ಅನ್ನ ನೀಡುವ ರೈತನೇ ಅಧಿಕಾರ ನಡೆಸುವಂತಾಗಲಿ
ಈ ಹಿನ್ನೆಲೆಯಲ್ಲೇ ರೈತ ಸಂಘ, ಹಸಿರುಸೇನೆ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ: ಕೋಡಿಹಳ್ಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಕುಣಿಗಲ್ ಮಾ.9
ರೈತರ ಪರವೆಂದು ಫೋಸುಕೊಟ್ಟು ರೈತರನ್ನು ಶೋಷಿಸಿ, ತಾವು ದಷ್ಟ, ಪುಷ್ಟರಾಗುವಂತ ಭ್ರಷ್ಟರಾಜಕೀಯ ವ್ಯವಸ್ಥೆಯ ಬಗ್ಗೆ ರೈತರನ್ನು ಜಾಗೃತಗೊಳಿಸಿ, ರಾಷ್ಟಕ್ಕೆ, ರಾಜ್ಯಕ್ಕೆ ಅನ್ನ ನೀಡುವ ರೈತನೇ ಅಧಿಕಾರ ನಡೆಸುವಂತಾಗುವ ನಿಟ್ಟಿನಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ತಾಲೂಕು ಸಂಘದ ಪದಾಧಿಕಾರಿಗಳ ಘೋಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ರೈತರಿಗೆ ಸೂಕ್ತ ನೀರಾವರಿ ವ್ಯವಸ್ಥೆ ಕಲ್ಪಿಸುವ ಎಲ್ಲಾ ಅವಕಾಶಗಳಿದ್ದರೂ, ರಾಜಕಾರಣಿಗಳು ಸ್ವಾರ್ಥಪರ ರಾಜಕೀಯ ಮತ್ತು ಭ್ರಷ್ಟ ವ್ಯವಸ್ಥೆಯಿಂದಾಗಿ ನೀರಾವರಿ ಯೋಜನೆಗಳ ಹೆಸರಿನಲ್ಲಿ ಸಹಸ್ರಾರು ಕೋಟಿ ಲೂಟಿ ಹೊಡೆಯುತ್ತಿರುವುದು ನಿಜಕ್ಕೂ ಖಂಡನೀಯ. ರಾಜ್ಯವನ್ನಾಳಿದ ಎಲ್ಲಾ ರಾಜಕಾರಣಿಗಳು ಇದನ್ನೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಇದಕ್ಕೆ ಹೊರತಾಗಿಲ್ಲ, ಕಬ್ಬುಬೆಳೆಗಾರರ ರಕ್ಷಣೆಗೆ ಸಂಘವು ಹಲವು ಹೋರಾಟದ ಫಲವಾಗಿ, ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ ಎಂದರು.
ನ್ಯಾಯಾಲಯದ ಮೆಟ್ಟಿಲು: ದುರಂತ ಎಂದರೆ ಬಹುತೇಕ ಕಾರ್ಖಾನೆ ಮಾಲೀಕರು ರಾಜಕೀಯ ನಾಯಕರ ಹಿಡಿತದಲ್ಲಿದ್ದು, ಸರ್ಕಾರ ಘೋಷಿಸಿರುವ 2650 ರು.ಬೆಲೆ ಕೊಡಲು ನಿರಾಕರಿಸಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಆದರೆ ನ್ಯಾಯಾಲಯವು ರೈತರ ಪರ ತೀರ್ಪು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರೈತರ ಭೂದಾಖಲೆಗಳನ್ನು ಕೆಲ ಕಂದಾಯ ಇಲಾಖಾಧಿಕಾರಿಗಳು ನಿರ್ಲಕ್ಷ್ಯದಿಂದ ರೈತರು ಪರದಾಡುವಂತಾಗಿದ್ದು, ನಿಯಮಗಳೆಂಬ ದಾರಿಯನ್ನು ತಪ್ಪಿರುವ ಭ್ರಷ್ಟ ಅಧಿಕಾರಿಗಳಿಗೆ ತಕ್ಕಪಾಠ ಕಲಿಸಲು, ಹೇಗೆ ರಾಸುಗಳು ದಾರಿತಪ್ಪಿದರೆ ಸರಿದಾರಿಗೆ ತರಲು ಬಾರುಕೋಲು ಬಳಸುತ್ತೇವೆ ಹಾಗೇ ದಾರಿತಪ್ಪಿದ ಭ್ರಷ್ಟ ಅಧಿಕಾರಿಗಳ ವಿರುದ್ಧವು ಬಾರುಕೋಲು ಚಳವಳಿ ನಡೆಸಿ ಅವರನ್ನು ಸರಿದಾರಿಗೆ ತರುವ ಹೋರಾಟವನ್ನು ಗ್ರಾಮಾಂತರ ಪ್ರದೇಶದಿಂದ ನಡೆಸಲಾಗುತ್ತದೆ ಎಂದರು.
ಅಸಮಾಧಾನ: ಹಲವು ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗಿರುವ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ವಿಭಿನ್ನ ರೀತಿಯ ನಿಲವು ತಳೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ರೈತರಿಗೆ ಪರಿಹಾರ ನೀಡುವಲ್ಲಿ ಕ್ಷುಲಕ ತನದ ರಾಜಕಾರಣಕ್ಕೆ ಒಳಗಾಗಿರುವ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಬೇಕಿದೆ.
ರೈತ ಸಂಘದ ಪದಾಧಿಕಾರಿಗಳೇನು ಸನ್ಯಾಸಿಗಳಲ್ಲ. ಅವಕಾಶ ಸಿಕ್ಕರೆ ಸೂಕ್ತ ಕಾಲ ನೋಡಿಕೊಂಡು ರಾಜಕಾರಣದಲ್ಲೂ ಸಂಘದ ಪದಾಧಿಕಾರಿಗಳು ಪರಿಣಾಮಕಾರಿ ಪಾತ್ರನಿರ್ವಹಿಸಲಿದ್ದು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಆಪ್ ಪಕ್ಷವನ್ನು ಬೆಂಬಲಿಸಲು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸೋಮವಾರ ನಡೆಯಲಿರುವ ರಾಜ್ಯಮಟ್ಟದ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದೆಂದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷ ಆನಂದ ಪಟೇಲ್ ಹುಲಿಕಟ್ಟೆ, ಪದಾಧಿಕಾರಿಗಳಾದ ಸತೀಶ, ಕುಮಾರ್, ಗಂಗಾಧರ, ಧನಂಜಯ, ಪ್ರಕಾಶ್ ಇತರರು ಉಪಸ್ಥಿತರಿದ್ದರು.