಾಕ್ಷಿಸುಂದರಂ ಅವರು ಜನತೆಗೆ ಕರೆ ನೀಡಿದರು.
ಅವರು ಸಿಪಿಎಂ ಜಿಲ್ಲಾ ಸಮಿತಿ ಅಯೋಜಿಸಿದ್ದ ಎರಡು ದಿನಗಳ ಸೈದ್ದಾಂತಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವ್ಯವಸ್ಥೆಯಲ್ಲಿ ಯಥಾಸ್ಥಿತಿವಾದಿಗಳು ಕಮ್ಯೂನಿಸಂನ ಬಗ್ಗೆ ಅಸತ್ಯಗಳನ್ನು ಜನತೆಯಲ್ಲಿ ಬಿತ್ತುತ್ತಿವೆ. ಸಮಾನತೆಯ ಆಶಯಕ್ಕೆ ದಶಕಗಳಿಂದ ತ್ಯಾಗ ಬಲಿದಾನಗಳಿಂದ ಹೋರಾಟ ಮುಂದುವರಿಸಿರುವ ಕಮ್ಯುನಿಸ್ಟ್ ಪಕ್ಷ ಅಸಮಾನತೆ ತೊಡೆಯುವ ಹೋರಾಟವನ್ನು ಮುಂದುವರಿಸಲಿದೆ ಎಂದರು.
ಸಿಪಿಎಂ ಜಿಲ್ಲಾ ಮುಖಂಡ ಬಿ.ಉಮೇಶ್ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಗಳಿಗೆ ಸಿಲುಕಿಸುವ ಯತ್ನಗಳು ರಾಜ್ಯ-ಕೆಂದ್ರ ಕೈಬಿಡದೆ ಇದ್ದಲ್ಲಿ ಅಸಮಾನತೆ ಮತ್ತಷ್ಟು ಹೆಚ್ಚಲಿದೆ ಎಂದರು. ನೀರಾವರಿ ಯೋಜನೆ ಬಗ್ಗೆ ಸ್ಪಷ್ಟತೆ ಇಲ್ಲದೆ ಮಧ್ಯಕರ್ನಾಟಕ ಜಿಲ್ಲೆಗಳಿಗೆ ತೀವ್ರ ಅನ್ಯಾಯ ಮಾಡಲಾಗುತ್ತಿದೆ ಎಂದರು. ಜಿಲ್ಲೆಗೆ ನೀರಾವರಿ ಯೋಜನೆಯ ಬಗ್ಗೆ ಹಾಗೂ ಹೇಮಾವತಿ ಹರಿಯಲು ಮೊದಲು ಹೋರಾಟ ರೂಪಿಸಿದ ಹಾಗವಾಡಿ ಚನ್ನಪ್ಪ ಮತ್ತು ಸಂಗಡಿಗರ ಕೊಡುಗೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಅವರು ಸೈದ್ಧಾಂತಿಕ ಸ್ಪಷ್ಟತೆಯು ಜನತೆಯ ಸಂಕಟ ನಿವವಾರಣೆ ಮಾಡುವಲ್ಲಿ, ಚಳುವಳಿ ಕಟ್ಟುವಲ್ಲಿ ನೆರವಾಗಲಿದೆ. ಕಾರ್ಯಕರ್ತರು ಇನ್ನೂ ಹೆಚ್ಚು ಹೆಚ್ಚು ತಿಳುವಳಿಕೆಯನ್ನು ಪಡೆಯುವುದರ ಮೂಲಕ ಜನತೆಯೊಂದಿಗೆ ಬೆರೆತು ಪಕ್ಷವನ್ನು ಕಟ್ಟಬೇಕು ಎಂದರು.
ರಾಘವೇಂದ್ರ ಸ್ವಾಗತಿಸಿ ಎನ್.ಕೆ. ಸುಬ್ರಮಣ್ಯ ವಂದಿಸಿದರು.