ಬಡ್ತಿ ವಿಚಾರದಲ್ಲಿ ತಾರತಮ್ಯ
ವಿಧಾನ ಪರಿಷತ್ ಬಿಜೆಪಿ ಸದಸ್ಯ ಡಾ.ಶಿವಯೋಗಿಸ್ವಾವು ಟೀಕೆ ನಮ್ಮ ಹೋರಾಟದ ಫಲವಾಗಿ ಶಿಕ್ಷಕರಿಗೆ ನ್ಯಾಯ ಸಿಗುವ ವಿಶ್ವಾಸ
ಚಿಕ್ಕನಾಯಕನಹಳ್ಳಿ: ಹತ್ತಾರು ವರ್ಷಗಳ ಕಾಲ ವೇತನರಹಿತರಾಗಿ ಸೇವೆಸಲ್ಲಿಸಿ ನಂತರ ಅನುದಾನಕ್ಕೊಳಪಟ್ಟ ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬಡ್ತಿ ವಿಚಾರದಲ್ಲಿ ಸರ್ಕಾರದ ತಾರತಮ್ಯವನ್ನು ವಿಧಾನಪರಿಷತ್ ಸದಸ್ಯ ಡಾ.ಶಿವಯೋಗಿ ಸ್ವಾಮಿಯವರು ಖಂಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಸುಪ್ರೀಂಕೋರ್ಟ್ ತೀರ್ಪಿನನ್ವಯ ಅನುದಾನಕ್ಕೊಳಪಡುವುದಕ್ಕಿಂತ ಮುಂಚೆ ಸೇವೆ ಸಲ್ಲಿಸಿದ ಅವಧಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕಾಲ್ಪನಿಕ ಬಡ್ತಿಯನ್ನು ನೀಡುವಂತೆ ಇತ್ತ ತೀರ್ಪಿಗೆ ಸರ್ಕಾರ ತಡೆಯಾಜ್ಞೆ ತರುವ ಪ್ರಯತ್ನ ನಡೆಸಿರುವುದು ಅನ್ಯಾಯ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಕಾಲ್ಪನಿಕ ಬಡ್ತಿ
ಬೇಡಿಕೆ ಈಡೇರಿಸಲು 4000 ಸಾವಿರ ಕೋಟಿ ರು.ಬೇಕೆಂದು ಸದನಕ್ಕೆ ತಪ್ಪು ಮಾಹಿತಿ ನೀಡಿ, ವಿಧೇಯಕವನ್ನು ಕೆಳಮನೆಯಲ್ಲಿ ಮಂಡಿಸಿ ಅನುಮೋದನೆ ಪಡೆದ ಸರ್ಕಾರ ಸದರಿ ವಿಧೇಯಕವನ್ನು ಮೇಲ್ಮನೆಯಲ್ಲಿ ಮಂಡಿಸಿದಾಗ ಬಿಜೆಪಿ ಮತ್ತು ಜೆಡಿಎಸ್ 14 ಸದಸ್ಯರು ಪಕ್ಷಭೇದ ಮರೆತು ವಿರೋಧಿಸಿ ಮಸೂದೆ ಅನುಮೋದನೆಯಾಗದಂತೆ ತಡೆಹಿಡಿದಿದ್ದೇವೆ. ಇದರ ಜೊತೆಗೆ 10 ಸಂಘಟನೆಗಳು ಬೆಂಬಲಿಸಿ ಮನವಿ ನೀಡಿದ ಪರಿಣಾಮ ಮತ್ತು ಇದಕ್ಕೆ ಬೇಕಾಗುವ ಹಣ ಕೇವಲ 250 ಕೋಟಿ ರು.ಗಳೆಂಬ ಸತ್ಯವನ್ನು ಅರಿವು ಮಾಡಿಸಿದ್ದೇವೆ ಎಂದರು.
ಯಡಿಯೂರಪ್ಪ ಸರ್ಕಾರ ಮಾಡಿತ್ತು
ಕಳೆದ ಬಾರಿ ಯಡಿಯೂರಪ್ಪ ಅವರ ಬಿಜೆಪಿ ಸಕಾರದಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಆದರೆ ಈ ಸರ್ಕಾರ ಅವುಗಳನ್ನು ನಿರ್ಲಕ್ಷಿಸಿದೆ. ಶಾಶ್ವತ ಅನುದಾನ ರಹಿತ 179 ಪ್ರೈಮರಿ,189 ಪ್ರೌಢ,ಮತ್ತು 173 ಪದವಿ ಪೂರ್ವ ಕಾಲೇಜುಗಳನ್ನು ಅನುದಾಕ್ಕೊಳಪಡಿಸಿದ್ದೇವೆ.ವಿಶೇಷವಾಗಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ನೀಡುತ್ತಿದ್ದ 3000 ಗೌರವ ಧನವನ್ನು 8ರಿಂದ 10 ಸಾವಿರ ಮಾಡಿದ್ದು ನಮ್ಮ ಸರ್ಕಾರ. ಆದರೆ ಶಿಕ್ಷಣ ಇಲಾಖೆಯ ಸಿಬ್ಬಂದಿಯನ್ನು ಒಂದಲ್ಲಾ ಒಂದು ಸಂಕಷ್ಟದಲ್ಲಿ ಸಿಲುಕಿಸುವುದನ್ನೇ ಕಾಯಕ ಮಾಡಿಕೊಂಡಿರುವ ಶಿಕ್ಷಣ ಇಲಾಖೆ, ಕಾಲ್ಪನಿಕ ಬಡ್ತಿ ಸಮಸ್ಯೆ ಪರಿಹಾರವಾಗದೆ, ಜೂನ್ ತಿಂಗಳ ವೇತನ ಬಿಡುಗಡೆ ಮಾಡದಂತೆ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ನಾವು ಶಿಕ್ಷಣ ಸಚಿವರ ಗಮನಕ್ಕೆ ತಂದಾಗ ನಮ್ಮ ಎದುರೇ ತಮ್ಮ ಇಲಾಖೆಯ ಆಯುಕ್ತರಿಗೆ ವೇತನ ಬಿಡುಗಡೆಗಾಗಿ ಮೌಖಿಕ ಆದೇಶ ನೀಡಿದರು.