ವಿಧಾನಸೌಧ ಮುತ್ತಿಗೆ: ಕೋಡಿಹಳ್ಳಿ ಎಚ್ಚರಿಕೆ
ಯಗಚಿ ನೀರಾವರಿ ಯೋಜನೆ ಜಾರಿಗೊಳಿಸದಿದ್ದರೆ ಅನಾಹುತಕ್ಕೆ ಸರ್ಕಾರವೇ ಹೊಣೆ
ಕ.ಪ್ರ.ವಾರ್ತೆ ತಿಪಟೂರು ಮೇ 20
ಕಲ್ಪತರು ನಾಡು ತಿಪಟೂರು ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ತೀವ್ರ ಬರಗಾಲ ತಾಂಡವವಾಡುತ್ತಿದ್ದು ಸಾವಿರಾರು ತೆಂಗಿನ ಮರಗಳು ಈಗಾಗಲೆ ಒಣಗಿವೆ. ಅಳಿದುಳಿದಿರುವ ತೆಂಗಿನ ಮರಗಳು ಬೀಳುವುದಕ್ಕೂ ಮೊದಲು ಯಗಚಿ ಹಿನ್ನೀರನ್ನು ತಾಲೂಕಿಗೆ ಹರಿಸಲೇಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ತಾಲೂಕಿನ ಕೊನೇಹಳ್ಳಿಯಲ್ಲಿ ತಾಲೂಕು ರೈತ ಸಂಘ ಯಗಚಿ ಹಿನ್ನೀರು ಯೋಜನೆ ಬಗ್ಗೆ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಯಗಚಿ ಅಣೆಕಟ್ಟು ತುಂಬಾ ಎತ್ತರದಲ್ಲಿರುವುದರಿಂದ ಕಾಲುವೆ ಮೂಲಕ ನೀರನ್ನು ಕಡಿಮೆ ಖರ್ಚಿನಲ್ಲಿ ತಿಪಟೂರಿಗೆ ಹರಿಸಬಹುದು. ತಾಲೂಕಿನ 16 ಕೆರೆಗಳು, ಬೇಲೂರು ಹಾಗೂ ಅರಸೀಕೆರೆ ಸೇರಿದಂತೆ ಒಟ್ಟು 54 ಕೆರೆಗಳಿಗೆ ನೀರು ಹರಿಸಬಹುದಾಗಿದೆ. ಈ ಯೋಜನೆಗೆ 120 ಕೋಟಿ ರು. ವೆಚ್ಚವಷ್ಟೆ ತಗುಲಲಿದೆ. ಪ್ರತಿ ವರ್ಷ 10 ಸಾವಿರ ಕೋಟಿ ರು.ಗಳನ್ನು ನೀರಾವರಿಗೆ ಮೀಸಲಿರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಯಗಚಿ ಯೋಜನೆಯ ಹಣ ದೊಡ್ಡ ಮೊತ್ತವಲ್ಲ. ಹಾಗಾಗಿ ಈ ಯೋಜನೆಯನ್ನು ಮುಂದಿನ ತಿಂಗಳು 15ರೊಳಗೆ ಜಾರಿಗೊಳಿಸಬೇಕು ಇಲ್ಲವೆ ಸರ್ಕಾರ ವಿಧಾನಸೌಧ ಮುತ್ತಿಗೆ ಹೋರಾಟ ಎದುರಿಸಲು ಸಿದ್ಧವಾಗಬೇಕು ಎಂದು ಚಂದ್ರಶೇಖರ್ ಎಚ್ಚರಿಸಿದರು.
ನಮಗೆ ಸಾಧ್ಯವಾಗಿಲ್ಲ: ರಾಜ್ಯದಲ್ಲಿ ಹುಟ್ಟಿ ಹರಿಯುವ ನದಿ ನೀರನ್ನೇ ತಮಿಳುನಾಡು, ಆಂಧ್ರ, ಮಹಾರಾಷ್ಟ ಮತ್ತು ಗೋವಾಗಳು ಬಳಸಿಕೊಂಡು ನೀರಾವರಿ ಪ್ರದೇಶಗಳನ್ನು ಸಮೃದ್ಧಿಪಡಿಸಿಕೊಳ್ಳುತ್ತಿವೆ. ಆದರೆ ನಮಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ರಾಜಕೀಯ ನಾಯಕರಲ್ಲಿ ಇಚ್ಛಾಶಕ್ತಿ ಇಲ್ಲದಿರುವುದೇ ಕಾರಣ. ರಾಜ್ಯದಲ್ಲಿ ಹೋರಾಟವಿಲ್ಲದೆ ಯಾವುದೇ ಕೆಲಸವೂ ಆಗುವುದಿಲ್ಲ. ನೀರು ಬೇಕಾದರೆ ಈ ಭಾಗದ ರೈತರು ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಸಮೃದ್ಧಿ: ಸಮಗ್ರ ನೀರಾವರಿ ಹೋರಾಟ ಸಮಿತಿ ಸಂಚಾಲಕ ಕೆ.ಆರ್. ಬಸವರಾಜು ಮಾತನಾಡಿ ಸಮುದ್ರ ಮಟ್ಟದಿಂದ 96 ಅಡಿ ಎತ್ತರದಲ್ಲಿ ಯಗಚಿ ಅಣೆಕಟ್ಟು ಇದೆ. ಇಲ್ಲಿ ಹೆಚ್ಚುವರಿ ಸಂಗ್ರಹವಾಗುವ 12ಟಿಎಂಸಿ ಹಿನ್ನೀರನ್ನು ಯಾವುದೇ ಯಂತ್ರದ ಸಹಾಯವಿಲ್ಲದೆ ಕಾಲುವೆ ಮೂಲಕ ತಿಪಟೂರಿಗೆ ತರಬಹುದು. ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡರೆ ಎರಡು ವರ್ಷಗಳಲ್ಲಿ 3 ತಾಲೂಕುಗಳು ಸಮೃದ್ಧಿಯಾಗುತ್ತವೆ ಎಂದು ತಿಳಿಸಿದರು.
ರಾಜ್ಯ ಹಸಿರು ಸೇನೆ ಕಾರ್ಯದರ್ಶಿ ಕೆಂಕೆರೆ ಸತೀಶ್, ಜಿಲ್ಲಾ ಸಂಚಾಕ ಶಂಕರಣ್ಣ, ರೈತಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ದೇವರಾಜು, ತಾ. ಅಧ್ಯಕ್ಷ ಬಿ.ಯೋಗೀಶ್ವರಸ್ವಾವು, ಮಾತನಾಡಿ ರಾಜಕಾರಣಿಗಳು ಹಳ್ಳಿಗಳ ಅಭಿವೃದ್ಧಿ ಎಂದರೆ ಚರಂಡಿ, ರಸ್ತೆ ಮತ್ತು ಕಟ್ಟಡ ಕಟ್ಟುವುದು ಎಂದು ಭಾವಿಸಿರುವುದು ವಿಪರ್ಯಾಸ. ಅಂತರ್ಜಲ ಪಾತಾಳ ಹೊಕ್ಕಿರುವುದು ಜನಪ್ರತಿನಿದಿಗಳಿಗೆ ಅರ್ಥವಾಗದಿರುವುದು ರೈತರ ದುರಂತವಾಗಿದ್ದು ನೀರಿನ ಹೋರಾಟಕ್ಕೆ ರೈತರು ಸ್ವಯಂ ಭಾಗವಹಿಸಿ ಧ್ವನಿಯಾಗಬೇಕು ಎಂದರು.
ನಿ.ಪ್ರಾಂಶುಪಾಲ ಎನ್. ನಂಜುಂಡಪ್ಪ, ಸಿದ್ದಾಪುರ ನಿಂಗಣ್ಣ, ನಿಂಗಪ್ಪ, ರೈತಪರ ಹೋರಾಟಗಾರ ಆಡಿಟರ್ ಶ್ರೀಕಾಂತ್, ಬೇಲೂರು, ಅರಸೀಕೆರೆ ಭಾಗದ ರೈತರು ಭಾಗವಹಿಸಿದ್ದರು. ತಹಸೀಲ್ದಾರಾ ಬಿ.ಆರ್.ಮಂಜುನಾಥ್ ಅವರನ್ನು ಸಭೆ ನಡೆಯುವ ಸ್ಥಳಕ್ಕೆ ಕರೆಸಿಕೊಂಡು ಯಗಚಿ ಯೋಜನೆಯನ್ನು ಸರ್ಕಾರ ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ತಹಸೀಲ್ದಾರ್ ಮೂಲಕ ಆಗ್ರಹಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.