ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಾವು ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಸಿಕ್ಕಿದ್ದೇವೆ

Srinivasa Murthy VN
Updated On : 10 Mar 2014, 1:49 am

ತುಮಕೂರು: ನಾವು ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಸಿಕ್ಕಿದ್ದೇವೆ. ಸಾಮಾಜಿಕ ಸಂಬಂಧಗಳು ಕಳೆದುಹೋಗುತ್ತಿವೆ. ಮೊಬೈಲ್, ಸ್ಮಾರ್ಟ್  ಫೋನ್‌ಗಳು ಆ ಸ್ಥಾನವನ್ನು ಆಕ್ರಮಿಸಿವೆ. ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ವಿಷಾದಿಸಿದರು.
ಅವರು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ತುಮಕೂರು ಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಆವಿಷ್ಕಾರವು ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿಯೆತ್ತುತ್ತಿದೆ. ಅವರ ಸಂಘಟಿಸುತ್ತಿರುವ ಜನೋತ್ಸವಗಳು ಆ ಧ್ವನಿಗಳಾಗಿವೆ ಎಂದರು.
ತಾವು ನಿರ್ದೇಶಿಸಿದ ಕೊಡಗಿನ ಗೌರಮ್ಮನವರ ಕಥೆಗಳನ್ನು ಆಧರಿಸಿದ ಟೆಲಿಫಿಲ್ಮ್‌ಗಳನ್ನು ನೆನಪಿಸಿಕೊಳ್ಳುತ್ತಾ, ಜನರ ಮನಸಿನಿಂದ ಮರೆಯಾಗಿರುವ ಕೊಡಗಿನ ಗೌರಮ್ಮನಿಗೆ ಜನೋತ್ಸವವನ್ನು ಸಮರ್ಪಿಸಿರುವುದು ಶ್ಲಾಘನೀಯ ಎಂದರು.
ಆಕೆ ಮೂವ್ವತ್ತರ ದಶಕದಲ್ಲೇ ಕ್ರಾಂತಿಕಾರಕ ಸಾಹಿತ್ಯ ರಚಿಸಿದವರು. ವೇಶ್ಯಾವಾಟಿಕೆ, ವಿಧವೆಯರ ಸಮಸ್ಯೆಗಳ ಕುರಿತು ಬಹಳ ಪ್ರಗತಿಪರವಾಗಿ ಕಥೆಗಳನ್ನು ಬರೆದರು ಎಂದು ಹೇಳಿದರು.
ಹಾಗೆಯೇ ಅವರನ್ನು ನೆನಪಿಸಿಕೊಳ್ಳುವ ನೆಪದಲ್ಲಿ ಕೊಡಗಿನ ಗೌರಮ್ಮನವರ ಸಾಹಿತ್ಯದ ಓದು ಮತ್ತು ವಿಮರ್ಶೆಗಳು ನಡೆಯಲಿ ಎಂದು ಆಶಿಸಿದರು.
ಶಿಕ್ಷಣ ಚಳವಳಿಯನ್ನು ಮುನ್ನಡೆಸುತ್ತಿರುವ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಕಾರ್ಯದರ್ಶಿ ಕೆ.ಉಮಾರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೇ ಸಾಹಿತ್ಯ, ಸಂಸ್ಕೃತಿಗಳ ಅಧ್ಯಯನಕ್ಕೆ ಒತ್ತು ಕೊಡುತ್ತಿಲ್ಲ. ಹಾಗಾಗಿ ಸೂಕ್ಷ್ಮ ಭಾವನೆಗಳು, ಉದಾತ್ತ ಮೌಲ್ಯಪ್ರಜ್ಞೆಗಳು ಕಾಣೆಯಾಗುತ್ತಿವೆ. ಆದ್ದರಿಂದ ಸಂಸ್ಕೃತಿ ಅಧಃಪತನಕ್ಕೀಡಾಗುತ್ತಿರುವ ಸಂದರ್ಭದಲ್ಲಿ ಜನೋತ್ಸವಗಳು ಉತ್ತಮ ಸಂಸ್ಕೃತಿಯನ್ನು ಬೆಳೆಸುವಲ್ಲಿ, ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಆವಿಷ್ಕಾರ ಜಿಲ್ಲಾ ಅಧ್ಯಕ್ಷ ಎಸ್.ಎನ್. ಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದರು. ಜನೋತ್ಸವದ ಆರಂಭಕ್ಕೆ ಮುನ್ನ ಕಲೆ, ಸಾಹಿತ್ಯ, ಸಂಸ್ಕೃತಿಗಳ ಕುರಿತು ಮೇರು ವ್ಯಕ್ತಿತ್ವಗಳ ನುಡಿಗಳನ್ನು ವಿನ್ಯಾಸಗೊಳಿಸಿ ಅನುಗೊಳಿಸಿದ್ದ ಸೂಕ್ತಿ ಹಾಗೂ ಕಲಾ ಪ್ರದರ್ಶನವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಪ್ರಭು ಹರಸೂರು ಉದ್ಘಾಟಿಸಿದರು.
ಆಂದೋಲನ ನಡೆಯಲಿ: ಈ ಸಂದರ್ಭದಲ್ಲಿ ಮಾತನಾಡುತ್ತಾ ತುಮಕೂರಿಗೊಂದು ಕಲಾ ಪ್ರದರ್ಶನಕ್ಕೆ ಸುಸಜ್ಜಿತ ಗ್ಯಾಲರಿಯ ಅವಶ್ಯಕತೆಯಿದೆ ಎಂದು ಹೇಳಿದರು. ಆ ದಿಕ್ಕಿನಲ್ಲಿ ಆವಿಷ್ಕಾರದ ನೇತೃತ್ವದಲ್ಲಿ ಆಂದೋಲನವೇ ಆಗಬೇಕೆಂದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ತಂಡದ ಕಂಸಾಳೆ ನೃತ್ಯವನ್ನು ಉಸಿರು ಬಿಗಿಹಿಡಿದು ವೀಕ್ಷಿಸಿದರು.  ಅವರ ನೃತ್ಯ ಸಂಯೋಜನೆ ಹಾಗೂ ನೃತ್ಯ ವಿನ್ಯಾಸಗಳು ಗಮನ ಸೆಳೆದವು. ಕುವೆಂಪು ಅವರ ಸಣ್ಣ ಕಥೆ ಆಧಾರಿತ  ಧನ್ವಂತರಿಯ ಚಿಕಿತ್ಸೆ  ನಾಟಕವು ಬಡವರ ಹಸಿವಿನ ನರಳುವಿಕೆ ಅದೆಷ್ಟು ಘೋರ ಎನ್ನವುದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ದೇವರಾಜ್ ಮೆಳೆಹಳ್ಳಿ ನಾಟಕ ರೂಪಾಂತರಿಸಿ ನಿರ್ದೇಶಿಸಿದ ನಾಟಕ ಭೂಮಿಯ ಎಲ್ಲಾ ಭಾರವನ್ನು ತನ್ನೆದೆಯ ಮೇಲೆ ಬಡಜನತೆ ಹೊತ್ತು ನಿಂತಿದ್ದಾರೆ. ಅದನ್ನು ಇಳಿಸದೆ ಲೋಕಕ್ಕೆ ಮುಕ್ತಿಯಿಲ್ಲ ಎನ್ನುವ ಸಂದೇಶವನ್ನು ನಾಟಕದ ಮೂಲಕ ತೆರೆದಿಟ್ಟಿತು.
ಯಶಸ್ವಿ ಪ್ರತರ್ಶನ: ಕೊಡಗಿನ ಗೌರಮ್ಮನವರನ್ನು ನೆನಪಿಸಿಕೊಂಡ ಈ ಜನೋತ್ಸವದಲ್ಲಿ ಅವರ ಕಥೆಯನ್ನೇ ಆಧರಿಸಿ  ಅಪರಾಧಿ ಯಾರು  ನಾಟಕವನ್ನು ತುಮಕೂರಿನ  ಅಂಕುರ  ತಂಡದವರು ಯಶಸ್ವಿಯಾಗಿ ಪ್ರದರ್ಶಿಸಿದರು. ಎರಡನೆಯ ದಿನದ ಸಮಾರೋಪದಲ್ಲಿ ಆವಿಷ್ಕಾರದ ರಾಜ್ಯ ಸಂಚಾಲಕ ಡಾ. ಬಿ.ಆರ್. ಮಂಜುನಾಥ್ ರಂಗಭೂಮಿಯ ಅಗತ್ಯ ಮತ್ತು ಅದರ ಮೂಲಕ ನಡೆಯುವ ಸಾಂಸ್ಕೃತಿಕ ಆಂದೋಲನದ ಕುರಿತು ಮಾತನಾಡಿದರು.
 ರಂಗಭೂಮಿಯು ಸಾಮಾಜಿಕ ಅವಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ಬೀದಿನಾಟಕಗಳು ನೇರವಾಗಿ ತಮ್ಮ ಉದ್ದೇಶವನ್ನು ಸಾರಿದರೆ ರಂಗನಾಟಕಗಳು ಸೂಕ್ಷ್ಮ ಮತ್ತು ಸಂಕೀರ್ಣಣವಾದ ಸಮಸ್ಯೆಗಳನ್ನೂ ಚರ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement