ಪಠ್ಯೇತರ ಚಟುವಟಿಕೆ ಸಮಾಜಮುಖಿಯಾಗಲಿ
ಮಧುಗಿರಿ: ಪಠ್ಯೇತರ ಚಟುವಟಿಕೆ ಸಮಾಜ ಮುಖಿಯಾಗಲಿ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಮಧುಗಿರಿ ಟಿ.ವಿ.ವಿ.ಕಾಲೇಜು ವತಿಯಿಂದ ಕಸಬಾ ಬಿಜವರ ಗ್ರಾಮದ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಆವರಣದ ಸುತ್ತ ಮುತ್ತ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಹೃದಯಗಳು ಹಳ್ಳಿಗಳಲ್ಲಿದೆ. ಆರೋಗ್ಯಕರ ವಾತಾವರಣವಿದ್ದಾಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ. ಸೇವಾ ಮನೋಭಾವ ಚಿಕ್ಕಂದಿನಿಂದಲೇ
ಅಂತಃಕರಣದಲ್ಲಿ ಅರಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ವಿಶೇಷ ಶಿಬಿರ ಸಹಕಾರಿ ಎಂದ ಅವರು ಲಿಂಗ ತಾರತಮ್ಯವಿಲ್ಲದೆ ಎಲ್ಲರಲ್ಲಿಯೂ ಪ್ರೀತಿ, ವಿಶ್ವಾಸ ಸಹಕಾರ ಮನೋಭಾವ ಬೆಳಸಿಕೊಳ್ಳಲು ನೆರವಾಗಲಿದೆ. ಯೋಜನಾ ಕಾರ್ಯಗಳು ಕ್ರಿಯಾಶೀಲವಾದಾಗ ಮಾತ್ರ ಎಲ್ಲೆಡೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೊ.ಸಿ.ಕೃಷ್ಣಪ್ಪ ಯುವ ಜನಾಂಗ ಈ ದೇಶದ ಅಮೂಲ್ಯ ಸಂಪತ್ತು, ಅದು ದೇಶದ ಪ್ರಗತಿಗೆ, ಸಮಾಜದ ಅಭಿವೃದ್ಧಿಗೆ ಸದ್ಬಳಕೆಯಾಗಬೇಕು. ದೇಶದ ಬದಲಾವಣೆಗೆ ಯುವ ಜನ ಕಾಯ, ವಾಚ, ಮನಸಾ ಪರಿಶುದ್ಧ ಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಬಿಜವರ ಗ್ರಾ.ಪಂ. ಸದಸ್ಯ ಗಂಗಹನುಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷೆ ಸುನಂದ ಸಿದ್ದಪ್ಪ, ಸದಸ್ಯೆ ಮಹಾಲಕ್ಷ್ಮಮ್ಮ, ಕಾಲೇಜು ಆಡಳಿತಾಧಿಕಾರಿ ಬಿ.ಎಂ. ಪ್ರೇಮನಾಥ್, ಪ್ರಾಂಶುಪಾಲ ಡಾ.ಪಿ. ಹನುಮಂತರಾಯ, ಪ್ರೊ.ಎಲ್. ಮಣಿಗಯ್ಯ,ಪ್ರೊ.ರೇವಯ್ಯ, ಶಿಬಿರಾಧಿಕಾರಿ ಬಿ.ಎಸ್. ರಾಜಣ್ಣ, ಮುಖಂಡ ಎಂ.ವಿ. ಮೂಡ್ಲಗಿರೀಶ್, ಬೆಸ್ಕಾಂ ಸಂಜೀವಕುಮಾರ್, ಗಿರೀಶ್,ಶ್ರೀನಿವಾಸರೆಡ್ಡಿ, ವೀರಭದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು. ನಂತರ ಶಿಬಿರಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆ ಪಡೆಯಿತು. ರಾಜಣ್ಣ ಸ್ವಾಗತಿಸಿ ವಂದಿಸಿದರು.