'ಕ್ರಿಯಾಶೀಲನಾಗಿ ಕಾರ್ಯನಿರ್ವಹಿಸುವೆ'
ಹುಳಿಯಾರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಜಯಗಳಿಸುವಂತೆ ಮಾಡಿದರೆ ನಾನು ಸಾಮಾನ್ಯ ಜನಪ್ರತಿನಿಧಿಯಂತೆ ರಾಷ್ಟ್ರದ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿ ಚುನಾವಣಾ ಪ್ರಚಾರ ಕೈಗೊಂಡು ಇದೇ ಮೊದಲ ಬಾರಿಗೆ ಹುಳಿಯಾರಿಗೆ ಆಗಮಿಸಿದ ಅವರು ಎಪಿಎಂಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವೈ.ಸಿ. ಸಿದ್ರಾಮಯ್ಯ ಅವರ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳ ಪಾಲಿನ ಪ್ರತಿಷ್ಠೆಯ ಕಣವಾಗಿದ್ದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಪಕ್ಷ ಕೈಗೊಂಡಿರುವಂತಹ ಯೋಜನೆಗಳು, ಅದರಿಂದಾಗಿರುವ ಅನುಕೂಲಗಳನ್ನು ಮತದಾರರಿಗೆ ತಿಳಿಸುವಲ್ಲಿ ಮುಂದಾಗಬೇಕು. ಹಾಗಾದಾಗ ಮಾತ್ರ ಗೆಲವು ಸಾಧ್ಯವೆಂದರು. ಅಂತೆಯೇ ಕೇಂದ್ರದಲ್ಲಿ ಕಾಂಗ್ರೆಸ್ ತನ್ನ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ದೇಶಾದ್ಯಂತ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಗೊಳಿಸಿಕೊಂಡು ಬಂದಿರುವುದರಿಂದ ಈ ಸಲ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವೂ ವಿಧಾನಸಭಾ ಚುನಾವಣೆಗೂ ಮುನ್ನ ಕೊಟ್ಟ ಭರವಸೆಗಳ ಪೈಕಿ 168 ನ್ನು ಈಗಾಗಲೇ ಈಡೇರಿಸಿದೆ ಎಂದರು.