ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

20 ನಿಮಿಷ 20 ಸುದ್ದಿ

Srinivasa Murthy VN
Updated On : 16 Mar 2014, 12:04 pm

ಚಿಕ್ಕನಾಯಕನಹಳ್ಳಿ: ಭಾರತ ನಿರ್ಮಾಣಕ್ಕಾಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ತಿಳಿಸಿದ್ದಾರೆ.  ಈ ಸಂಬಂಧ ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.17ರಂದು ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಶೆಟ್ಟೀಕೆರೆ ಹೋಬಳಿ ಕೇಂದ್ರದಿಂದ ಪ್ರಾರಂಭವಾಗುವ ಪಾದಯಾತ್ರೆಯಲ್ಲಿ ಪಕ್ಷದ ತಾಲೂಕು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸುತ್ತಾರೆ. ಅಲ್ಲಿದ ಹೊರಡುವ ಪಾದಯಾತ್ರೆಗೆ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಮಾರ್ಗ ಮಧ್ಯೆ ಬಂದು ಭಾಗವಹಿಸುತ್ತಾರೆ. ಪಟ್ಟಣಕ್ಕೆ ಬಂದು ಪ್ರಮುಖ ಬೀದಿಗಳಲ್ಲಿ ಯಾತ್ರೆ ಮಾಡಲಿದ್ದಾರೆ ಎಂದರು.  ಚಿ.ನಾ.ಹಳ್ಳಿ ಬ್ಲಾಕ್ ಅಧ್ಯಕ್ಷ ಸಿ.ಬಸವರಾಜು, ಹುಳಿಯಾರು ಬ್ಲಾಕ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಹಿಂದುಳಿದ ವರ್ಗದ ಮಹಿಳಾ ಘಟಕದ ಅಧ್ಯಕ್ಷೆ ಪ್ರಮೀಳಾ, ಅಲ್ಪಸಂಖ್ಯಾತ ಘಟಕದ ಷರೀಫ್, ಎಸ್ಸಿ ಘಟಕದ ಶಿವಕುಮಾರ್ ಇದ್ದರು.

'ಮಲ್ಲಿಕಾರ್ಜುನಯ್ಯ ನಾಡು ಕಂಡ ಅಪರೂಪ ರಾಜಕಾರಣಿ'
ತುಮಕೂರು:
ಕಳೆದ 13 ರಂದು ನಿಧನರಾದ ಲೋಕಸಭೆ ಮಾಜಿ ಡೆಪ್ಯೂಟಿ ಸ್ಪೀಕರ್ ಎಸ್. ಮಲ್ಲಿಕಾರ್ಜುನಯ್ಯ ಅಪರೂಪದ ರಾಜಕಾರಣಿ ಎಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಬಣ್ಣಿಸಿದೆ. ತುಮಕೂರು ಸಂಸದರಾಗಿಯೂ ಸೇವೆ ಸಲ್ಲಿಸಿದ್ದ ಮಲ್ಲಿಕಾರ್ಜುನಯ್ಯ ಅವರು ಜನಪರ ಕಾಳಜಿಯಲ್ಲಿ ತಮ್ಮ ತೊಡಗಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಎಲ್ಲ  ರಾಜಕೀಯ ಪಕ್ಷದವರೂ ಸಹ ಗೌರವಿಸುತ್ತಿದ್ದರು ಎಂದು ಸಂಸ್ಥೆಯ ಅಧ್ಯಕ್ಷ ಸಾಗರನಹಳ್ಳಿ ಪ್ರಭು ಮತ್ತು ಅಬ್ದುಲ್ ಜಲೀಲ್ ಅಭಿಪ್ರಾಯಪಟ್ಟಿದ್ದಾರೆ. ಅಜಾತ ಶತೃವಾಗಿ, ಅಪರೂಪದ ರಾಜಕಾರಣಿಯಾಗಿ, ಸಾಮಾಜಿಕ ಕಳಕಳಿಯ ಅಭಿವ್ಯಕ್ತಿಯಾಗಿ ಅವರ ಕೊಡುಗೆ ಸ್ಮರಣೀಯ ಎಂದಿದ್ದಾರೆ. ಚೇಂಬರ್ ಆಫ್ ಕಾಮರ್ಸ್ನ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಸ್ಎಂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

'ಪರಮಶಿವಯ್ಯ ಅಗಲಿಕೆ ರೈತ ವರ್ಗಕ್ಕೆ ಭಾರೀ ನಷ್ಟ'
ತುಮಕೂರು:
ಪರಮಶಿವಯ್ಯ ಅಪ್ರತಿಮ ನೀರಾವರಿ ತಜ್ಞ ಎಂದು ರಾಜ್ಯ ರೈತ ಸಂಘ ಬಣ್ಣಿಸಿದೆ. ನೀರಾವರಿ ತಜ್ಞರು, ನೀರಾವರಿ ಹೋರಾಟಗಾರರು ಆದ ಪರಮಶಿವಯ್ಯ ಅವರ ನಿಧನ ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ರೈತ ಸಮೂಹಕ್ಕೆ ತುಂಬಲಾರದ ನಷ್ಟ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದ್ದಾರೆ. ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ಸಮಗ್ರವಾಗಿ ನೀರಾವರಿಗೆ ಒಳಪಡಿಸಬೇಕೆಂದು ತಮ್ಮ ಇಳಿವಯಸ್ಸಿನಲ್ಲಿಯೂ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಾ ಎಲ್ಲಾ ಸರ್ಕಾರಗಳ ಮೇಲೆ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಸರ್ಕಾರಗಳು, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸದ ಕಾರಣ ಜಿಲ್ಲೆಗೆ ನೇತ್ರಾವತಿ ತಿರುವು ಯೋಜನೆ ಮೂಲಕ ನೀರು ಹರಿಸಬೇಕೆಂಬುದು ಅವರ ಕನಸಾಗಿತ್ತು. ಆದರೆ ಅವರ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆಲ್ಲಾ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ. ಯೋಜನೆಯನ್ನು ಯಥಾವತ್ ಜಾರಿ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಬೇಕು ಎಂದರು.

ಪ್ರದರ್ಶನ ವೀಕ್ಷಣೆ...
ಮಧುಗಿರಿ ತಾಲೂಕು ಗಿಡದಾಗಲಹಳ್ಳಿಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನವನ್ನು ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಕಾಮರಾಜು, ಸದಸ್ಯರಾದ ಗುರುಲಿಂಗಯ್ಯ, ಪಿ.ಎನ್. ಇಂದ್ರಕುಮಾರ್ ಮತ್ತಿತರರು ಇದ್ದಾರೆ.

'ವಿಜ್ಞಾನ ಪ್ರಗತಿಯಲ್ಲಿದ್ದರೂ ಮಹಿಳಾ ಸಬಲೀಕರಣ ಆಗಿಲ್ಲ'
ತುಮಕೂರು
: ವಿಜ್ಞಾನ ಇಂದು ಪ್ರಗತಿ ನಾಗಾಲೋಟದಲ್ಲಿದ್ದರೂ ಮಹಿಳಾ ಸಬಲೀಕರಣ ಇನ್ನೂ ಗಗನಕುಸುಮವಾಗಿಯೇ ಉಳಿದಿದೆ ಎಂದು ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ವಿಷಾದಿಸಿದರು. ನಗರದ ಆರ್ಯಭಾರತಿ ಪಾಲಿಟೆಕ್ನಿಕ್ನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮುಂದುವರೆದ ರಾಷ್ಟ್ರಗಳಲ್ಲೂ ಸಹ ಹೆಣ್ಣಿನ ಶೋಷಣೆ ಇಂದಿಗೂ ಅವ್ಯಾಹತವಾಗಿ ನಡೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಕೌಟುಂಬಿಕ ವ್ಯವಸ್ಥೆಯಿಂದ ಮೊದಲ್ಗೊಂಡು ಆಡಳಿತಾತ್ಮಕ ವ್ಯವಸ್ಥೆಯವರೆಗೂ ಹೆಣ್ಣಿನ ಶೋಷಣೆ ಈ ಆಧುನಿಕ ಜಗತ್ತಿನಲ್ಲಿ ಒಂದು ಪಿಡುಗಾಗಿದೆ ಎಂದರು. ಯುಗ ಯುಗಾಂತರಗಳಿಂದಲೂ ಹೆಣ್ಣು ಶೋಷಣೆಗೆ ಒಳಗಾಗಿದ್ದು ಅದನ್ನು ತ್ಯಾಗಮಯಿ ಗುಣ ವಿಶೇಷಣದ ನೆಪದಲ್ಲಿ ಸಮರ್ಥಿಸಿಕೊಂಡಿರುವುದನ್ನು ಕಾಣಬಹುದು ಎಂದರು. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಾಮರಸ್ಯ ಕದಡುತ್ತಿದ್ದು ಅದಕ್ಕೆ ಹೆಣ್ಣನ್ನು ದೂಷಿಸುವುದು ಸಾಮಾನ್ಯವಾಗಿದೆ ಎಂದು ತಿಳಿಸಿದರು.

'ತಿಪಟೂರು ಕೊಬ್ಬರಿ ವರ್ತಕರ ವರ್ತನೆ ಸಂಚಿನಂತೆ ಕಾಣುತ್ತಿದೆ'
ತಿಪಟೂರು:
ತಿಪಟೂರಿನ ಕೊಬ್ಬರಿ ವರ್ತಕರು ನಡೆಸುತ್ತಿರುವ  ಮುಷ್ಕರ ರೈತಾಪಿ ಬದುಕಿನ ವಿರುದ್ಧ ನಡೆಸುತ್ತಿರುವ ಸಂಚಿನಂತೆ ಕಾಣುತ್ತಿದೆ ಎಂದು ಪ್ರಗತಿಪರ ರೈತ ಎಸ್. ಗಂಗಾಧರಯ್ಯ ಆರೋಪಿಸಿದ್ದಾರೆ. ಪಾರದರ್ಶಕತೆ ಪ್ರಜಾಪ್ರಭುತ್ವದ ದೊಡ್ಡ ಗುಣ. ಆದರೆ, ವರ್ತಕರು ಇ-ಟೆಂಡರಿಂಗ್ ವ್ಯವಸ್ಥೆಯ ಬಗ್ಗೆ ಎತ್ತಿರುವ ತಕರಾರಿನಲ್ಲಿ ಯಾವುದೇ ಹುರುಳಿಲ್ಲ. ಇದನ್ನು ಇವತ್ತಲ್ಲದಿದ್ದರೂ ಮುಂದೊಂದು ದಿನ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ. ಒಳ್ಳೆಯ ಕೆಲಸ ಮಾಡುವ ಅಧಿಕಾರಿಯೊಬ್ಬರನ್ನು ಹಠಕ್ಕೆ ಬಿದ್ದು ವರ್ಗಾವಣೆ ಮಾಡಿಸಲು ತುದಿಗಾಲಲ್ಲಿ ನಿಂತಿರುವ ಕೆಲವರು ತಮ್ಮ ಮನಸ್ಸಾಕ್ಷಿ ಕೇಳಿಕೊಳ್ಳಬೇಕು ಎಂದಿದ್ದಾರೆ. ಇಲ್ಲಿ ಎಚ್ಚೆತ್ತುಕೊಳ್ಳ ಬೇಕಿರುವುದು ರೈತರು ಮಾತ್ರವಲ್ಲ, ಸರ್ಕಾರ ಕೂಡಾ. ಒಬ್ಬ ಅಧಿಕಾರಿ ರೈತ ಪರವಾಗಿ ಆಲೋಚಿಸುವುದನ್ನೇ ತಪ್ಪು ಎಂಬುದಾಗಿ ಬಿಂಬಿಸ ಹೊರಟಿರುವ ವರ್ತಕರ ವರ್ತನೆಯನ್ನು ಖಂಡಿಸಬೇಕಿದೆ ಎಂದಿದ್ದಾರೆ.

'ಬೆಳೆಗಾರರ ವಿರುದ್ಧ ಹಠ ಸಾಧಿಸದೆ ಕೊಬ್ಬರಿ ಖರೀದಿಗೆ ಮುಂದಾಗಲಿ'
ತಿಪಟೂರು:
ಎಪಿಎಂಸಿ ಮಾರುಕಟ್ಟೆ ವಹಿವಾಟಿನಲ್ಲಿ ಆನ್ಲೈನ್ ಟ್ರೇಡಿಂಗ್ ವಿರೋಧಿಸಿ ವರ್ತಕರು ನಡೆಸುತ್ತಿರುವ ಮುಷ್ಕರ ಕೈಬಿಟ್ಟು, ಹೊಸ ವ್ಯವಸ್ಥೆಯಡಿ ರೈತರು ಕೊಬ್ಬರಿಯನ್ನು ಖರೀದಿಸುವಂತೆ ಬಿಜೆಪಿ ಮುಖಂಡ ಲೋಕೇಶ್ವರ ಒತ್ತಾಯಿಸಿದರು. ಈ ಸಂಬಂಧ ಸುದ್ದಿಗೋಷ್ಠಿ ಮಾತನಾಡಿದ ಅವರು, ಹೊಸ ವ್ಯವಸ್ಥೆಯಲ್ಲಿ ಕೆಲ ಲೋಪ ದೋಷಗಳಿದ್ದು, ಅವುಗಳನ್ನು ವ್ಯಾಪಾರ ವಹಿವಾಟು ನಡೆಸುತ್ತಲೇ ಸರ್ಕಾರದ ಮೇಲೆ ಒತ್ತಡ ಹೇರಿ ಸರಿಪಡಿಸಿಕೊಳ್ಳಲು ಸಲಹೆ ನೀಡಿದರು. ಹೊಸ ಪದ್ದತಿಯಲ್ಲಿರುವ ಅನೇಕ ದೋಷಗಳನ್ನು ಸರಿಪಡಿಸುವಂತೆ ಸರ್ಕಾರವನ್ನೂ ಆಗ್ರಹಿಸಿದರು. ಶೇ.75ರಷ್ಟು ವರ್ತಕರು ಸ್ವತಹ ರೈತರೇ ಆಗಿರುವುದರಿಂದ ರೈತನಿಗೆ ತೊಂದರೆ ಮಾಡುವುದು ಬೇಡ. ಸರ್ಕಾರ ಮಾಡಿರುವ ನ್ಯೂನತೆಗಳಿಗೆ ವರ್ತಕರು ರೈತರಿಗೆ ವಿನಾಕರಣ ತೊಂದರೆ ನೀಡುವುದು ಬೇಡ ಒತ್ತಾಯಿಸಿದರು.

ದೂರವಾಣಿ ಮೂಲಕವೂ ದೂರು ಸಲ್ಲಿಸಬಹುದು
ಕೊರಟಗೆರೆ:
ಮಹಿಳೆಯರು ತಮ್ಮ ಮೇಲೆ ಆಗುವ ದೌರ್ಜನ್ಯಗಳನ್ನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡ ಬೇಕೆಂದೇನೂ ಇಲ,್ಲ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ದೂರವಾಣಿಯ ಮೂಲಕವಾಗಲಿ ಅಥವಾ ಲಿಖಿತ ರೂಪದಲ್ಲಿ ದೂರು ನೀಡಿದರೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ ಎಂದು ಕೊರಟಗೆರೆ ಸಿವಿಲ್ ನ್ಯಾಯಾಧೀಶ ಡಿ. ರಾಘವೇಂದ್ರ ತಿಳಿಸಿದರು. ಅವರು ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಆವರಣದಲ್ಲಿ ನಡೆದ ವಿಶ್ವ ಮಹಿಳಾ  ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ಮಹಿಳೆಯರು ಮಹಿಳೆಯರಿಗಾಗಿ ಮಾಡಿರುವಂತಹ ಕಾನೂನುಗಳ ಅರಿವನ್ನು ತಿಳಿದಿರಬೇಕು ಎಂದರು. ವಿಷಯ ತಜ್ಞರಾಗಿ ಎಸ್.ಎನ್. ಹನುಮಂತರಾಜು ಮಾತನಾಡಿ 2005 ರಲ್ಲಿ ಕಾನೂನು ಜಾರಿಯಾಗಿದೆ.  ಆದರೆ ಇಂದೂ ಮಹಿಳೆಯರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಪ್ರತಿಪಾದಿಸಿದರು.

ಶಿಕ್ಷಕ ವೃತ್ತಿ ಪವಿತ್ರವಾದುದು:್ದ ಟಿ.ಜಿ.ಸಿದ್ದಯ್ಯ ಅಭಿಮತ
ಕುಣಿಗಲ್:
ಗುರು ಶಿಷ್ಯರ ಸಂಬಂಧ ಹದಗೆಟ್ಟಿರುವ ಪ್ರಸ್ತುತ ದಿನಗಳಲ್ಲಿ, ತಮ್ಮ ನೆಚ್ಚಿನ ಶಿಕ್ಷಕ ನಿವೃತ್ತರಾಗುವ ಸಂದರ್ಭದಲ್ಲಿ ಅವರ ಶಿಷ್ಯರು,  ಶಿಕ್ಷಕರಿಗೆ ಚಿನ್ನದ ಉಂಗುರು ತೊಡಿಸಿ ಗೌರಾವಾದರಗಳನ್ನು ತೋರುತ್ತಿರುವುದು ನಿಜಕ್ಕೂ ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಸಲ್ಲಿಸಿರುವ ಸೇವೆಗೆ ಸಂದ ಗೌರವ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜಿ.ಸಿದ್ದಯ್ಯ ತಿಳಿಸಿದರು. ತಾಲೂಕಿನ  ಗವಿಮಠದ ಶ್ರೀಫಿರಂಗಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಂ.ಬಿ.ಶಿವಣ್ಣ, 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿ ವೃಂದ, ಶಿಕ್ಷಕರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷಕ ವೃತ್ತಿ ಬಹಳ ಪವಿತ್ರವಾದ ವೃತ್ತಿಯಾಗಿದೆ. ರಾಷ್ಟ್ರದ ಭಾವಿ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಯಾವುದೆ ವೃತ್ತಿಯಲ್ಲಿ ಸಿಗುವುದಿಲ್ಲ. ಶಿಕ್ಷಕರಿಗೆ ನಿವೃತ್ತಿ ಎಂಬುದೇ ಇಲ್ಲ. ಕಾಯಕವನ್ನು ಶಿಕ್ಷಕ ಕೊನೆ ಉಸಿರಿನವರೆಗೂ ಮಾಡುತ್ತಾನೆ ಎಂದು ಅಭಿಪ್ರಾಯಪಟ್ಟರು.

ಸನ್ಮಾನ...
ಮಧುಗಿರಿ ತಾಲೂಕು ಮಿಡಿಗೇಶಿ ಗ್ರಾಮದಲ್ಲಿರುವ ಭಗವಾನ್ 1008 ಸುಪಾರ್ಶ್ವನಾಥ ಸ್ವಾಮಿ ಮತ್ತು ಬ್ರಹ್ಮಯಕ್ಷರ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.

ಇಂದು ಶೈಕ್ಷಣಿಕ ವಿಚಾರ ಸಂಕಿರಣ
 ತುಮಕೂರು:
ತುಮಕೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ ಮಾ.16 ರಂದು ಭಾನುವಾರ ಬೆಳಿಗ್ಗೆ  10 ಗಂಟೆಗೆ ನಗರದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ  ಉನ್ನತ ಶಿಕ್ಷಣದಲ್ಲಿ ಗುಣಾತ್ಮಕ ಆಯಾಮಗಳು-ರಾಷ್ಟ್ರೀಯ ಉಚ್ಚ ಶಿಕ್ಷಾ ಅಭಿಯಾನ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿದೆ. ಈ ವಿಚಾರ ಸಂಕಿರಣದ ಉದ್ಘಾಟನೆಯನ್ನು ತುಮಕೂರು ವಿ.ವಿ ಕುಲಪತಿ ಡಾ. ಎ.ಎಚ್. ರಾಜಾಸಾಬ್  ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಅಪರ ನಿರ್ದೇಶಕ ಪ್ರೊ. ಪ್ರಭಾಕರ.ಟಿ.ಎನ್  ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎ.ಎಂ. ನರಹರಿ, ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ, ಪ್ರೊ. ಕೆ.ಎಂ. ನಾಗರಾಜು,  ಪ್ರೊ.ಟಿ.ಎಂ. ಮುಂಜುನಾಥ್, ಡಾ. ರಾಮಚಂದ್ರಪ್ಪ, ಡಾ. ಭಾಗ್ಯವಾನ್.ಎಸ್. ಮುದಿಗೌಡ್ರು ಆಗಮಿಸುವರು.

ಮತದಾನ ಪ್ರತಿಯೊಬ್ಬರ ಕರ್ತವ್ಯ: ಶಿವಕುಮಾರ್
ಚೇಳೂರು:
ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿರುವ ಎಲ್ಲರ ಕರ್ತವ್ಯ. ಹೊಸ ಮತದಾರರು ನೋಂದಾಯಿಸಿಕೊಂಡು ಆಯಾ ಬೂತ್ಗಳಲ್ಲಿ ಮತದಾನದ ಹಕ್ಕನ್ನು ಪಡೆಯಬೇಕು ಎಂದು ಚೇಳೂರು ಒಂದನೇ ಬ್ಲಾಕ್ ನ ಮತಗಟ್ಟೆ ಅಧಿಕಾರಿ  ಸಿ.ಎಸ್. ಶಿವಕುಮಾರ್ ತಿಳಿಸಿದರು. ಚೇಳೂರಿನಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಮಕ್ಕಳು ಭಾರತ್ ಚುನಾವಣಾ ಆಯೋಗದ ಮತದಾನ ಜಾಗೃತಿ ಅರಿವು ಮೂಡಿಸಲು ಚೇಳೂರಿನ ರಾಜಬೀದಿಗಳಲ್ಲಿ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ನಮ್ಮ ದೇಶದ ಪ್ರತಿಯೊಬ್ಬ ಹೊಸ ಮತದಾರರು  ನೋಂದಾಯಿಸಿಕೊಳ್ಳಬೇಕಾದರೆ ಆ ಬೂತ್ ಮಟ್ಟದಲ್ಲಿ ಶಾಲಾ ದಾಖಲಾತಿ, ವಯಸ್ಸಿನ ದಾಖಲಾತಿಗಳನ್ನು ಕೊಟ್ಟು ಪೋಟೋ ತೆಗೆಸಿ ಮತದಾನದ ಹಕ್ಕನ್ನು ಪಡೆಯಬೇಕು ಎಂದರು.

ಹಸಿರು ಸಾಲಿನ ಶಾಲಾ ಪ್ರಶಸ್ತಿ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡಯಟ್ ಹಾಗೂ ತುಮಕೂರು ವಿಜ್ಞಾನ ಕೇಂದ್ರ ವತಿಯಿಂದ ಹಸಿರು ಸಾಲಿನ ಶಾಲಾ ಪ್ರಶಸ್ತಿಯನ್ನು ಅಣ್ಣೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ. ಎಸ್ಡಿಎಂಸಿ ಅಧ್ಯಕ್ಷ ಚನ್ನಕೇಶವ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣಯ್ಯ, ಶಿಕ್ಷಕರಾದ ಶಿವಕುಮಾರ್ ಸಿ, ರೂಪ ಹೆಚ್.ಪಿ, ಜಯಲಕ್ಷ್ಮಮ್ಮ ಮತ್ತು ಶಾಲಾ ಮಕ್ಕಳು ಇದ್ದಾರೆ.

ಗುಬ್ಬಿಯ ಕಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಗುಬ್ಬಿ :
ತಾಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯದಲ್ಲಿ ಬೆಳಗ್ಗೆಯಿಂದಲೇ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳು ತಮ್ಮ  ಇಷ್ಟಾರ್ಥ ಪೂಜೆ ಸಲ್ಲಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಪಟ್ಟಣದ ವಿವಿಧ ಸಮಾಜದವರು ಹಾಗೂ ವಿವಿಧ ಸಂಘ-ಸಂಸ್ಥೆಗಳು ವಿಶೇಷವಾಗಿ ಪಾಲಕ ಫಲಹಾರ ವಿತರಿಸಲಾಯಿತು.  ಭಕ್ತಾದಿಗಳು ರಥೋತ್ಸವಕ್ಕೆ ಬಾಳೆಹಣ್ಣು, ಧವನ ಎಸೆಯುವ ಮೂಲಕ ತಮ್ಮ ಭಕ್ತಿ ಭಾವ ಸಮರ್ಪಿಸಿದರು.

'ಮೆಗಾ ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥ'
ಗುಬ್ಬಿ:
ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿಯಾಗುವಂತಹ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಗೊಳಿಸಲು ಏಪ್ರಿಲ್ 14 ರವರೆಗೆ ಮೆಗಾ ಲೋಕ  ಅಧಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಎನ್.ನರಸಮ್ಮ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜನತಾ ನ್ಯಾಯಾಲಯದ ಮೂಲಕ ಇದುವರೆಗೆ 378 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು ಇನ್ನೂ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ರಾಜಿ ಸಂದಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಂತೆ ತಿಳಿಸಿದ ಅವರು ಬಾಕಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು.

ಕೆರೆಗೋಡಿ-ರಂಗಾಪುರ ಶಂಕರೇಶ್ವರ ರಥೋತ್ಸವ
ತಿಪಟೂರು:
ಕಲ್ಪತರು ನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಕ್ಷೇತ್ರ  ಕೆರೆಗೋಡಿ-ರಂಗಾಪುರದ ಶಂಕರೇಶ್ವರ ಸ್ವಾಮಿ ರಥೋತ್ಸವ ಇಂದು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು. ವಿವಿಧ ರೀತಿಯ ಹೂವಿನ ಹಾರ, ಬಣ್ಣ ಬಣ್ಣದ ವಸ್ತ್ರಗಳಿಂದ ರಥವನ್ನು ಶೃಂಗರಿಸಲಾಯಿತು. ವಿಶೇಷ ಪೂಜಾ ವಿಧಾನಗಳೊಂದಿಗೆ ನೆರಿದಿದ್ದ ಭಕ್ತರ ಸಮೂಹ ಶ್ರೀಗಳ ನೇತೃತ್ವದಲ್ಲಿ ರಥವನ್ನು ಎಳೆದರು. ರಥೋತ್ಸವದ ಮೇಲೆ ಹೂವು, ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳು ಲಭಿಸುವಂತೆ ದೇವರಿಗೆ ಹರಕೆ ತೀರಿಸಿ ಪ್ರಾರ್ಥನೆ ಸಲ್ಲಿಸಿದರು.  ತಾಲೂಕು ಜೆಡಿಎಸ್ ಅಧ್ಯಕ್ಷ ತಡಸೂರು ಗುರುಮೂರ್ತಿ, ಬಿಜೆಪಿ ಮುಖಂಡ ಲೋಕೇಶ್ವರ, ದಿವಾಕರ್, ಜಯಣ್ಣ ಸೇರಿದಂತೆ ಶ್ರೀಮಠದ ವಿದ್ಯಾಸಂಸ್ಥೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕೊರಟಗೆರೆ ಕ್ಷೇತ್ರದಲ್ಲಿ ಭಾರತ್ ನಿರ್ಮಾಣ್ ಯಾತ್ರೆ
 ಕೊರಟಗೆರೆ
: ಲೋಕಸಭಾ ಚನಾವಣೆ ಹಿನ್ನೆಲೆಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರ ಆದೇಶದ ಮೇರೆಗೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ್ ನಿರ್ಮಾಣ್ ಯಾತ್ರೆ ಪ್ರಾರಂಭಿಸುತ್ತಿದ್ದು ಕಾರ್ಯಕರ್ತರು ಹಾಜರಾಗುವಂತೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾರಪ್ಪ ತಿಳಿಸಿದ್ದಾರೆ.ಅವರು  ಕೇಂದ್ರ ಮತ್ತು ರಾಜ್ಯ ಸರ್ಕಾರ  ರಾಜ್ಯದಲ್ಲಿ ಜಾರಿಗೊಳಿಸಿರುವ ಜನಪ್ರಿಯ ಯೋಜನೆಗಳಾದ ಆಹಾರ ಭದ್ರತಾ ಕಾಯ್ದೆ, ಭೂಸ್ವಾದೀನ ಕಾಯ್ದೆ, ದುರ್ಬಲ ವರ್ಗದವರ ಸಬಲೀಕರಣ, ಯುವ ಜನಾಂಗಕ್ಕೆ ಉದ್ಯೋಗವಕಾಶಗಳು, ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ, ಅಲ್ಪ ಸಂಖ್ಯಾತರಿಗೆ ಸಮಾನ ಅವಕಾಶಗಳು, ಮಹಿಳೆಯರ ಸುರಕ್ಷತೆ, ಮಾಹಿತಿ ಹಕ್ಕು ಕಾಯ್ದೆ, ಇಂದಿರಾ ಅವಾಸ್ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ವಿಷನ್ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ಪಾದಯಾತ್ರೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮನವಿ...
ಕೊರಟಗೆರೆ ತಾಲೂಕಿನ ಸಿ.ಎನ್. ದುರ್ಗ ಹೋಬಳಿಯ ಜಂಪೇನಹಳ್ಳಿಯಲ್ಲಿ ಕ್ರಷರ್ ಇದ್ದು  ಇದನ್ನು ಬೇರೆಡೆ ವರ್ಗಾಯಿಸಬೇಕು ಎಂದು ವಿವಿಧ ಸಂಘಟನೆಯ ಮುಖಂಡರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.

ಕ್ರಷರ್ ಸ್ಥಳಾಂತರಕ್ಕೆ ಒತ್ತಾಯಿಸಿ ಮನವಿ ಅರ್ಪಣೆ
ಕೊರಟಗೆರೆ:
ತಾಲೂಕಿನ ಸಿ.ಎನ್. ದುರ್ಗ ಹೋಬಳಿಯ ಜಂಪೇನಹಳ್ಳಿಯಲ್ಲಿ ಕ್ರಷರ್ ಇದ್ದು  ಇದನ್ನು ಬೇರೆಡೆ ವರ್ಗಾಯಿಸಬೇಕು ಎಂದು ವಿವಿಧ ಸಂಘಟನೆಯ ಮುಖಂಡರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ದಂಡೋರದ ಯುವ ಜಿಲ್ಲಾಧ್ಯಕ್ಷ ಜೆಟ್ಟಿ ಅಗ್ರಹಾರ ನಾಗರಾಜು ಕ್ರಷರ್ ಇರುವಂತಹ ಪ್ರದೇಶದಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಜಮೀನುಗಳು ಇವೆ. ಅದೇ ರೀತಿ ನೂರಾರು ಗ್ರಾಮವಾಸಿಗಳು ವಾಸವಾಗಿದ್ದರೆ.  ಕ್ರಷರ್ನಿಂದ ಬರುತ್ತಿರುವಂತಹ ದೂಳಿನಿಂದ ಸ್ಥಳೀಯರು ಅಸ್ತಮ ಮತ್ತು ಶ್ವಾಸಕೋಶದ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇದು ನಿಲ್ಲಬೇಕಾದಲ್ಲಿ ಕ್ರಷರ್ ಸ್ಥಳಾಂತರಿಸಬೇಕು ಎಂದು ತಿಳಿಸಿದರು. ಕರವೇ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಬುಕ್ಕಪಟ್ಟಣ ಹರೀಶ್ ಪ್ರತಿಕ್ರಿಯಿಸಿ ಸಿ.ಎನ್. ದುರ್ಗ ಹೋಬಳಿಯಲ್ಲಿ ದಿನೇ ದಿನೇ ಕಲ್ಲುಗಣೆಗಾರಿಕೆ ಹೆಚ್ಚುತ್ತಿದ್ದು, ಸ್ಫೋಟದಿಂದ ಅರಣ್ಯ ಮತ್ತು ಪರಿಸರ ನಾಶವಾಗುತ್ತಿದೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement