ಧರ್ಮದಿಂದ ಮಾನವನ ಪ್ರಗತಿ ಸಾಧ್ಯ: ಅಭಿನವ ಶ್ರೀ
ತಿಪಟೂರು: ಧಾರ್ಮಿಕ ಸಮಾರಂಭಗಳನ್ನು ಹಮ್ಮಿಕೊಳ್ಳುವುದರಿಂದ ಧರ್ಮವನ್ನು ಹೆಚ್ಚೆಚ್ಚು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಮಾನವನಿಗೆ ಇಂದು ಧರ್ಮದ ಅಗತ್ಯತೆ ಇದ್ದು, ಧರ್ಮದಿಂದ ಮಾತ್ರ ಮಾನವ ಏಳಿಗೆ ಸಾಧಿಸಬಹುದು ಎಂದು ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ನೊಣವಿನಕೆರೆ ಹೋಬಳಿ ಮಾಚಘಟ್ಟದ ಅಂಬಿಕಾದೇವಿ, ಚೌಡೇಶ್ವರಿದೇವಿ 14ನೇ ವರ್ಷದ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಆನೆ ಅಂಬಾರಿ ಉತ್ಸವ ಮತ್ತು ಧಾರ್ಮಿಕ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀಗಳು ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಅನ್ಯಾಯ, ಅಧರ್ಮ, ಭ್ರಷ್ಟಾಚಾರ, ಶಾಂತಿ ಕದಡುವವರನ್ನು ಮಟ್ಟಹಾಕಿ ದೇಶ ಹಾಗೂ ಸಮಾಜದ ಒಳಿತಿಗಾಗಿ ಧರ್ಮ ಪಾಲಿಸಿದರೆ ಮಾನವ ಕುಲದ ಏಳಿಗೆಯಾಗಲು ಸಾಧ್ಯ. ಪ್ರತಿ ಗ್ರಾಮಗಳಲ್ಲಿ ದೇವಾಲಯ ರಕ್ಷಿಸಿ ಶ್ರದ್ಧಾ ಭಾವನೆಯಿಂದ ಪೂಜಾಕಾರ್ಯಗಳನ್ನು ನಡೆಸಿದಲ್ಲಿ ಗ್ರಾಮಗಳ ಏಳಿಗೆ, ಒಗ್ಗಟ್ಟು ನಿರ್ಮಾಣವಾಗಿ ಗ್ರಾಮಗಳು ಸುಭಿಕ್ಷವಾಗಿರುತ್ತವೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ್ ಮಾತನಾಡಿ ಸಮಾಜದ ಎಲ್ಲಾ ವರ್ಗದವರೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಯಾವುದೇ ಧಾರ್ಮಿಕ ಸಮಾರಂಭಗಳ ಯಶಸ್ವಿಗೆ ಒಗ್ಗಟ್ಟಿನಿಂದ ಸಹಕರಿಸಿ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಬೇಕೆಂದರು. ಮಾಜಿ ಶಾಸಕ ಬಿ.ಸಿ. ನಾಗೇಶ್ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು. ಈ ಸಂದರ್ಭದಲ್ಲಿ ಉಚಿತ ನೇತ್ರ ತಪಾಸಣೆ ಶಿಬರ ಆಯೋಜಿಸಲಾಗಿತ್ತು. ಸಂಜೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ದೇವಿಗೆ ಆನೆ ಅಂಬಾರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಪಿಎಸ್‌ಐ ರಂಗಸ್ವಾಮಿ, ಸಂತೋಷ್‌ಕುಮಾರ್ ಬೈರಟ್, ತ್ರಿಯಂಬಕ, ಕೇಶವೇಗೌಡ್ರು, ತಾಪಂ ಸದಸ್ಯೆ ನೇತ್ರಾವತಿ, ದಯಾನಂದ್, ಶಿವಣ್ಣ, ಟ್ರಸ್ಟ್ ಅಧ್ಯಕ್ಷ ಜಿ.ಎಂ.ಪ್ರಕಾಶ್ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.