ವಿಶ್ವದ ಅತಿದೊಡ್ಡ ಅಕ್ಕಿಗಿರಣಿಗೆ ಚಾಲನೆ
ಗೋಧಿಗೆ ಸಮನಾದ ಅಕ್ಕಿ, ಪ್ರತಿದಿನ 500 ಟನ್ ಉತ್ಪಾದನಾ ಸಾಮರ್ಥ್ಯ
ಕ.ಪ್ರ.ವಾರ್ತೆ ತುಮಕೂರು ಮೇ 10
ರಾಜ್ಯದಲ್ಲೇ ಅತ್ಯಧಿಕ ಅಕ್ಕಿಗಿರಣಿಗಳಿರುವ ತುಮಕೂರಿನಲ್ಲಿ, ವಿಶ್ವದ ಅತಿದೊಡ್ಡ ಅಕ್ಕಿಗಿರಣಿ (ಸಪ್ತಗಿರಿ ಆಗ್ರೋ ಇಂಡಸ್ಟ್ರಿ)ಗೆ ಶನಿವಾರ ಚಾಲನೆ ನೀಡಲಾಗಿದೆ.
ಜಪಾನ್ ದೇಶದ ವಿಟಿಎ - 20 ಸಟಾಕಿ ಇಂಟರ್ನ್ಯಾಷನಲ್ ಕಂಪನಿಯ ಉತ್ಕೃಷ್ಟ ತಂತ್ರಜ್ಞಾನದ ನೆರವಿನೊಂದಿಗೆ ಈ ಅಕ್ಕಿಗಿರಣಿಯನ್ನು ಸ್ಥಾಪಿಸಲಾಗಿದೆ. ಪ್ರತಿದಿನ 500 ಟನ್ ಅಕ್ಕಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ವಿನೂತನ ತಂತ್ರಜ್ಞಾನ ಅಕ್ಕಿಗಿರಣಿ ತುಮಕೂರಿನ ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, ಕಡಬದ ಶ್ರೀಧರಬಾಬು ಮಾಲೀಕತ್ವದಲ್ಲಿ ದಾಪುಗಾಲಿಟ್ಟಿದೆ. ಈ ಅಕ್ಕಿಗಿರಣಿಯಲ್ಲಿ ಗೋಧಿಗೆ ಸಮಾನವಾದ ಅಧಿಕ ಪೈಬರ್, ಪೋಷಕಾಂಶಗಳನ್ನು ಹೊಂದಿರುವ ಅಕ್ಕಿಯನ್ನು ಉತ್ಪಾದಸಲಾಗುತ್ತಿದ್ದು, ಶ್ರೀವತ್ಸ ಮತ್ತು ಪದ್ಮಾವತಿ ಎಂಬ ಹೆಸರಿನಲ್ಲಿ ಅಕ್ಕಿ ಗ್ರಾಹಕರಿಗೆ ಲಭ್ಯವಾಗಲಿದೆ.
ಜಪಾನ್ನ ಸಟಾಕೆ ಕಂಪನಿಯ ವಿಟಿಎ-20 ತಂತ್ರಜ್ಞಾನದಿಂದ ಅಕ್ಕಿಯ ಮೇಲ್ಪದರವನ್ನು ಅತ್ಯಂತ ತೆಳುವಾಗಿ ತೆಗೆದು ಅಕ್ಕಿಯಲ್ಲಿಯೇ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿರುವ ಅಧಿಕ ಪೈಬರ್ ಮತ್ತು ಎಣ್ಣೆ ಅಂಶವನ್ನು ಉಳಿಸುವುದರಿಂದ ಮಧುಮೇಹ ಇರುವ ವ್ಯಕ್ತಿಗಳು ಈ ಅಕ್ಕಿಯನ್ನು ಯಾವುದೇ ಅಂಜಿಕೆಯಿಲ್ಲದೆ ಉಪಯೋಗಿಸಬಹುದಾಗಿದೆ ಎಂದು ಮಾಲೀಕ ಶ್ರೀಧರ್ ಬಾಬು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಮೇಲ್ಮನೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಬತ್ತ ಬೆಳೆಯುವ ಈ ನೆಲದಲ್ಲಿ ವಿಶ್ವದಲ್ಲಿಯೇ ಅತ್ಯಂತ ನವೀನ ತಂತ್ರಜ್ಞಾನ ಹೊಂದಿರುವ ಅಕ್ಕಿ ಗಿರಿಣಿ ತೆರೆಯುವ ಮೂಲಕ ಅಕ್ಕಿ ಗಿರಣಿಗೆ ಹೊಸ ವ್ಯಾಖ್ಯಾನವನ್ನು ನೀಡಲಾಗಿದೆ. ಶ್ರೀಧರಬಾಬು ಅವರ ಈ ಪ್ರಯತ್ನ ಸಫಲವಾಗಬೇಕು. ಜನತೆಗೆ ಒಳ್ಳೆಯ ಪೋಷಕಾಂಶದಿಂದ ಕೂಡಿದ ಅಕ್ಕಿ ದೊರೆತರೆ ಇವರ ಶ್ರಮ ಸಾರ್ಥಕ ಎಂದರು.
ಸಚಿವ ಟಿಬಿಜೆಯಿರಿಂದ ಬಿಡುಗಡೆ: ಸಪ್ತಗಿರಿ ಆಗ್ರೋ ಇಂಡಸ್ಟ್ರಿಯ ಎರಡು ಬ್ರಾಂಡ್ಗಳಾದ ಶ್ರೀವತ್ಸ ಮತ್ತು ಪದ್ಮಾವತಿ ಅಕ್ಕಿ ಬ್ರಾಂಡ್ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ರಾಜ್ಯ ಸರಕಾರ ಪೋಷಕಾಂಶವಿಲ್ಲದೆ ನರಳುತ್ತಿರುವ ಜನರಿಗೆ ಉತ್ತಮ ಪೋಷಕ ಆಹಾರ ದೊರೆಯಬೇಕು ಎಂಬ ಉದ್ದೇಶದಿಂದ ಸುಮಾರು 1.05 ಕೋಟಿ ಜನರಿಗೆ ಒಂದು ರು.ಗೆ ಒಂದು ಕಿ.ಲೋ ಅಕ್ಕಿ ವಿತರಿಸುತ್ತಿದೆ. ಶ್ರೀಧರಬಾಬು ತಮ್ಮ ಅಕ್ಕಿ ಗಿರಣಿಯಲ್ಲಿ ಉತ್ಪಾದಿಸುತ್ತಿರುವ ಅಧಿಕ ನಾರಿನ ಅಂಶ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಅಕ್ಕಿಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಕೈಗಾರಿಕೆಯ ಬೆಳವಣಿಗೆಯ ಜೊತೆಗೆ ಜನರಿಗೆ ಇದರಿಂದ ಹೆಚ್ಚಿನ ಲಾಭವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ತುಮಕೂರು ನಗರಪಾಲಿಕೆ ಮೇಯರ್ ಗೀತಾ ರುದ್ರೇಶ್, ಉದ್ಯಮಿಗಳಾದ ಎನ್.ಆರ್. ಜಗದೀಶ್, ಎನ್.ಆರ್. ವಿಶ್ವಾರಾಧ್ಯ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಂಪತ್ ಕುಮಾರ್, ಸಪ್ತಗಿರಿ ಅಗ್ರೋ ಇಂಡಸ್ಟ್ರಿ ಮಾಲೀಕ ಶ್ರೀಧರಬಾಬು, ಪತ್ನಿ ಕೆ.ಎಸ್. ವನಿತಾರಾಣಿ, ಡಿ.ಎಚ್. ಶಂಕರಮೂರ್ತಿಯವರ ಪತ್ನಿ ಸತ್ಯವತಿ ಇದ್ದರು.