7ರಿಂದ ರಾಷ್ಟ್ರೀಯ ವಿಚಾರ ಸಂಕಿರಣ
ತುಮಕೂರು: ರಾಜ್ಯ ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರದ ಅಧ್ಯಾಪಕರ ಒಕ್ಕೂಟ ಫೆ. 7 ಮತ್ತು 8 ರಂದು ರಾಷ್ಟ್ರೀಯ ವಿಚಾರ ಸಂಕಿರಣವನ್ನು ತುಮಕೂರು ವಿಶ್ವವಿದ್ಯಾಲಯ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಅಧ್ಯಾಪಕರ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದೆ.
ಎರಡು ದಿನಗಳ ಈ ಸಮ್ಮೇಳನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ತುಮಕೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ್ಲಾ ಸಭಾಂಗಣದಲ್ಲಿ ನಡೆಯಲಿದೆ.
ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಂದ ಹಾಗೂ ದೇಶದ ವಿವಿಧ ಭಾಗಗಳಿಂದ ಪದವಿ ಕಾಲೇಜುಗಳ ಸುಮಾರು 800 ಅಧ್ಯಾಪಕರು ಭಾಗವಹಿಸುತ್ತಿದ್ದಾರೆ. ಅನುಭವಿ ಮತ್ತು ಪರಿಣಿತ ಅಧ್ಯಾಪಕರು, ಶಿಕ್ಷಣ ತತಜ್ಞರು, ಸಂಶೋಧಕರು, ಲೆಕ್ಕಪರಿಶೋದಕರು, ಕೈಗಾರಿಕೋದ್ಯಮಿಗಳು, ಸೇವಾಕ್ಷೇತ್ರದ ಧುರೀಣರು ಸೇರಿದಂತೆ ಮತ್ತಿತರ ಸಂಪನ್ಮೂಲ ವ್ಯಕ್ತಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು.
ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರ ಹಾಗೂ ವ್ಯವಹಾರೋದ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ನಿರಂತರ ಹಾಗೂ ತ್ವರಿತಗತಿಯ ಬದಲಾವಣೆಗಳ ಹಿನ್ನೆಲೆಯಲ್ಲಿ ವ್ಯವಹಾರ ಶಿಕ್ಷಣ ಕ್ಷೇತ್ರದ ದಿಕ್ಕುಗಳು ಮತ್ತು ಮಜಲುಗಳ ಕುರಿತ ಚರ್ಚೆ ಮತ್ತು ವಿಶ್ಲೇಷಣೆ ನಡೆಯಲಿದೆ.
ಪರಿಷತ್ನ ಅಧ್ಯಕ್ಷ ಮತ್ತು ಸಮ್ಮೇಳನದ ಕಾರ್ಯದರ್ಶಿ ಪ್ರೊ.ಬಿ.ಎಸ್. ಮಲ್ಲೇಶಪ್ಪ, ಸಂಘಟನಾ ಕಾರ್ಯದರ್ಶಿ ಡಾ.ಬಿ.ಎಚ್. ದೇವರಾಜು, ಉಪಾಧ್ಯಕ್ಷ ಸಿ.ನಂದೀಶ್, ಡಾ.ಅರತಿ ಜೆ ಶೆಟ್ಟಿ, ಪ್ರಚಾರ ಕಾರ್ಯದರ್ಶಿ ಬಿ.ಮಂಜಯ್ಯ, ತಾಂತ್ರಿಕ ಸಮಿತಿ ಸಂಯೋಜಕ ಡಾ.ಎಸ್.ಟಿ. ರಂಗಪ್ಪ, ಸಮ್ಮೇಳನದ ಖಜಾಂಚಿ ಜೆ.ರಾಮು ಮತ್ತಿತರರು ಉಪಸ್ಥಿತರಿದ್ದರು.
ನಾಳೆಯಿಂದ ರಾಘವೇಂದ್ರಸ್ವಾಮಿಗಳ ವರ್ಧಂತಿ
ತಿಪಟೂರು: ಪಟ್ಟಣದ ಕೋಟೆ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಯರ 419ನೇ ವರ್ಷದ ವರ್ಧಂತಿ ಮಹೋತ್ಸವ ಮಾ.6 ರಿಂದ 10ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. 6ರಂದು ಮಹಾಗಣಪತಿ ಹೋಮ,ದೇವತಾ ಪ್ರಾರ್ಥನೆ, ಮಹಾಮಂಗಳಾರತಿ, ಮಾ.7 ಕೌಸ್ತುಭ ಭಜನಾ ಮಂಡಳಿಯಿಂದ ದಾಸರ ಪದಗಳು, 8 ಪಂಚಾಮೃತಾಭಿಷೇಕ, ಕನಕಾಭಿಷೇಕ, ಅಷ್ಟೋತ್ತರ ಸೇವೆ, ರಂಗಪೂಜೆ, 9 ಚಂಡಿಕಾಯಾಗ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ಮತ್ತು ಶ್ರೀನಿವಾಸ ಕಲ್ಯಾಣ ನಡೆಯಲಿದೆ. 10ರಂದು ಕಲಶ ಪ್ರತಿಷ್ಠಾಪನೆ ಹಾಗೂ ಉಡುಪಿ ಪೇಜಾವರ ಅಧೋಕ್ಷಜ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಪಾದಂಗಳವರಿಂದ ಪಟ್ಟದ ದೇವರ ಪೂಜೆ, ಮಹಾಮಂಗಳಾರತಿ ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟ್ರಸ್ಟ್ ಅಧ್ಯಕ್ಷ ವೈ.ಸುಧೀಂದ್ರರಾವ್ ತಿಳಿಸಿದ್ದಾರೆ.