ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೌಢ್ಯದಿಂದ ಕೆಳಜಾತಿ ಮಹಿಳೆಯರ ಹಕ್ಕು ಉಲ್ಲಂಘನೆ

Srinivasa Murthy VN
Updated On : 10 Mar 2014, 11:40 am

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಚಿಂತಕ ಕೆ. ದೊರೈರಾಜು ವಿಷಾದ
ಕ.ಪ್ರ.ವಾರ್ತೆ ತುಮಕೂರು ಮಾ.10
ಧರ್ಮ, ಮೌಢ್ಯ ಮತ್ತು ಸಂಪ್ರದಾಯ ಹಾಗೂ ಸರ್ಕಾರದ ಯೋಜನೆಗಳಿಂದ ಕೆಳಜಾತಿಯ ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಚಿಂತಕ ಕೆ. ದೊರೈರಾಜು ವಿಷಾದಿಸಿದರು.
ಅವರು ಸಿದ್ಧಗಂಗಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜಿನ ಶಿವಕುಮಾರ ಸ್ವಾಮಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಆಶಯ ಭಾಷಣ ಮಾಡಿದರು.
ಸಮಾಜದಲ್ಲಿ ಕೆಳವರ್ಗದ ದುಡಿಯುವ ಮಹಿಳೆಯರೆ ಹೆಚ್ಚು ಶೋಷಣೆಗೆ ಒಳಗಾಗಿದ್ದಾರೆ. ಆದರಿಂದ ಶೋಷಿತಮಹಿಳೆಯರಿಗಾಗಿ ಈ ವಿಚಾರ ಸಂಕಿರಣವನ್ನು ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಕೆಳಸಮಾಜದಲ್ಲಿ ಕಟ್ಟಕಡೆಯ ತಳಸಮುದಾಯದ ಕೆಳಜಾತಿಯ ಮಹಿಳೆಯರು ಹೆಚ್ಚು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದರು.
ತನ್ನ ಕುಟುಂಬಗಳ ನಿರ್ವಹಣೆಗಾಗಿ ಕೆಲಸ ಮಾಡುತಾ ಮಕ್ಕಳನ್ನು ಪೋಷಿಸುತ್ತಿದ್ದಾಳೆ. ಆದರೆ ದುಡಿಯುವ  ಸ್ಥಳದಲ್ಲಿ ಯಾವುದೇ ಭದ್ರತೆಯಿಲ್ಲದೆ ಅಭದ್ರತೆಯ ಜೀವನ ನಡೆಸುತ್ತಿದ್ದಾರೆ. ದುಡಿಯುವ ಮಹಿಳೆಯರಿಗೆ ಬದುಕಿಗೆ ಆಶ್ರಯವಿಲ್ಲ ವಿಶ್ವ ಸಂಸ್ಥೆಯು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ವರ್ಷವಾಗಿ ಘೋಷಿಸಿದೆ.
ಆದರೆ ದುಡಿಯುವ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾವಲಂಬನೆಗೆ ಪೂರಕವಾದ ಅವಕಾಶಗಳು ದೊರೆತ್ತಿಲ್ಲ, ಧರ್ಮದ ಸಂಪ್ರದಾಯ, ಮೂಢನಂಬಿಕೆಗಳ ಹೆಸರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ಅತಿಯಾಗಿದೆ. ಅದರಲ್ಲೂ ಕೆಳವರ್ಗದವರನ್ನು ಗುರಿಯಾಗಿಸಿಕೊಂಡು ದೇವದಾಸಿಯರನ್ನಾಗಿಸುವುದು ಸಾಮಾಜಿಕ ಅಸಮಾನತೆಯ ಪ್ರತೀಕವಾಗಿದೆ. ದುಡಿಯುವ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯಾಗಿಲ್ಲ. ಕೆಲಸದ ಸ್ಥಳದಲ್ಲಿ ಗೌರವದಿಂದ ಕಾಣಬೇಕು. ಆರ್ಥಿಕ ತಜ್ಞರ ಅಭಿಪ್ರಾಯದಂತೆ ಸ್ವಯಂ  ಉದ್ಯೋಗ ಮಾಡಲು ಸಂಘಟಿತರಾಗಬೇಕೆಂಬ ವಿಷಯವನ್ನು ಉಲ್ಲೇಖಿಸಿದರು.
ಏಕ ಗವಾಕ್ಷಿ ಯೋಜನೆ: ಕೆಳ ವರ್ಗದ ಮಹಿಳೆಯರ ಆರ್ಥಿಕ ಸ್ವಾವಲಂಭನೆಗೆ ಸ್ಥಳೀಯ ಸಂಸ್ಥೆಗಳು ಹೊತ್ತು ನೀಡಿ, ಸರ್ಕಾರದ ಇತರೆ ಇಲಾಖೆಗಳನ್ನು ಒಳಗೊಂಡಂತೆ ಏಕ ಗವಾಕ್ಷಿ ಯೋಜನೆಯ ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡಲು ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.
ಮಹಿಳೆಯರಿಗೆ ಕುಟುಂಬದಲ್ಲೂ, ಸಮಾಜದಲ್ಲೂ ಭಯದ ವಾತಾವರಣವಿದೆ. ಆದ್ದರಿಂದ ಕಾನೂನಿನ ಅರಿವಿನ ಮೂಲಕ ಅವರಿಗೆ ಆತ್ಮಾಭಿಮಾನ, ಆತ್ಮಸ್ಥೈರ್ಯ ಬರುತ್ತದೆ ಎಂದು ತಿಳಿಸಿದರು. ಮಹಿಳೆಯರು ಸಂಘಟಿತರಾಗಿ ಕುಟುಂಬ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುಶ್ಚಟಗಳನ್ನು ಕೊನೆಗಾಣಿಸಬೇಕೆಂದು ಕರೆ ನೀಡಿದರು.
ಹಕ್ಕು ಪಡೆಯಲಿ: ಸಿದ್ಧಗಂಗ ಕಾಲೇಜಿನ ಕನ್ನಡ ಉಪನ್ಯಾಸಕಿ ದ್ರಾಕ್ಷಾಯಿಣಿ ಪ್ರಕಾಶ್ ಅವರು ಸಮಾಜದಲ್ಲಿ ಗಂಡು ಹೆಣ್ಣು ಸಮಾನಾಗಿರಬೇಕು. ಸರ್ಕಾರ ಸಮಾನ ಮತ್ತು ಉಚಿತ ಶಿಕ್ಷಣ ನೀಡಬೇಕು. ವಂಚಿತ ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಕರೆ ನೀಡಿದರು.
ಸ್ಲಂ ಜನಾಂದೋಲನದ-ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ ಜಗತ್ತಿನ ಎರಡು ಮಹಾಯುದ್ಧಗಳ ನಂತರ ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ಮತ್ತು ಶೋಷಣೆಗೆ ಒಳಗಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕ ಆಯಾಮ ದೃಷ್ಟಿಯಲ್ಲಿ ಹಕ್ಕುಗಳನ್ನು ಘೋಷಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಸಾಮಾಜಿಕ ಅಸಮಾನತೆ ಹೆಚ್ಚಿದ್ದು ಭಾರತದ ದೃಷ್ಟಿಯಲ್ಲಿ ನಮ್ಮ ಮಹಿಳೆಯರ ಹಕ್ಕುಗಳು ಪುನರ್ ವಿಮರ್ಶೆ ಮಾಡಬೇಕಾದುದ್ದು ಅನಿವಾರ್ಯವಾಗಿದೆ ಎಂದರು.
ಕುಡಿವ ನೀರು ಕಲ್ಪಿಸಿ: ಸ್ಲಂಗಳಲ್ಲಿರುವ ಮಹಿಳೆಯರಿಗಾಗಿ ನಗರಪಾಲಿಕೆಯಿಂದ ಶೌಚಾಲಯ ಮತ್ತು ಕುಡಿಯುವ ನೀರು ಕಲ್ಪಿಸಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಪಾಲಿಕೆ ಮಹಾಪೌರರಾದ ಗೀತಾರುದ್ರೇಶ ಅವರು ಕೊಳಗೇರಿಗಳ ಅಭಿವೃದ್ಧಿಗೆ ಪಾಲಿಕೆಯಲ್ಲಿ ಪ್ರತ್ಯೇಕ ಹಣವಿಡುತ್ತೇವೆ ಮತ್ತು ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗುತ್ತಿನಿ  ಎಂದರು. ರಜೀಯಾಬಿ, ಮನೆಕೆಲಸ ಕಾರ್ಮಿಕರ ಪರವಾಗಿ ಗೀತಾ, ಸ್ಲಂ ಯುವತಿಯರ ಪರವಾಗಿ ಕೋಮಲ ಪ್ರತಿಕ್ರಿಯೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನು ಅನುಪಮ, ಸ್ವಾಗತವನ್ನು ಗಾಯಿತ್ರಿ ನಿರೂಪಣೆಯನ್ನು ಸೈಯದ್ ಅಲ್ತಾಫ್, ವಂದನಾರ್ಪಣೆಯನ್ನು ಶ್ರುತಿ ನೆರವೇರಿಸಿದರು. ಈ ವಿಚಾರ ಸಂಕೀರಣದಲ್ಲಿ ಮಹಿಳೆಯರು ಮತ್ತು, ಕೊಳಗೇರಿ ಸಮಿತಿಯ ಶೆಟ್ಟಾಳ್ಳಯ್ಯ, ರಾಮಯ್ಯ, ಅರುಣ್, ಲತಾ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement