ಲಾರಿ ಡಿಕ್ಕಿ: ಭದ್ರತಾ ಸಿಬ್ಬಂದಿ ಸಾವು
ಮೈಸೂರು: ಲಾರಿ ಡಿಕ್ಕಿಯಾಗಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. ಎಂಜಿಎಂ ಫೋರ್ಡ್ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಹಾಗೂ ನೇಪಾಳ ಮೂಲದ ಸುಶೀಲ್ ಶರ್ಮಾ (22) ಮೃತಪಟ್ಟವರು. ಇವರು ಕೆಲಸ ಮುಗಿಸಿ ದ್ವಿಚಕ್ರವಾಹನದಲ್ಲಿ ಕಾರ್ಖಾನೆಯಿಂದ ಹೊರಗೆ ಬರುತ್ತಿದ್ದರು. ಈ ವೇಳೆ ಲಾರಿಯೊಂದು ದ್ವಿಚಕ್ರವಾಹನಕ್ಕೆ ತಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಜೆಡಿಎಸ್ ಕಾರ್ಯಕರ್ತರ ಸಭೆ
ಕುಣಿಗಲ್: ಲೋಕಸಭಾ ಚುನಾವಣೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲು ಮಾ. 12ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಡಿ. ನಾಗರಾಜಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಹುಲಿನಾಯ್ಕರ್ ಮತ್ತು ಸಂಭವನೀಯ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ಪಟ್ಟಣದಲ್ಲಿ (ದಿವ್ಯ ಕನ್ವೆನ್ಷನ್ ಹಾಲ್ನಲ್ಲಿ) ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್. ಹರೀಶ್ ತಿಳಿಸಿದ್ದಾರೆ.
ಯೋಗಾಸನ ಶಿಬಿರ
ಮೈಸೂರು: ಸಿದ್ದಾರ್ಥನಗರದಲ್ಲಿರುವ ಪತಂಜಲಿ ಯೋಗ ಶಿಕ್ಷಣ ವಿಶ್ವಸ್ಥ ಮಂಡಲಿಯಲ್ಲಿ ಮಾ.12ರ ಸಂಜೆ 6 ರಿಂದ 7 ರವರೆಗೆ ಯೋಗಾಸನ ಮತ್ತು ಪ್ರಾಣಾಯಾಮ ಉಚಿತ ತರಗತಿ ನಡೆಸಲಿದ್ದು, ಮೊ. 94804 14343 ಸಂಪರ್ಕಿಸಬಹುದು.
ಮಹಿಳಾ ದಿನ
ಮೈಸೂರು: ರೋಟರಿ ಮೈಸೂರು ಮಿಡ್ಟೌನ್ ಸಂಸ್ಥೆಯು ಇನ್ನರ್ ವ್ಹೀಲ್ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಮಾ. 12ರ ಸಂಜೆ 7ಕ್ಕೆ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದೆ.
ಅಂತಾರಾಷ್ಟ್ರೀಯ ಸಮ್ಮೇಳನ
ಮೈಸೂರು: ಸಂತ ಜೋಸೆಫ್ ಆಸ್ಪತ್ರೆಯಿಂದ ಮಾ.12ರ ಸಂಜೆ 4ಕ್ಕೆ ಹೋಟೆಲ್ ರಿಗಾಲಿಸ್ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿದ್ದು, ಜರ್ಮನಿಯ ಉಪ ಕಾನ್ಸುಲೇಟ್ ಜನರಲ್ ಹ್ಯಾನ್ಸ್ ಗುಂಟರ್ ಲಾಫ್ಲರ್ ಉದ್ಘಾಟಿಸುವರು. ಜರ್ಮನಿ, ಯುಎಸ್ಎ, ಬಾಂಗ್ಲಾದೇಶದ ಪ್ರತಿನಿಧಿಗಳು ಭಾಗವಹಿಸುವರು.
ದೂರವಾಣಿ ಗ್ರಾಹಕರ ಮುಕ್ತ ಸಮಾವೇಶ
ತುಮಕೂರು: ತುರುವೇಕೆರೆ ತಾಲೂಕಿನ ಬಿ.ಎಸ್.ಎನ್.ಎಲ್. ದೂರವಾಣಿ ಗ್ರಾಹಕರ ಮುಕ್ತ ಸಮಾವೇಶವನ್ನು ಮಾರ್ಚ್ 20 ರಂದು ಬೆಳಿಗ್ಗೆ 11 ಗಂಟೆಗೆ ತುರುವೇಕೆರೆ ದೂರವಾಣಿ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಗಿದೆ. ತುರುವೇಕೆರೆ ತಾಲೂಕಿನ ಎಲ್ಲಾ ದೂರವಾಣಿ ಗ್ರಾಹಕರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ದೂರವಾಣಿ ಸೇವೆಯ ಅಭಿವೃದ್ಧಿಗೆ ತಮ್ಮ ಸಲಹೆ ಸೂಚನೆಗಳನ್ನು ಕೊಡಬೇಕಾಗಿ ಕೋರಿದೆ.
ಪರಿಸರ ಪ್ರಶಸ್ತಿ
ತುಮಕೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ತುಮಕೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು (ದ) ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ತುಮಕೂರು ವಿಜ್ಞಾನ ಕೇಂದ್ರ, ತುಮಕೂರು ಸಂಯುಕ್ತಾಶ್ರಯದಲ್ಲಿ 13ರ ಗುರುವಾರ ಬೆಳಿಗ್ಗೆ 10.30ಕ್ಕೆ ತುಮಕೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಹಾಗೂ ಟಿ.ಆರ್. ಅನಂತರಾಮು ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪರಿಸರ ಪೂರಕ ಚಟುವಟಿಕೆ ನಡೆಸುತ್ತಿರುವ ಜಿಲ್ಲೆಯ ಎರಡು ಪರಿಸರ ಮಿತ್ರ ಶಾಲೆ, ಹತ್ತು ಹಸಿರು ಶಾಲೆಗಳು ಮತ್ತು ಹತ್ತು ಕಿತ್ತಳೆ ಶಾಲೆಗಳೆಂದು ಗುರುತಿಸಿ 22 ಶಾಲೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕ.ರಾ.ಮಾ.ನಿ.ಮಂ. ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.
ರದ್ದುಪಡಿಸುವವರೆಗೆ ಸಿಂಧುತ್ವ: ಸುತ್ತೋಲೆ
ತುಮಕೂರು: ಸರ್ಕಾರದ ವಿವಿಧ ಯೋಜನೆಗಳಿಗಾಗಿ ಕಂದಾಯ ಇಲಾಖೆಯಿಂದ ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ನೀಡಲಾಗುತ್ತಿರುವ ಜಾತಿ ಪ್ರಮಾಣ ಪತ್ರಗಳ ಕಾಲಾವಧಿಯನ್ನು ಸದರಿ ಪ್ರಮಾಣಪತ್ರ ರದ್ದುಪಡಿಸುವವರೆಗೆ ಸಿಂಧುತ್ವದಲ್ಲಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ಆದಾಯ ಪ್ರಮಾಣ ಪತ್ರಗಳ ಕಾಲಾವಧಿಯು ಐದು ವರ್ಷಗಳವರೆಗೆ ಸಿಂಧುತ್ವದಲ್ಲಿರುತ್ತದೆ. ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ವಿವಿಧ ಸರ್ಕಾರಿ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಲ್ಲಿಸುವಂತಹ ಜಾತಿ ಹಾಗೂ ಆದಾಯ ಪ್ರಮಾಣಪತ್ರವನ್ನು ಸುತ್ತೋಲೆಯ ನಿರ್ದೇಶನದಂತೆ ಮಾನ್ಯ ಮಾಡಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಯುಧ, ಬಂದೂಕು ವಶಕ್ಕೆ ನೀಡಲು ಸೂಚನೆ
ಲೋಕಸಭಾ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವವರು ಆಯುಧ, ಬಂದೂಕುಗಳನ್ನು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಯಾ ಪೊಲೀಸ್ ಠಾಣೆಗಳ ವಶಕ್ಕೆ ನೀಡಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಸಂಬಂಧ ಕಂಟ್ರೋಲ್ ರೂಂ ಸ್ಥಾಪನೆ
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು, ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಂ ತೆರೆದು 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದೂ.ವಾ.0816-2251278ಗೆ ಸಂಪರ್ಕಿಸಲು ಕೋರಿದೆ.
ಉದ್ಯೋಗ ಮೇಳ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಿವೇಕಾನಂದ ರಸ್ತೆ, ತುಮಕೂರು ಇಲ್ಲಿ 13 ರಂದು ಉದ್ಯೋಗ ಮೇಳ ನಡೆಯಲಿದೆ. ಮೇಳದಲ್ಲಿ 108 ಆಂಬುಲೆನ್ಸ್ ಸರ್ವೀಸ್ ಸಂಸ್ಥೆಯವರು 200 ಕ್ಕೂ ಹೆಚ್ಚು ಸ್ಟಾಪ್ ನರ್ಸ್ ಹುದ್ದೆಗೆ ಆಯ್ಕೆ ಮಾಡಲಿದ್ದು ಹಾಗೂ ಎಲ್ ಅಂಡ್ ಟಿ, ಬೆಂಗಳೂರು ಇವರು ಎಸ್.ಎಸ್.ಎಲ್.ಸಿ. ಪಾಸ್, ಫೇಲ್ ಮತ್ತು ಅನಕ್ಷರಸ್ಥರು ಇವರಿಗೆ ತರಬೇತಿ ನೀಡಿ ಕನ್ಸ್ಟ್ರಕ್ಷನ್ ಟ್ರೈನಿ ಹುದ್ದೆಗೆ ಆಯ್ಕೆ ಮಾಡಲಿದ್ದು, ಅರ್ಹ ಅಭ್ಯರ್ಥಿಗಳು ಮೇಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗೆ ದೂ.ವಾ.9980367297 ಸಂಪರ್ಕಿಸಲು ಕೋರಿದೆ.