ಸಾಯಿ ಅಮೃತಧಾರೆ ಕಾರ್ಯಕ್ರಮ
ತುಮಕೂರು: ಜಗತ್ತಿನ ಅಂಧಕಾರವನ್ನು ನೀಗಿಸುವ ಶಕ್ತಿ ಶಿರಡಿ ಸಾಯಿಬಾಬಾ ಅವರಿಗೆ ಇದೆ ಎಂದು ಮಹಾನಗರಪಾಲಿಕೆ ಮೇಯರ್ ಗೀತಾ ರುದ್ರೇಶ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ತುಮಕೂರಿನ ಶ್ರೀ ಸಾಯಿಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಯನಗರ ಪೂರ್ವ ಬಡಾವಣೆಯ ಶಿರಡಿ ಸಾಯಿಮಂದಿರದಲ್ಲಿ ಆಯೋಜಿಸಲಾಗಿದ್ದ ಸಾಯಿ ಅಮೃತಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
16 ವರ್ಷದ ಯುವಕನಾಗಿ ಶಿರಡಿ ಗ್ರಾಮದಲ್ಲಿ ಕಾಣಿಸಿಕೊಂಡ ಸಾಯಿಬಾಬಾ ಆ ಗ್ರಾಮದಲ್ಲಿಯೇ ಇದ್ದು ಗೀತೆ, ಕುರಾನ್, ಬೈಬಲ್‌ಗಳ ಸಮನ್ವಯವನ್ನು ಭಕ್ತರಿಗೆ ಸಾರಿದ್ದೇ ಅಲ್ಲದೇ ವಿಶಿಷ್ಟ ಲೀಲೆಗಳಿಂದ ಭಕ್ತರ ಯೋಗಕ್ಷೇವುವನ್ನು ವಿಚಾರಿಸಿದರು ಎಂದರು. ಪುಣ್ಯಭೂಮಿಯ ಭರತಖಂಡದಲ್ಲಿ ರಾಮ-ರಹೀಮ ಒಬ್ಬನೇ ಎಂಬ ಅಂಶವನ್ನು ಬೋಧಿಸಿ ಜಗತ್ತಿನ ಜನರೆಲ್ಲಾ ಸೌಹಾರ್ದತೆಯಿಂದ ಬಾಳುವಂತೆ ಕರೆ ಕೊಟ್ಟರು ಎಂದರು. ಟ್ರಸ್ಟ್‌ನ ಸಂಸ್ಥಾಪಕ ಎಂ.ಹೆಚ್. ಗೋಪಾಲ್ ಮಾತನಾಡಿ ಸಾಯಿಮಂದಿರದಲ್ಲಿ ನಿರ್ಮಿಸಲಾಗುತ್ತಿರುವ ಸಾಯಿ ವೃದ್ಧಾಶ್ರಮ, ಅನ್ನದಾಸೋಹ ಭವನ ಹಾಗೂ ಧ್ಯಾನ ಮಂದಿರಗಳ ಕಟ್ಟಡಕ್ಕೆ ತನು-ಮನ-ಧನ ಸಹಕಾರ ನೀಡುವಂತೆ ಕೋರಿದರು. ಕಾರ್ಯಕ್ರಮದ ಅಂಗವಾಗಿ ಸಾಯಿ ಹೋಮ, ಸಾಯಿ ಸತ್ಯನಾರಾಯಣಪೂಜೆ ನಡೆಸಲಾಯಿತು. ಸಂಜೆ ನಡೆದ ಸಾಯಿ ಸತ್ಸಂಗ ಕಾರ್ಯಕ್ರಮದಲ್ಲಿ ತ್ರಿನೇತ್ರ ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ರೂಪಕ ಆಯೋಜಿಸಲಾಗಿತ್ತು. ಎಸ್. ಮಹದೇವಯ್ಯ ನವರ ನೇತೃತ್ವದಲ್ಲಿ ವಿಶೇಷ ಭಜನೆ ನಡೆಸಲಾಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ತುಮಕೂರಿನ ತ್ವರಿತ ನ್ಯಾಯಾಧೀಶರಾದ ಲಾವಣ್ಯಲತಾ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಲಕ್ಷ್ಮಣ್, ಆರ್.ಎಸ್. ವೀರಪ್ಪದೇವರು, ಪ್ರವೀಣ್ ಶಿಂಧೆ, ಮಹಾಲಕ್ಷ್ಮೀ, ಪದ್ಮಾ ಇತರರು ಇದ್ದರು.