ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾಡೋಜ ನಾಗೇಗೌಡ ಜಾನಪದ ಕ್ಷೇತ್ರದ ಜೀವಧ್ವನಿ

Srinivasa Murthy VN
Updated On : 10 Mar 2014, 1:51 am

ಕರ್ನಾಟಕ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಅಭಿಮತ
ಶಿರಾ: ನಾಡೋಜ ಡಾ.ಎಚ್.ಎಲ್. ನಾಗೇಗೌಡರು ಜಾನಪದ ಕ್ಷೇತ್ರದ ಜೀವಧ್ವನಿ. ಒಬ್ಬ ಐಎಎಸ್ ಅಧಿಕಾರಿಯಾಗಿ, ಜನಪದ ಕಲಾವಿದರಲ್ಲಿ ದೈವತ್ವ ಕಂಡು, ಅವರಿಗೆಲ್ಲಾ ಒಂದು ಕಲಾಭೂಮಿಕೆಯನ್ನು ನಿರ್ಮಿಸಿದರು. ಅವರು ಗೌರವ ಪುರಸ್ಕಾರ ಒದಗಿಸಿದ ರೀತಿ ಮಹತ್ವದ್ದು ಎಂದು ಕರ್ನಾಟಕ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಜಾನಪದ ಪರಿಷತ್ತು ಶಿರಾ ತಾಲೂಕು ಘಟಕದ ವತಿಯಿಂದ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾಡೋಜ ಡಾ.ಎಚ್.ಎಲ್. ನಾಗೇಗೌಡ ಅವರ ಜನ್ಮ  ಶತಮಾನೋತ್ಸವ ಕಾರ್ಯಕ್ರಮಗಳ ವಾರ್ಷಿಕ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು.  
ಇಂದು ಜಾನಪದ ಕ್ಷೇತ್ರ ಶ್ರೀಮಂತವಾಗಿ ಬೆಳೆದಿದೆ. ಹತ್ತಾರು ಸಂಘ ಸಂಸ್ಥೆ, ಸರ್ಕಾರ ಜಾನಪದದ ಪರವಾಗಿ ಕೆಲಸ ಮಾಡುತ್ತಿದೆ. ಆದರೆ ಜಾನಪದ ಒಂದು ಕಲಾ ಕ್ಷೇತ್ರ  ಎಂದು ತಿಳಿಯದೆ, ಅದರ ಬಗೆಗೆ ಚಿಂತಿಸದೇ ಇದ್ದ ಕಾಲಕ್ಕೆ ನಾಗೇಗೌಡರು ಜಾನಪದ ಸಂಬಂಧಿ ಸಂಘಟನೆ, ಕಲಾ ಸಂಸ್ಥೆಗಳನ್ನು ಕಟ್ಟಿದ್ದು, ಬಹುದೊಡ್ಡ ಆಲೋಚನೆ ಎಂದರು.
ಜಾನಪದ ತವರು: ತುಮಕೂರು ಜಿಲ್ಲೆ ವಿಶೇಷವಾಗಿ ಶಿರಾ ತಾಲೂಕು ಜಾನಪದದ ತವರು. ಇಂಥ ನೆಲದಲ್ಲಿ ಜಾನಪದ ಪರಿಷತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದನ್ನು ಹಲವು ವಿದ್ವಾಂಸರು ಮಾಧ್ಯಮಗಳು ಪ್ರತಿಕ್ರಿಯಿಸಿರುವುದು ಹೆಮ್ಮೆ ಎನಿಸುತ್ತದೆ. ಯಾವುದೇ ಅನುದಾನ ಸಹಾಯ  ಇಲ್ಲದಿದ್ದರೂ ನೈತಿಕತೆಯಿಂದಲೇ ಜಾನಪದ ಕಲೆಯ ಸಂಘಟನೆಯಲ್ಲಿ ಇಲ್ಲಿನ ಯುವಕರು ತೊಡಗಿರುವುದು  ಜಾನಪದ ಕಲಾಲೋಕ ಮೆಚ್ಚುವ ಕೆಲಸ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement