ದೇವರಾಯನದುರ್ಗ ಜಾತ್ರೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ
ತುಮಕೂರು: ಸುಮಾರು 800 ವರ್ಷಗಳ ಇತಿಹಾಸವಿರುವ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎ. ಶ್ರೇಣಿಗೆ ಸೇರಿರುವ ದೇವರಾಯನದುರ್ಗದ ಯೋಗಾಲಕ್ಷ್ಮಿನರಸಿಂಹಸ್ವಾವು ಹಾಗೂ ಭೋಗಾಲಕ್ಷ್ಮಿನರಸಿಂಹಸ್ವಾಮಿ ಜಾತ್ರೆ ಇದೇ ತಿಂಗಳ 9 ರಿಂದ 22 ರವರೆಗೆ ನಡೆಯಲಿದ್ದು, ಜಾತ್ರೆಗೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾತ್ರೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
16 ರಂದು ನಡೆಯಲಿರುವ ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವಸ್ಥಾನದ ಸುತ್ತಮುತ್ತಲೂ ಭಕ್ತರು ಹಾಕಲಿರುವ ಕೊಪ್ಪಲುಗಳಿಗೆ ಸಮರ್ಪಕ ನೀರಿನ ವ್ಯವಸ್ಥೆಯನ್ನು ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲು ಏರ್ಪಾಟು ಮಾಡಲಾಗಿದೆ.
ದೇವಸ್ಥಾನಕ್ಕೆ ಸುಣ್ಣ-ಬಣ್ಣ ಹೊಡೆಸಲಾಗಿದೆ. ದೇವರ ದರ್ಶನ ಪಡೆಯುವ ಸಲುವಾಗಿ ಎರಡು ದೇವಸ್ಥಾನಗಳಲ್ಲಿ ಕ್ಯೂರಾಡ್ ನಿರ್ಮಾಣ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ. ದರ್ಶನ ಪಡೆದ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲು ಕ್ರಮ ವಹಿಸಲಾಗಿದ್ದು, ಬ್ರಹ್ಮರಥೋತ್ಸವದ ರಥವನ್ನು ಸುಸಜ್ಜಿತಗೊಳಿಸಲು ಕ್ರಮ ವಹಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಪ್ರವಾಸೋಧ್ಯಮ ಇಲಾಖೆ ವತಿಯಿಂದ ನಿರ್ಮಾಣವಾಗಿರುವ ಯಾತ್ರಿನಿವಾಸದ ಹಾಗೂ ಇತರೆ ಕೊಠಡಿಗಳನ್ನು ಸುಸಜ್ಜಿತಗೊಳಿಸಿ, ಭಕ್ತರ ಅನುಕೂಲಕ್ಕಾಗಿ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಹಾಗೂ ತುಮಕೂರಿನಿಂದ ಸರ್ಕಾರಿ ಬಸ್‌ಗಳ ಸೇವೆಯನ್ನು ಕಲ್ಪಿಸಲಾಗಿದ್ದು, ವಾಹನಗಳಿಗೆ ಪ್ರತ್ಯೇಕ ನಿಲ್ದಾಣ ಸಿದ್ದಗೊಳಿಸಲಾಗಿದೆ. ಬ್ರಹ್ಮರಥೋತ್ಸವ ಅಂಗವಾಗಿ ಲಕ್ಷಾಂತರ ಭಕ್ತರು ಆಗಮಿಸಲಿರುವುದರಿಂದ ವಿಶೇಷ ದರ್ಶನಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಭಕ್ತರು 50 ರು. ಟಿಕೆಟ್ ಪಡೆಯಬೇಕಾಗುವುದು. ಒಂದು ಟಿಕೆಟ್‌ಗೆ ಇಬ್ಬರಿಗೆ ಪ್ರವೇಶ ನೀಡಲಾಗುವುದು.
ಜಾತ್ರೆ ಪ್ರಯುಕ್ತ ಭದ್ರತೆ ದೃಷ್ಟಿಯಿಂದ ಪೊಲೀಸ್ ವ್ಯವಸ್ಥೆ, ಹೋಂಗಾರ್ಡ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳ ಸೇವೆಯನ್ನು ಬಳಸಿಕೊಳ್ಳಲು ಕ್ರಮ ವಹಿಸಲಾಗಿದೆ. ಅಲ್ಲದೆ ಅಗ್ನಿಶಾಮಕ ದಳದ ಸೇವೆಯನ್ನು ಕೂಡ ಬಳಸಿಕೊಳ್ಳಲು ಏರ್ಪಾಟು ಮಾಡಲಾಗಿದೆ.
ಹಾಲಿ ಇದ್ದ ಕಲ್ಯಾಣಮಂಟವನ್ನು ಪುನರ್‌ನಿರ್ಮಾಣ ಮಾಡಿರುವುದು. ಯೋಗಾಲಕ್ಷ್ಮಿ ದೇವಸ್ತಾನದ ಹತ್ತಿರವಿರುವ ಪುಷ್ಕರಣಿ ಜೀರ್ಣೋದ್ಧಾರ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ನಿತ್ಯ ಅನ್ನಸಂತರ್ಪಣಾ ಭವನಕ್ಕೆ ದೇವಾಲಯದಿಂದ ಕಳೆದ ಸಾಲಿನಲ್ಲಿ ಹೊಸದಾಗಿ ಶೀಟ್‌ಗಳನ್ನು ಹಾಕಿಸಿ ಸಜ್ಜುಗೊಳಿಸಲಾಗಿದೆ. ಪ್ರವಾಸೋದ್ಯಮ ಇಲಾಖಾ ವತಿಯಿಂದ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದ್ದು, ಇದೀಗ ಭಕ್ತರಿಗೆ ಒದಗಿಸಲು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.