ಜೀತದಾಳುಗಳ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿ, ಅಧಿಕಾರಿಗಳು ಸ್ಪಂದಿಸಲಿ
ಪಾವಗಡ: ಜೀತದಾಳುಗಳ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವಂದಿಸ ಬೇಕಿದೆ ಎಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ಸ್ಫೂರ್ತಿ ಸಂಸ್ಥೆ ಬೆಂಗಳೂರು ಮತ್ತು ಜೀತ ವಿಮುಕ್ತಿ ಕರ್ನಾಟಕ ಹಾಗೂ ತಮಟೆ ಕಲಾವಿದರ ಒಕ್ಕೂಟ ವತಿಯಿಂದ ಪಟ್ಟಣದ ತಾಪಂ ಆವರಣದಲ್ಲಿ ಏರ್ಪಾಡಿಸಿದ್ದ ಸಮಾರಂಭದಲ್ಲಿ ತಾಪಂನಿಂದ ಬಿಡುಗಡೆಯಾದ 367 ಜೀತದಾಳುಗಳ ಮಾಸಾಶನದ ಚೆಕ್ ವಿತರಿಸಿ ಅವರು ಮಾತನಾಡಿದರು. ಜೀತ ಒಂದು ಅನಿಷ್ಟ ಪದ್ಧತಿ. ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜೀತಾದಾಳುಗಳ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಸ್ವಂದಿಸಿ ಕೆಲಸ ಮಾಡಬೇಕಿದೆ ಎಂದರು. ಎಲ್ಲಾ ರಂಗದ ಪ್ರಗತಿ ಹಿನ್ನಲೆಯಲ್ಲಿ ತಾಲೂಕಿನ ನಿರ್ಗತಿಕರು ಮತ್ತು ತುಳಿತಕ್ಕೆ ಒಳಗಾದ ಶೋಷಿತರ ಪರ ಬೆಳಕು ಚೆಲ್ಲಾಲಾಗುತ್ತಿದ್ದು ಸರ್ಕಾರದ ಸೌಲಭ್ಯಗಳ ಸದುಪಯೋಗ ಹಾಗೂ ವಿದ್ಯಾವಂತರಾಗುವ ಮೂಲಕ ಅರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿಗಳಾಗಿ ಎಂದು ತಿಳಿಸಿದರು. ತಾಲೂಕಿನಲ್ಲಿ 367 ಜೀತದಾಳುಗಳನ್ನು ಗುರ್ತಿಸಿದ್ದು ಪುನರ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತಲಾ 7200 ರು.ಗಳನ್ನು ತಾಪಂನಿಂದ ಪರಿಹಾರ ಕಲ್ಪಿಸಿದ್ದು ಪ್ರತಿ ತಿಂಗಳು 300 ರು. ಮಾಸಾಶನ 2 ವರ್ಷ ಪಡೆಯಬೇಕಿದೆ ಎಂದ ಅವರು ಜೀತದಾಳುಗಳ ಪುನರ್ ವಸತಿಗಾಗಿ ಮನೆಗಳ ನಿರ್ಮಾಣ ಹಾಗೂ ಇತರೆ ಯೋಜನೆಗಳು ರೂಪಿಸಲಾಗುತ್ತಿದೆ ಎಂದು ನುಡಿದರು. ತಾಪಂ ಅಧ್ಯಕ್ಷೆ ರಾಧರಾಜ್ಗೋಪಾಲ್ ಮಾತನಾಡಿ ಜೀತದಾಳುಗಳ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿದ್ದು ಸರ್ಕಾರದ ಯೋಜನೆಗಳು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಮನೆ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳು ಕಲ್ಪಿಸುವ ಭರವಸೆ ನೀಡಿದರು. ಜಿಪಂ ಸದಸ್ಯ ಆರ್.ಸಿ ಅಂಜಿನಪ್ಪ, ತಾಪಂ ಸದಸ್ಯೆ ವಿನೋದ ರಾಮಾಂಜಿನಪ್ಪ, ತಾಪಂ ಇಒ ತಿಪ್ಪೇಸ್ವಾಮಿ ಜೀತದಾಳುಗಳ ಕುರಿತು ಮಾತನಾಡಿದರು. ಜೀತ ವಿಮುಕ್ತಿ ಹಾಗೂ ತಮಟೆ ಸಂಘದ ಕಲಾವಿದ ಮಂಗಳವಾಡ ಹನುಮಂತರಾಯ, ದೇವಲಕೆರೆ ಹನುಮಂತರಾಯ ಹಾಗೂ ಪಳವಳ್ಳಿ ಗಂಗಾಧರ್ ಅವರನ್ನು ಸಮಾರಂಭದಲ್ಲಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಸನ್ಮಾನಿಸಿದರು. ಸ್ಫೂರ್ತಿ ಸಂಸ್ಥೆ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಶಿವಮ್ಮ, ಜೀತ ವಿಮುಕ್ತಿ ಕರ್ನಾಟಕ ತಮಟೆ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹನುಮಂತರಾಯ, ವೆಂಕಟಮ್ಮ ಇತರರು ಉಪಸ್ಥಿತರಿದ್ದರು.