ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರಿಗಾಗಿ ದಿಢೀರ್ ರಸ್ತೆತಡೆ

Srinivasa Murthy VN
Updated On : 10 Mar 2014, 11:42 am

ಕುಣಿಗಲ್: ಕುಡಿಯುವ ನೀರಿಗೆ ಆಗ್ರಹಿಸಿ ದಿಢೀರ್ ರಸ್ತೆತಡೆ ನಡೆಸಿದ ಗ್ರಾಮಸ್ಥರನ್ನು ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿ ಚದುರಿಸಿದ ಘಟನೆ ತಾಲೂಕಿನ ಬಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಹೊನ್ನೇನಹಳ್ಳಿ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಈ ಗ್ರಾಮಕ್ಕೆ ನೀರು ಪೂರೈಸಲು ಅಳವಡಿಸಲಾಗಿದ್ದ ಬೋರ್‌ವೆಲ್‌ನಲ್ಲಿ ನೀರು ಕೆಳಗೆ ಹೋದ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದಲೂ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿತ್ತು. ಈ ಬಗ್ಗೆ ಗ್ರಾಮಪಂಚಾಯಿತಿ ಪಿಡಿಒ, ಅಧ್ಯಕ್ಷರಿಗೆ ಹಲವು ಬಾರಿ ಮನವಿ ನೀಡಿದ್ದರೂ, ಅವರ ನಿರ್ಲಕ್ಷ್ಯದಿಂದ ಸಮರ್ಪಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಾಗದ ಕಾರಣ ಬೇಸತ್ತ ಗ್ರಾಮದ ಕೆಲಯುವಕರು, ಮಹಿಳೆಯರನ್ನು ಕರೆತಂದು ಪ್ರತಿಭಟಿಸಿದರು.
ಪ್ರಯಾಣಿಕರ ಪರದಾಟ: ಹೊನ್ನೇನಹಳ್ಳಿ ಗ್ರಾಮದಲ್ಲೆ ಹಾದುಹೋಗಿದ್ದ ರಾಜ್ಯಹೆದ್ದಾರಿ 33ರಲ್ಲಿ ದಿಢೀರ್ ರಸ್ತೆತಡೆ ಪ್ರಾರಂಭಿಸಿದರು. ಇದರಿಂದಾಗಿ ಕುಣಿಗಲ್ ಮೂಲಕ ತುಮಕೂರಿಗೆ ತೆರಳುವ, ತುಮಕೂರಿನಿಂದ ಪಟ್ಟಣದ ಮೂಲಕ ಮದ್ದೂರು ಇತರ ಕಡೆ ತೆರಳುವ ಹಲವು ಮಾರ್ಗಗಳ ವಾಹನ ಸಂಚಾರ ವ್ಯತ್ಯಯವಾಗಿ, ಪ್ರಯಾಣಿಕರು ಪರದಾಡುವಂತಾಯಿತು. ಗ್ರಾಮಸ್ಥರ ರಸ್ತೆತಡೆ ಬಿಸಿ ಈ ಮಾರ್ಗದಲ್ಲಿ ಕಾರ್ಯ ನಿರ್ಮಿತ್ತ  ತುಮಕೂರಿಗೆ ತೆರಳುತ್ತಿದ್ದ ಪಿಎಸೈ ಗುರುಪ್ರಸಾದ್ ಅವರಿಗೂ ತಟ್ಟಿತು.
ಯಾವುದೇ ಮುನ್ಸೂಚನೆ ಇಲ್ಲದೆ ನಿಯಮಬಾಹಿರವಾಗಿ ರಸ್ತೆತಡೆ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ, ರಸ್ತೆತಡೆ ತೆರವುಗೊಳಿಸುವಂತೆ ಸೂಚಿಸಿದರು. ಈ ಹಂತದಲ್ಲಿ ಗ್ರಾಮಸ್ಥರಿಗೂ, ಪೊಲೀಸರಿಗೂ ವಾಗ್ವಾದ ನಡೆದು ಪರಿಸ್ಥಿತಿ ಗೊಂದಲಮಯವಾಯಿತಲ್ಲದೆ, ಅರ್ಧಗಂಟೆಗೂ ಹೆಚ್ಚುಕಾಲ ನಡೆದ ರಸ್ತೆತಡೆಯ ಪರಿಣಾಮ ಎರಡೂ ಬದಿವಾಹನಗಳು ಸಾಲುಗಟ್ಟಿ ಪ್ರಯಾಣಿಕರು ಪರದಾಡುವಂತಾಯಿತು.
ವಿಧಿ ಇಲ್ಲದೆ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ, ರಸ್ತೆತಡೆ ನಡೆಸುತ್ತಿದ್ದ ಗ್ರಾಮಸ್ಥರನ್ನು ಚದುರಿಸಿ, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಜ್ಞಾನಾನಂದ, ಬೈರಯ್ಯ, ಸುರೇಶ್ ಇತರರನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬೆಸ್ಕಾಂ ಸಿಬ್ಬಂದಿಯಿಂದ ಠಾಣೆಗೆ ದೂರು
ಕುಣಿಗಲ್: ವಿದ್ಯುತ್ ಮಾರ್ಗವನ್ನು ಮೇಲಾಧಿಕಾರಿಗಳ ಆದೇಶದಂತೆ ಬದಲಾವಣೆ ಮಾಡಿದ್ದಕ್ಕೆ, ಬೆಸ್ಕಾಂ ಜೆಇಗೆ ಗ್ರಾಮಸ್ಥನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥನ ವಿರುದ್ಧ ಬೆಸ್ಕಾಂ ಸಿಬ್ಬಂದಿ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ. ಭಕ್ತರಹಳ್ಳಿ ಗ್ರಾಮದಲ್ಲಿ ಎಲ್.ಟಿ. ಲೈನನ್ನು ರಂಗಸ್ವಾಮಿಯವರ ಜಮೀನಿಗೆ ಸಂಪರ್ಕ ಕಲ್ಪಿಸಲು,ಅರ್ಜಿ ಬಂದಮೇರೆಗೆ ಜೆಇ ಶ್ರೀನಿವಾಸ್ ಇಲಾಖೆ ನಿಯಮಾನುಸಾರ ಅಂದಾಜುಪಟ್ಟಿ ತಯಾರಿಸಿ, ಹಣ ಪಾವತಿಸಿಕೊಂಡು, ಬೆಸ್ಕಾಂ ಎಇಇಯವರ ಆದೇಶದ ಮೇರೆಗೆ ರಂಗಸ್ವಾಮಿಯವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರವಾನಗಿ ಹೊಂದಿದ ಗುತ್ತಿಗೆದಾರರ ಮೂಲಕ ಎಲ್.ಟಿ. ಮಾರ್ಗವನ್ನು ಸ್ಥಳಾಂತರಿಸಲಾಗಿತ್ತು. ಆದರೆ ಇದೇ ಗ್ರಾಮದ ಪಾಂಡುರಂಗ ಎಂಬಾತ, ಎಲ್.ಟಿ.ಲೈನ್ ಬದಲಾಯಿಸಿದ್ದರ ಬಗ್ಗೆ ದಿನವೂ ಮೊಬೈಲ್ ಮೂಲಕ ಬೆಸ್ಕಾಂ ಜೆಇಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದರು.ಮೊಬೈಲ್ ಫೋನ್ ಮೂಲಕ ನಿಂದಿಸಿದ್ದಲ್ಲದೆ ಇದೇ ಮಾಹೆಯ 7 ರಂದು  ಬೆಸ್ಕಾಂ ಕಚೇರಿ ಬಳಿ ಆಗಮಿಸಿದ ಪಾಂಡುರಂಗ, ಜೆಇ ಶ್ರೀನಿವಾಸ್‌ರೊಂದಿಗೆ ವಾಗ್ವಾದಕ್ಕೆ ಇಳಿದು, ಲೈನ್ ಬದಲಾವಣೆ ಮಾಡಿರುವ ಬಗ್ಗೆ ಆಕ್ಷೇಪಿಸಿದರು. ತಮ್ಮನ್ನು ಕೇಳದೆ ಲೈನ್ ಬದಲಾವಣೆ ಮಾಡಿದ್ದೀರೆಂದು ನಿಂದಿಸಿ, ಸ್ಥಳದಲ್ಲಿದ್ದ ಕಬ್ಬಿಣದ ರಾಡ್‌ನಿಂದ ಹಲ್ಲೆಗೆ ಮುಂದಾಗಿದ್ದು, ಸ್ಥಳದಲ್ಲಿದ್ದ ಇತರರು ಮಧ್ಯಪ್ರವೇಶಿಸಿದರೂ, ಮುನ್ನುಗ್ಗಿ ಜೆಇ ಮೇಲೆ ಹಲ್ಲೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಜೆಇ ಶ್ರೀನಿವಾಸ್, ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement