ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಸ್. ಮಲ್ಲಿಕಾರ್ಜುನಯ್ಯ ಅಂತ್ಯಸಂಸ್ಕಾರ

Srinivasa Murthy VN
Updated On : 15 Mar 2014, 12:36 pm

ಕ.ಪ್ರ.ವಾರ್ತೆ ತುಮಕೂರು ಮಾ. 14
ಲೋಕಸಭೆ ಮಾಜಿ ಉಪಸಭಾಪತಿ ಎಸ್.ಮಲ್ಲಿಕಾರ್ಜುನಯ್ಯನವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರು ಹೊನಸಿಗೆರೆಯಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿತು.
ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ, ಕೇಂದ್ರ ಮಾಜಿ ಸಚಿವ ಅನಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಸಂಸದ ಜಿ.ಎಸ್. ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಬಿ. ಸುರೇಶ್‌ಗೌಡ, ಸೇರಿದಂತೆ ಅಭಿಮಾನಿಗಳು, ಅನೇಕ ರಾಜಕೀಯ ಗಣ್ಯರು, ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನಯ್ಯನವರ ಒಡನಾಡಿ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಮಲ್ಲಿಕಾರ್ಜುನಯ್ಯನವರ ಅಂತ್ಯಸಂಸ್ಕಾರಕ್ಕಾಗಿಯೇ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ, ನಂತರ ರಸ್ತೆ ಮಾರ್ಗವಾಗಿ ತುಮಕೂರು ಗ್ರಾಮಾಂತರದ ಹೊನಸಿಗೆರೆಗೆ 12.45ರ ವೇಳೆಗೆ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆಡ್ವಾಣಿಯವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಆಗಮಿಸಿದ್ದರು.
ಅಂತ್ಯಕ್ರಿಯೆಗೂ ಮುನ್ನ ಗಾಂಧಿನಗರದ ಸ್ವಗೃಹದಿಂದ ಸ್ವಗ್ರಾಮ ಹೊನಸಿಗೆರೆವರೆಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮಾರ್ಗ ಮಧ್ಯೆ ಗೂಳೂರಿನಲ್ಲಿ ಕೆಲ ಕಾಲ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ನಿಷ್ಠಾವಂತ ನಾಯಕ: ಎಲ್.ಕೆ. ಆಡ್ವಾಣಿ ಬಣ್ಣನೆ
ಮಲ್ಲಿಕಾರ್ಜುನಯ್ಯ ಅವರು ತಮ್ಮ ಜೀವಿತಾವಧಿಯನ್ನು ಪಕ್ಷಕ್ಕಾಗಿ ಮುಡಿಪಾಗಿಟ್ಟಿದ್ದ ನಿಷ್ಠಾವಂತ ಕಾರ್ಯಕರ್ತ, ನಾಯಕ, ಸರಳ, ಸಜ್ಜನ. ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಸ್ಮರಿಸಿದರು. 1975 ರಲ್ಲಿ ಏಕಾಏಕಿ ತುರ್ತುಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸಿದ ಹೈಗ್ರೌಂಡ್ಸ್ ಪೊಲೀಸರು, ಸೆಂಟ್ರಲ್ ಜೈಲಿಗೆ ದೂಡಿದರು. ಈ ಸಂದರ್ಭದಲ್ಲೇ ಎಸ್. ಮಲ್ಲಿಕಾರ್ಜುನಯ್ಯನವರ ಪರಿಚಯವಾಯ್ತು. ಅಲ್ಲಿಂದ ಶುರುವಾದ ತಮ್ಮಿಬ್ಬರ ಸ್ನೇಹ ಕೊನೆಯವರೆಗೂ ಹಾಗೇ ಇತ್ತು ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಎಸ್. ಮಲ್ಲಿಕಾರ್ಜುನಯ್ಯ ಅವರು ಸಜ್ಜನ ರಾಜಕಾರಣಿ. ಅಜಾತಶತ್ರು. ಅವರ ಸೇವೆ ಸದಾ ಸ್ಮರಣೀಯ. ನಾವು ಅವರೊಂದಿಗೆ ಲೋಕಸಭೆಯಲ್ಲಿ ಕೆಲಸ ಮಾಡಿದ್ದೇವೆ. ಉಪಸಭಾಪತಿಗಳಾಗಿ ಅವರು ಉತ್ತಮ ಕಾರ್ಯನಿರ್ವಹಿಸಿದ್ದಾರೆ.
-ಅನಂತಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement