ಪುತ್ರ ವ್ಯಾಮೋಹದಿಂದ ಶಿಷ್ಟಾಚಾರ ಉಲ್ಲಂಘಿಸಿರುವ ಶಾಸಕ ನಾಗರಾಜಯ್ಯ
ಕುಣಿಗಲ್: ಶಾಸಕ ಡಿ.ನಾಗರಾಜಯ್ಯ ಪುತ್ರ ವ್ಯಾಮೋಹದಿಂದ ಸರ್ಕಾರದ ಎಲ್ಲ ಕಾರ್ಯಕ್ರಮಗಳಲ್ಲೂ ತಮ್ಮ ಮಗನ ಭಾವಚಿತ್ರ ಹಾಕಿಸಿ ಕೊಂಡು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದು, ಇನ್ನಾದರೂ ಎಚ್ಚೆತ್ತು ಶಾಸಕ ಸ್ಥಾನ ಘನತೆ ಗೌರವ ಕಾಪಾಡಬೇಕೆಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಆಗ್ರಹಿಸಿದರು.
ಕಾಂಗ್ರೆಸ್ ಕಾರ್ಯಾಲಯದಲ್ಲಿ ಫೆ. 5 ರಂದು ಇಂಧನ ಸಚಿವರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿ ಬಗೆಗಿನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕ ನಾಗರಾಜಯ್ಯ 30 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಕರಪತ್ರಗಳನ್ನು ಮುದ್ರಿಸಿದ್ದು, ಈ ಕರಪತ್ರದಲ್ಲಿ ಶಾಸಕ ಮತ್ತು ಅವರ ಪುತ್ರ ಜಿಪಂ ಸದಸ್ಯ ಡಾ.ರವಿ ಫೋಟೋ ಹಾಕಿಸಿದ್ದಾರೆ. ಕರಪತ್ರದ ಮೇಲೆ ಕರ್ನಾಟಕಸರ್ಕಾರ ಎಂದೂ ಉಲ್ಲೇಖಿಸಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದ್ದು, ಅಧಿಕಾರಿಗಳು ಶಿಷ್ಟಾಚಾರವನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
ಶಾಸಕ ನಾಗರಾಜಯ್ಯ ಮಾಜಿ ಮಂತ್ರಿಗಳಾಗಿದ್ದು ಶಿಷ್ಟಾಚಾರದ ಬಗ್ಗೆ ಅರಿವು ಹೊಂದಿದ್ದಾರೆ. ಅಪಾರ ಅನುಭವ ಹೊಂದಿರುವ ರಾಜಕಾರಣಿಯಾದ ಅವರಿಗೆ ಪುತ್ರವ್ಯಾಮೋಹದಿಂದ ಸಿದ್ದಾಂತಗಳನ್ನು ಗಾಳಿಗೆ ತೂರಿರುವುದು ನಿಜಕ್ಕೂ ಖೇದಕರ. ಅಧಿಕಾರಿಗಳ ಮೇಲೆ ಒತ್ತಡ ತಂದು ಇಂತಹ ಕರಪತ್ರ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಿದಲ್ಲಿ ಅಮಾಯಕ ಅಧಿಕಾರಿಗಳು ಬಲಿಪಶುಗಳಾಗುತ್ತಾರೆ. ಇನ್ನಾದರೂ ಶಾಸಕರು ತಮ್ಮ ಸ್ಥಾನದ ಘನತೆ ಅರಿತು, ನಿಯಮಕ್ಕೆ ಬದ್ದರಾಗಿ ನಡೆದುಕೊಳ್ಳಬೇಕಿದೆ. ಇದೇ ತರಹದ ಘಟನೆಗಳು ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದರು.
30 ಕೋಟಿ ವೆಚ್ಚದ 55 ಕಿ.ಮೀ. ರಸ್ತೆ ಅಭಿವೃದ್ಧಿಗೆ ತಾವೆ ಶ್ರಮಿಸಿದ್ದಾಗಿ ಶಾಸಕರು ಘೋಷಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ತಾವು ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರದ ಮೇಲೆ ಸತತ ಒತ್ತಡ ಹಾಕಿ ಯೋಜನೆ ಸಿದ್ದಪಡಿಸಿದ್ದು, ಅನುದಾನದ ಕೊರತೆಯಿಂದ ವಿಳಂಬವಾಗಿತ್ತು. ಆದರೆ ಶಾಸಕ ನಾಗರಾಜಯ್ಯ ಇದು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುವುದರಲ್ಲಿ ಯಾವುದೇ ಹುರುಳಿಲ್ಲ ಎಂದೂ ನುಡಿದರು.
ಇಂದು ಇಂಧನ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ತಾಲೂಕು ಜನತೆಯ ಬಹುದಿನದ ಬೇಡಿಕೆಯಾದ ಬೆಸ್ಕಾಂ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳಿಗೆ ಫೆ. 5ರಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ತಾಲೂಕಿನಲ್ಲಿ ಬೆಸ್ಕಾಂನ ಬೃಹತ್ ಜಾಲವಿದ್ದು ಹಾಲಿ ಕೇವಲ ಮೂರು ಸೆಕ್ಷನ್ ಇದ್ದು, ಹೊಸದಾಗಿ ಯಡವಾಣಿ, ಸಂತೇಮಾವತ್ತೂರು, ಕೆಂಪನಹಳ್ಳಿ, ಕೊತ್ತಗೆರೆಯಲ್ಲಿ ನಾಲ್ಕು ಸೆಕ್ಷನ್, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸುಧಾರಣೆಗೆ ಜಿಡ್ಡಿಗೆರೆ, ನಿಡಸಾಲೆಯಲ್ಲಿ 66 ಕೆವಿ ವಿದ್ಯುತ್ ಸ್ಥಾವರ ಮತ್ತು ಕುಣಿಗಲ್ ತಾಲೂಕಿನಲ್ಲಿ ಮತ್ತೊಂದು ಉಪವಿಭಾಗ ಪ್ರಾರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪಟ್ಟಣದ ಜಿಕೆಬಿಎಂಎಸ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದರ ನಿಧಿ ಮತ್ತು ಡಿಕೆಎಸ್ ಟ್ರಸ್ಟ್‌ವತಿಯಿಂದ 36 ಲಕ್ಷ ರು. ವೆಚ್ಚದಲ್ಲಿ ಪಟ್ಟಣದ ದೊಡ್ಡಪೇಟೆ, ಮಹಾತ್ಮಗಾಂಧಿ ಕಾಲೇಜು, ವಡ್ಡರಕುಪ್ಪೆಗೇಟ್ ಬಳಿ ನಿರ್ಮಿಸಲಾಗಿರುವ ಮೂರು ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡ ಡಾ.ರಂಗನಾಥ್, ಬ್ಲಾಕ್ ಅಧ್ಯಕ್ಷ ಶಂಕರ್, ಕೊತ್ತಗೆರೆ ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಮುಖಂಡ ಶ್ರೀನಿವಾಸ, ಪುರಸಭೆ ಸದಸ್ಯ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.