ಕೋಲ್ಲಾಪುರ ಮಹಾಲಕ್ಷ್ಮೀ ನೂತನ ದೇವಾಲಯ ಪ್ರಾರಂಭೋತ್ಸವ
ಹುಳಿಯಾರು: ಹೋಬಳಿ ಜೋಡಿತಿರುಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೋಲ್ಲಾಪುರ ಮಹಾಲಕ್ಷ್ಮೀ ದೇವಿ ದೇವಾಲಯದ ವಿಮಾನಗೋಪುರದ ಮಹಾ ಕುಂಭಾಭಿಷೇಕ ಮಹೋತ್ಸವ ಗುರುವಾರ ಮತ್ತು ಶುಕ್ರವಾರ ಜರುಗಲಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಯಾದವಗಿರಿಯ ಜಗದ್ಗುರು ಶಂಕರಾನಂದ ಸರಸ್ವತಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಸುಬ್ರಮಣ್ಯ ಭಾರತೀ ಮಹಾಸ್ವಾಮೀಜಿಯವರಿಂದ ವಿಮಾನ ಗೋಪುರ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಗುರುವಾರ ಸಂಜೆ ಹುಳಿಯಾರಿನ ಗ್ರಾಮದೇವತೆ ದುರ್ಗಮ್ಮ, ಹೊಸಹಳ್ಳಿಯ ಕೋಲ್ಲಾಪುರದಮ್ಮ, ಹೊಸಳ್ಳಿಪಾಳ್ಯದ ಅಂತರಗಟ್ಟೆ ಅಮ್ಮನವರ ಆಗಮನದೊಂದಿಗೆ ಭೇಟಿ ಕಾರ್ಯ ನಡೆಯಲಿದೆ. ನಂತರ ಮಹಾಗಣಪತಿ ಪ್ರಾರ್ಥನೆ, ವೇದಪಾರಾಯಣ, ಪುರಸ್ಸರ ಯಾಗಶಾಲಾ ಪ್ರವೇಶ, ಗಂಗಾಪ್ರವೇಶ, ಗಣಪತಿಪೂಜೆ, ಸ್ವಸ್ತಿವಾಚನ, ದೇವನಾಂದಿ, ಮಹಾಪರಿಷತ್, ಆಚಾರ್ಯಾದಿ ಋತ್ವಿಕ್ ವರಣ, ಕಲಶಸ್ಥಾಪನೆ, ಅಂಕುರಾರ್ಪಣೆ, ಧ್ವಜಾರೋಹಣ, ಪಂಚಗವ್ಯ ಮೇಳನ, ರಕ್ಷ ಸೂತ್ರ ಬಂಧನ, ಕಳಶಶುದ್ಧಿ, ವಾಸ್ತು, ರಾಕ್ಷೋಘ್ನ ಹೋಮ, ಅಧಿವಾಸಾದಿಗಳು, ಕಳಶಾಭಿಷೇಕ, ಅರ್ಚನೆ, ಅಷ್ಟದಿಕ್ಪಾಲಕ ಬಲಿಪ್ರಧಾನದೊಂದಿಗೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಶುಕ್ರವಾರ ಶ್ರೀಕ್ಷೇತ್ರ ಬೆಲುಗೂರಿನ ಶ್ರೀಬಿಂದು ಮಾಧವ ಶರ್ಮ ಸ್ವಾಮಿಗಳ ಸಾನಿಧ್ಯದಲ್ಲಿ ಮುಂಜಾನೆ ಗುರುಪ್ರಾರ್ಥನೆಯೊಂದಿಗೆ ಮಹಾಗಣಪತಿಪೂಜೆ, ಕಲಶಾರ್ಚನೆ, ಶ್ರೀಸೂಕ್ತಹೋಮ, ನವಗ್ರಹ, ಪುರಸ್ಸರ ಷೋಡಶ ಕಲಾ ಹೋಮ ನಡೆಯಲಿದೆ. ಸುಹಾಸಿನಿಯರಿಂದ ಶ್ರೀಲಲಿತಾ ಸಹಸ್ರನಾಮ ಪಾರಾಯಣ,ಶ್ರೀಚಂಡಿಕಾಹವನ ಕಾರ್ಯದೊಂದಿಗೆ ಪಂಚಾಮೃತಾಭಿಷೇಕ ಸೇವೆ, ಅರ್ಚನಾದಿಗಳು ನಡೆದು ನಂತರ ಮಹಾಕುಂಭಾಭಿಷೇಕ ಮಹಾಬಲಿ ಪ್ರಧಾನ, ಮಹಾಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಕಾರ್ಯ ನಡೆಯಲಿದೆ.
ಶನೇಶ್ವರಸ್ವಾಮಿ ಕುಂಭಾಭಿಷೇಕ
ಹುಳಿಯಾರು: ಪಟ್ಟಣದ ಗಾಂಧಿಪೇಟೆಯಲ್ಲಿರುವ ಶ್ರೀಶನೇಶ್ವರಸ್ವಾಮಿದೇವಾಲಯದಲ್ಲಿ ಶನೇಶ್ವರಸ್ವಾಮಿಯ 10 ನೇ ವರ್ಷದ ಕುಂಭಾಭಿಷೇಕ ಮಹೋತ್ಸವವು ಶ್ರೀಕ್ಷೇತ್ರ ಬೆಲಗೂರಿನ ಬಿಂದುಮಾಧವಶರ್ಮ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ನೂರಾರು ಜನರ ಸಮ್ಮುಖದಲ್ಲಿ ಮಂಗಳವಾರ ಮತ್ತು ಬುಧವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಕುಂಭಾಭಿಷೇಕದ ಅಂಗವಾಗಿ ಮಂಗಳವಾರದಂದು ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮ, ಆಂಜನೇಯಸ್ವಾಮಿಯನ್ನು ಕರೆತಂದು ಪುಣ್ಯಾಹ, ದೇವನಾಂದಿ, ಮಂಡಲ ಸ್ಥಾಪನೆ, ಭಕ್ತಾದಿಗಳಿಗೆ ಕೊಡುವ ಕಳಸಸ್ಥಾಪನೆ, ಪ್ರಧಾನಕಳಸ ಮತ್ತು ನವಗ್ರಹಗಳ ಸ್ಥಾಪನಾ ಕಾರ್ಯಗಳು ನಡೆದಿದ್ದವು. ಕೈಲಾಸರೂಢ ಮಂಟಪದಲ್ಲಿ ಸ್ವಾಮಿಯ ರಾಜಬೀದಿ ಉತ್ಸವ ನಡೆಯಿತು.ಈ ಸಂದರ್ಭದಲ್ಲಿ ಶನೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ಕುಮಾರ್, ಮಲ್ಲೇಶ್, ಬಡಗಿ ರಾಮಣ್ಣ ಇತರರಿದ್ದರು.