ಮಹಿಳೆಯರು ಶೈಕ್ಷಣಿಕವಾಗಿ ಪ್ರಗತಿ ಹೊಂದಲಿ
ಗುಬ್ಬಿ: ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಚೈತಾಲಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರಯುವ ವ್ಯವಹಾರ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ತುಮಕೂರು, ನಾಗರತ್ನ ಮಹಿಳಾ ಸಮಾಜ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಧುನಿಕ ಜಗತ್ತಿನಲ್ಲಿ ಮಹಿಳೆ ಎಲ್ಲಾ ವಲಯಗಳಲ್ಲಿ ತಮ್ಮದೆ ಆದ ಸೇವೆಯನ್ನು ಸಲ್ಲಿಸುತ್ತಿದ್ದಾಳೆ ಎಂದು ಅಭಿಪ್ರಾಯ ಪಟ್ಟರು.
ಉಪನ್ಯಾಸಕ ಡಾ. ಗೋವಿಂದರಾಯ ಮಾತನಾಡಿ ಮಹಿಳೆಗೆ ಸಮಾನತೆ ನೀಡಿದರೆ ಮಾತ್ರ ಅವಳು ಸಮಾಜಮುಖಿಯಾಗಿ ಬದುಕಲು ಸಾಧ್ಯ. ಭಾರತದಂತಹ ದೇಶದಲ್ಲಿ ಹೆಣ್ಣಿಗೆ ಅಭೂತಪೂರ್ವ ಗೌರವವನ್ನು ನೀಡಲಾಗುತ್ತಿದೆ. ಆದರೆ ಅವರ ಮೇಲೆ ನಡೆಯುತ್ತಿರುವ ಕೆಲವು ಕಿಡಿಗೇಡಿಗಳ ಹಾವಳಿಯಿಂದಾಗಿ ಇಂದು ಇಡಿ ಪುರುಷ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದುವ ಮೂಲಕ ತಮ್ಮ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟುವತ್ತ ಮುಂದಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷೆತೆ ವಹಿಸಿದ್ದ ಪಾಂಶುಪಾಲ ಪ್ರೊ. ವೇಣುಗೋಪಾಲ್ ಮಾತನಾಡಿ ಮಹಿಳಾ ದಿನಾಚರಣೆಯ ಮಹತ್ವವನ್ನು ಇಂದು ಕೇವಲ ತಿಳಿದವರಿಗೆ, ಬುದ್ಧಿ ಜೀವಿಗಳಿಗೆ, ನಗರದಲ್ಲಿ ವಾಸಮಾಡುವವರಿಗೆ ಮಾತ್ರ ತಿಳಿಸದೆ ಗ್ರಾಮೀಣ ಭಾಗದ ಮಹಿಳೆಯರಿಗೆ ಇದರ ಬಗ್ಗೆ ಅರಿವು ಮೂಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
18ರಿಂದ ದಂಡಿನಮಾರಮ್ಮ ಜಾತ್ರೆ ಮಹೋತ್ಸವ
ಮಧುಗಿರಿ: ಮಧುಗಿರಿ ಇತಿಹಾಸ ಪ್ರಸಿದ್ಧ ಶ್ರೀ ದಂಡಿನಮಾರಮ್ಮ ಜಾತ್ರೆ ಮಹೋತ್ಸವ ಮಾ.18 ರಿಂದ ಪ್ರಾರಂಭವಾಗಿ ಮಾ.28ರವರೆಗೆ ಸಡಗರ-ಸಂಭ್ರಮದಿಂದ ಅದ್ಧೂರಿಯಾಗಿ ಸರ್ಕಾರದ ವತಿಯಿಂದ ನಡೆಯಲಿದೆ.
ಮಾ.18ರಂದು ಜಾತ್ರೆ ಪ್ರಾರಂಭ, ಪಂಚ ಕಳಸ ಸ್ಥಾಪನೆ-ಹಳ್ಳಿಕಾರರಿಂದ, ಗೌಡರಿಂದ ಬಾನ, ಮಾ.19-20ರಂದು ಸಾರ್ವಜನಿಕವಾಗಿ ಗ್ರಾಮಸ್ಥರ ಆರತಿ-ಗುಗ್ಗರಿ ಗಾಡಿಗಳ ಸೇವೆ.
21ರಂದು ದೇವಸ್ಥಾನದ ವತಿಯಿಂದ ರಥೋತ್ಸವ, 22ರಂದು ಹಳ್ಳಿಕಾರರಿಂದ ಉಯ್ಯಾಲೆ ಉತ್ಸವ, 23ರಂದು ಕುಂಚಿಟಿಗ ಒಕ್ಕಲಿಗರಿಂದ ಸಂಹವಾಹನ, 24ರಂದು ಕುರುಬರಿಂದ ಚಂದ್ರಮಂಡಲ ವಾಹನ, 25 ರಂದು ಭಜಂತ್ರಿಯವರಿಂದ ನವಿಲು ವಾಹನ, 26ರಂದು ಹಳ್ಳಿಕಾರರಿಂದ ಭಂಡಾರದ ಉತ್ಸವ ಮತ್ತು ದೇವಸ್ಥಾನದ ವತಿಯಿಂದ ಆಕರ್ಷಕ ಬೆಳ್ಳಿ ಪಲ್ಲಕ್ಕಿ ಮತ್ತು ಸಿಡಿಮದ್ದು ಪ್ರದರ್ಶನ.
27ರಂದು ಅಗ್ನಿಕುಂಡ, 28ರಂದು ಚಿನಕವಜ್ರ, ಕೆರೆಗಳಪಾಳ್ಯ, ಕವಾಡಿಗರಪಾಳ್ಯ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ನಂತರ ಹಳ್ಳಿಕಾರರಿಂದ ದೇವರನ್ನು ಗುಡಿದುಂಬಿಸುವ ಮೂಲಕ ಜಾತ್ರೆ ಮುಕ್ತಾಯವಾಗಲಿದೆ ಎಂದು ಅರ್ಚಕ ಎಂ.ಆರ್.ನಾಗಲಿಂಗಚಾರ್ ತಿಳಿಸಿದ್ದಾರೆ.