ಪರೀಕ್ಷಾ ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ
ತುಮಕೂರು: ತುಮಕೂರು ವಿಶ್ವ ವಿದ್ಯಾನಿಲಯ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ವಿನಾಯಿತಿಯನ್ನು ಕಡಿತಗೊಳಿಸಿರುವುದರ ವಿರುದ್ಧ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿಶ್ವವಿದ್ಯಾನಿಲಯದ ಮುಂದೆ ನಡೆದ ಈ ಪ್ರತಿಭಟನೆಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕುಲಪತಿ ಭರವಸೆ: ಮುಂದಿನ ಬುಧವಾರದೊಳಗೆ ಸಕಾರಾತ್ಮಕ ಉತ್ತರ ನೀಡಲಾಗುವುದೆಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಡಾ.ಎ.ಎಚ್. ರಾಜಾಸಾಬ್ ಭರವಸೆ ನೀಡಿದರು.
ಎಐಡಿಎಸ್ಓ ನೀಡಿದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಬೇರೆ ವಿಶ್ವ ವಿದ್ಯಾನಿಲಯಗಳ ನೀತಿಯನ್ನೂ ಅಧ್ಯಯನ ಮಾಡಿ ವಿದ್ಯಾರ್ಥಿಗಳ ಪರವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಮತ್ತು ಅಲ್ಲಿಯವರೆಗೂ ಶುಲ್ಕ ಕಟ್ಟುವ ಕೊನೆ ದಿನಾಂಕವನ್ನು ಮುಂದೂಡಲಾಗುವುದು ಎಂದರು.
ಬಡ ವಿದ್ಯಾರ್ಥಿಗಳಿಗೆ ತೊಂದರೆ: ಇದುವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ರು.250 ಮಾತ್ರ ಪರೀಕ್ಷಾ ಶುಲ್ಕ ಕಟ್ಟುತ್ತಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಆದೇಶದಿಂದಾಗಿ 1300 ಮತ್ತು ಹಿಂದಿನ ವರ್ಷಗಳ ಶುಲ್ಕವನ್ನೂ ಕಟ್ಟುವಂತಹ ಪರಿಸ್ಥಿತಿ ಬಂದಿದೆ. ಗ್ರಾಮೀಣ ಪ್ರದೇಶದಿಂದ ಮತ್ತು ಬಡವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ನೀತಿಯಿಂದಾಗಿ ಓದು ಮುಂದುವರೆಸುವುದೇ ಕಷ್ಟಕರವಾಗುತ್ತದೆ.
ಪ್ರತಿಭಟನೆಯಲ್ಲಿ ನಿರತರಾದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಸೆಕ್ರೆಟೇರಿಯಟ್ ಸದಸ್ಯರಾದ ಕಾಮ್ರೇಡ್ ಬಿ.ಬಿ.ರವಿನಂದನ್ ಮಾತನಾಡಿ, ಪೂರ್ಣ ಶುಲ್ಕವನ್ನು ಕಟ್ಟಬೇಕೆನ್ನುವುದರ ಜೊತೆಗೆ ಹಿಂದಿನ ಸೆಮಿಸ್ಟರ್ಗಳಲ್ಲಿ ನೀಡಿದ ಶುಲ್ಕ ವಿನಾಯಿತಿಯ ಮೊತ್ತವನ್ನೂ ಕಟ್ಟಬೇಕೆಂದು ಆದೇಶ ಹೊರಡಿಸಿರುವುದು ಅಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಯೆಂದು ಖಂಡಿಸಿದರು.
ಮತಗಳಿಕೆಗೆ ಮಾತ್ರ ತಂತ್ರ: ಮೈಸೂರು, ಬೆಂಗಳೂರು, ಧಾರವಾಡ ವಿಶ್ವವಿದ್ಯಾನಿಲಯಗಳಲ್ಲೂ ಇದೇ ನೀತಿಯನ್ನು ಪಾಲಿಸಿದಾಗ, ಎಐಡಿಎಸ್ಓ ನೇತೃತ್ವದಲ್ಲಿ ನಡೆದ ಹೋರಾಟದಿಂದಾಗಿ ಪೂರ್ಣ ಶುಲ್ಕ ಕಟ್ಟಿಸಿಕೊಳ್ಳುವುದನ್ನು ನಿಲ್ಲಿಸಲಾಯಿತು ಎಂದರು. ಅವರು ಮುಂದುವರೆದು, ಎಲ್ಲಾ ಸರ್ಕಾರಗಳೂ ಸಹ ವಿದ್ಯಾರ್ಥಿ ವಿರೋಧಿಗಳೇ ಆಗಿದ್ದು, ಬಡವರ ಪರ, ದಲಿತರ ಪರ ಎನ್ನುವ ಮಾತುಗಳು ಮತಗಳಿಕೆಗೆ ಮಾತ್ರ ಎಂದು ಟೀಕಿಸಿದರು.
ಮತ್ತು ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಮತ್ತು ಜಂಟಿ ಕಾರ್ಯದರ್ಶಿ ರಾಜೇಶ್ವರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.