ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಲೇಜಲ್ಲಿ ವಿದ್ಯಾರ್ಥಿಗಳು ಬಡಿದಾಡಿಕೊಳ್ಳುವ ಸ್ಥಿತಿ ನಿರ್ಮಾಣ

Srinivasa Murthy VN
Updated On : 10 Mar 2014, 1:50 am

ಕುಣಿಗಲ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿನ ಪ್ರಾಚಾರ್ಯರು, ಕೆಲ ಬೋಧಕ ಸಿಬ್ಬಂದಿ ಅವಿವೇಕತನದ ಪರಮಾವಧಿಯಿಂದಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಡಿದಾಡಿಕೊಳ್ಳುವಂತ ಸ್ಥಿತಿಇದ್ದು, ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಕಳಿಸಲು ಪೋಷಕರು ಚಿಂತಿಸುವಂತಾಗಿದೆ.
ಕಾಲೇಜಿನಲ್ಲಿ ಅಹಿತಕರಘಟನೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಮುಖಂಡರು, ಸಿಡಿಸಿ ಸದಸ್ಯರು ಪ್ರಾಚಾರ್ಯರನ್ನು ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಳೆದೊಂದು ತಿಂಗಳಿನಲ್ಲಿ ಐದು ಕಾರ್ಯಕ್ರಮಗಳಿಗೆ ಹಿಂದಿನ ಪ್ರಾಚಾರ್ಯರು ಅವಕಾಶ ಮಾಡಿಕೊಟ್ಟಿದ್ದರು. ವಿದ್ಯಾರ್ಥಿ ಉತ್ಸವ, ಜನಪದಜಾತ್ರೆ ಇತರೆ ಹೆಸರಿನಲ್ಲಿ ಕೆಲ ವಿದ್ಯಾರ್ಥಿಗಳು ತಮ್ಮ ತಮ್ಮ ಗುಂಪುಗಳನ್ನು ಕಟ್ಟಿಕೊಂಡು, ಬೇರೆ, ಬೇರೆ ಪಕ್ಷದ ರಾಜಕಾರಣಿಗಳನ್ನು ಹಾಕಿಕೊಂಡು, ವಿವಿಧೆಡೆ ವಸೂಲಿಗೆ ಹೋಗಿ, ದೇಣಿಗೆ ಸಂಗ್ರಹಿಸಿ ಆರ್ಕೆಸ್ಚ್ರಾ ಆಯೋಜಿಸಿ, ಮೋಜು, ಮಸ್ತಿಯಲ್ಲಿ ತೊಡಗುತ್ತಾ, ಮೂಲ ಉದ್ದೇಶವನ್ನೆ ಮರೆತಿದ್ದರು. ಮಾರ್ಚ್ 6ರಂದು ನಡೆದ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿನಿಯೊಬ್ಬಳನ್ನು ಚುಡಾಯಿಸಿದ ವಿಷಯಕ್ಕೆ, ವಿದ್ಯಾರ್ಥಿಗಳಲ್ಲೆ ಗುಂಪುಗಳಾಗಿ ಗೊಂದಲ ಸ್ಥಿತಿ ನಿರ್ಮಾಣವಾಗಿತ್ತು.
 ವೇದಿಕೆ ಅಲಂಕರಿಸಿದ ಗಣ್ಯರಾದ ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಇತರರು ವಿದ್ಯಾರ್ಥಿಗಳನ್ನು, ಬೋಧಕವರ್ಗದವರನ್ನು ತರಾಟೆಗೆ ತೆಗೆದುಕೊಂಡು ಸಂಯಮದಿಂದ ಇರುವಂತೆ ಎಚ್ಚರಿಸಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತ್ತು.
ಭಯದ ವಾತಾವರಣ ನಿರ್ಮಾಣ: ಈ ವಿಷಯದ ಹಿನ್ನೆಲೆಯಲ್ಲಿ ಶನಿವಾರ ಕಾಲೇಜಿನ ಆವರಣದಲ್ಲಿ ಮಧು ಎಂಬಾತನ ಗುಂಪಿನವರು ಅರುಣ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಅರುಣನ ಗುಂಪಿನ ಇತರೆ ವಿದ್ಯಾರ್ಥಿಗಳ ಮೇಲೆ ಹಲ್ಲೆನಡೆಸಲು, ಕೈಯಲ್ಲಿ ವಿವಿಧ ಆಯುಧಗಳನ್ನು ಹಿಡಿದು ವಿವಿಧೆಡೆ ಹುಡುಕಾಟ ನಡೆಸುತ್ತಾ ಭಯದ ವಾತಾವರಣ ನಿರ್ಮಾಣ ಮಾಡಿದರು.
 ವಿಷಯ ತಿಳಿದ ಅರುಣನ ಪೋಷಕರು ಕಾಲೇಜಿಗೆ ಬಂದಾಗ, ಹಲ್ಲೆನಡೆಸಿದವರು ಕಾಲ್ಕಿತ್ತಿದ್ದರು.
 ಹಲ್ಲೆಕೋರ ವಿದ್ಯಾರ್ಥಿಗಳು ಕಾಲೇಜಿಗೆ ಹತ್ತಿರದಲ್ಲೆ ಇದ್ದ ಹಾಸ್ಟೆಲ್‌ನಲ್ಲಿರುವ ಮಾಹಿತಿ ಮೇರೆಗೆ ತೆರಳಿ, ಹಲ್ಲೆಕೋರ ವಿದ್ಯಾರ್ಥಿಗಳಿಗೆ ಸರಿಯಾಗಿ ಬುದ್ಧಿಹೇಳಿ ಸ್ಥಳಕ್ಕಾಗಮಿಸಿದ ಪೊಲೀಸರ ವಶಕ್ಕೆ ನೀಡಿದರು.
ನಂತರ ಮುಖಂಡರಾದ ಮಂಜುನಾಥ, ರಮೇಶ, ಮಂಜಪ್ಪ, ಬಾಬು, ಸಿಡಿಸಿ ಸದಸ್ಯ ಗಂಗಾಧರ, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಇತರರು, ಪ್ರಾಚಾರ್ಯ ಪ್ರೊ. ನರಸಿಂಹನ್ ಕೊಠಡಿಗೆ
ತೆರಳಿ, ಘಟನೆಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಕಾಲೇಜಿನಲ್ಲಿ ತಿಂಗಳೊಂದಕ್ಕೆ ಅದು ಇದು ಹೆಸರಿನಲ್ಲಿ ಮನಬಂದಂತೆ ಕಾರ್ಯಕ್ರಮ ನಡೆಸಲು ಅನುಮತಿ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ.
 ಅಶ್ಲೀಲ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಪವಿತ್ರ ಕಾಲೇಜಿನ ಆವರಣದಲ್ಲಿ ಆರ್ಕೆಸ್ಟ್ರ ಹೆಸರಿನಲ್ಲಿ ನಂಗನಾಚ್ ನಡೆಯುತ್ತಿದೆ. ವಿದ್ಯಾರ್ಥಿನಿಯರ ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳಿಸಲು ಯೋಚಿಸುವಂತಾಗಿದೆ. ಕೂಡಲೆ ಅಗತ್ಯ ಕ್ರಮಕೈಗೊಳ್ಳುವಂತೆ, ಹಲ್ಲೆಕೋರ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತ್ತುಪಡಿಸುವಂತೆ ಆಗ್ರಹಿಸಿದರು.
ಮನವಿಗೆ ಸ್ಪಂದನೆ: ಮುಖಂಡರ ಮನವಿಗೆ ಸ್ಪಂದಿಸಿದ ಪ್ರಾಚಾರ್ಯ ನರಸಿಂಹನ್, ಹಿಂದಿನ ಪ್ರಾಚಾರ್ಯ ವಿಶ್ವನಾಥ್ ನೀಡಿದ ಅನುಮತಿಯಿಂದಾಗಿ ಈ ಅವ್ಯವಸ್ಥೆ ಅಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಗಳಿಗೆ ಆಸ್ಪದ ನೀಡುವುದಿಲ್ಲ. ಹಲ್ಲೆಕೋರ ವಿದ್ಯಾರ್ಥಿಗಳ ಬಗ್ಗೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement