ಶಿಕ್ಷಕಿಯೊಂದಿಗೆ ಪುರಸಭೆ ಸದಸ್ಯರೊಬ್ಬರ ಅಸಭ್ಯ ವರ್ತನೆ: ಪೊಲೀಸರಿಗೆ ದೂರು
ಕುಣಿಗಲ್: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯನಿರತರಾಗಿದ್ದ ಶಿಕ್ಷಕಿಯೊಂದಿಗೆ ಪುರಸಭೆ ಸದಸ್ಯರೊಬ್ಬರು ಹಾಗೂ ಅವರ ಚೇಲಾ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ,
ಆ ಶಿಕ್ಷಕಿ, ಸದಸ್ಯ ಮತ್ತು ಚೇಲನ ವಿರುದ್ಧ ಕುಣಿಗಲ್ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ. ಪಟ್ಟಣದ 18ನೇ ವಾರ್ಡ್‌ನ ಮತಗಟ್ಟೆ ಅಧಿಕಾರಿಯಾಗಿರುವ ಶಿಕ್ಷಕಿ ಚಂದ್ರಕಲಾ, ಭಾನುವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿದ್ದಾಗ, ಮತಗಟ್ಟೆಗೆ ಆಗಮಿಸಿದ ಪುರಸಭೆ ಸದಸ್ಯ ಪಾಪಣ್ಣ ಈತನ ಚೇಲಾ ಬ್ರಹ್ಮದೇವ ಎಂಬಾತ, ಹೊಸಮತದಾರರ ಸೇರ್ಪಡೆ ನಿಟ್ಟಿನಲ್ಲಿ ನಮೂನೆ 6ಕ್ಕೆ ಸಂಬಂಧಿಸಿದಂತೆ ಕೆಲದಾಖಲೆಗಳನ್ನು ಸೇರಿಸಲು ಪುರಸಭೆ ಸದಸ್ಯ ಹೇಳಿದಂತೆ ಕೇಳುವಂತೆ ತಾಕೀತು ಮಾಡಿದರು. ಮತಗಟ್ಟೆ ಅಧಿಕಾರಿಯಾದ ಶಿಕ್ಷಕಿ ಇದನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಸದಸ್ಯ ಮತ್ತು ಆತನ ಚೇಲಾ ಇಬ್ಬರು, ಮಹಿಳೆ ಎಂಬುದನ್ನು ನೋಡದೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತಾವು ಹೇಳಿದಂತೆ ಕೇಳದಿದ್ದಲ್ಲಿ ಮೇಲಾಧಿಕಾರಿಗಳಿಗೆ ಹೇಳಿ ಅಮಾನತು ಮಾಡಿಸಿ, ಗತಿಕಾಣಿಸದೆ ಬಿಡೊಲ್ಲ ಎಂದು ಬೆದರಿಕೆ ಹಾಕಿದರೆಂದು ಶಿಕ್ಷಕಿ ಚಂದ್ರಕಲಾ ಕುಣಿಗಲ್ ಪೊಲೀಸರಿಗೆ ದೂರು ನೀಡಿದರು. ದೂರು ಸ್ವೀಕರಿಸಿರುವ ಕುಣಿಗಲ್ ಪೊಲೀಸರು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಾಲಯದ ಮಾರ್ಗದರ್ಶನ ಕೋರಿದ್ದಾರೆ.
ಖಂಡನೆ: ಮಹಿಳೆ ಎಂದು ನೋಡದೆ ಕರ್ತವ್ಯನಿರತ ಶಿಕ್ಷಕಿಯೊಂದಿಗೆ ಜವಾಬ್ದಾರಿಯುತ ಸದಸ್ಯರೂ, ಆತನ ಚೇಲಾಗಳು ಅಸಭ್ಯವಾಗಿ ನಡೆದುಕೊಂಡಿರುವುದು ಖಂಡನೀಯ. ಚುನಾವಣೆ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ ಒಂದು ಸಮಸ್ಯೆಯಾದರೆ, ನಿಯಮ ಪಾಲಿಸಲು ಹೋದರೆ ಸ್ಥಳೀಯ ಕೆಲ ರಾಜಕಾರಣಿಗಳ ಒತ್ತಡದ ನಡುವೆ ಶಿಕ್ಷಕರು ಪರದಾಡುವ ಸ್ಥಿತಿ ಇದೆ. ಇತ್ತ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದರೂ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವರ್ತಿಸುತ್ತಿದ್ದಾರೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಸೂಕ್ತ ಭದ್ರತೆ ವೈಫಲ್ಯ ಕಂಡುಬರುತ್ತಿದೆ.
ಇನ್ನಾದರೂ ಚುನಾವಣೆ ಆಯೋಗದ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಕರ್ತವ್ಯ ನಿರತ ಸಿಬ್ಬಂದಿಗೆ, ಶಿಕ್ಷಕರಿಗೆ ನಿಯಮಬದ್ಧ ಕೆಲಸ ನಿರ್ವಹಿಸುವಂತ ವಾತಾವರಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ, ಇಲ್ಲವಾದಲ್ಲಿ ಶಿಕ್ಷಕರನ್ನು ಶೈಕ್ಷಣಿಕ ಕಾರ್ಯಕ್ರಮ ಹೊರತುಪಡಿಸಿ ಬೇರೆ ಕಾರ್ಯಗಳಿಗೆ ನಿಯೋಜಿಸದಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್, ರಾಜ್ಯಸಂಘದ ನಿರ್ದೇಶಕ ನಾಗರಾಜ್(ಗುರು) ಆಗ್ರಹಿಸಿದ್ದಾರೆ.