ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಳೆ ನಷ್ಟ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕುವೆ

Srinivasa Murthy VN
Updated On : 28 May 2014, 10:38 am

ಕನ್ನಡಪ್ರಭ ವಾರ್ತೆ, ತುಮಕೂರು, ಮೇ. 28
ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟ ಕುರಿತಂತೆ ಅಧಿಕಾರಿಗಳು ತಮಗೆ ಒಂದು ವಾರದೊಳಗಾಗಿ ವರದಿ ನೀಡಿದಲ್ಲಿ ಒಗ್ಗೂಡಿ ಗರಿಷ್ಟ ಬೆಳೆ ಪರಿಹಾರ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಭರವಸೆಯನ್ನು ನೂತನ ಸಂಸದ ಮುದ್ದಹನುಮೇಗೌಡ ನೀಡಿದರು.
ಅವರು ಜಿ.ಪಂ. ಅಧ್ಯಕ್ಷೆ ಸಾಕಮ್ಮ ನಾಗರಾಜು ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪಡೆಯುವುದು ಸಹ ಒಂದು ಕಲೆಯಂತೆ.  ಅಧಿಕಾರಿಗಳು ಬೆಳೆ ನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡುವಾಗ ರೈತರ ಹಿತಾಸಕ್ತಿಯನ್ನು ಪರಿಗಣಿಸಬೇಕು.  ವಿಸ್ತಾರವಾಗಿ ವರದಿ ನೀಡಬೇಕು ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಾವು ಶ್ರಮಿಸುವುದಾಗಿ ತಿಳಿಸಿದ ನೂತನ ಸಂಸದರು, ಅಧಿಕಾರಿಗಳು ಜನಪ್ರತಿನಿಧಿಗಳ ಹಾಗೆ ಜನರಿಗೆ ಉತ್ತರಿಸುವ ಉತ್ತರದಾಯಿತ್ವ ಹೊಂದಿರಬೇಕು.  ಸಮಸ್ಯೆಗೆ ಸಂಬಂಧಿಸಿದಂತೆ ಜನರೇ ದೂರು ತರುವವರೆಗೂ ಕಾಯಬಾರದು.  ಅಧಿಕಾರಿಗಳು ತಾವೇ ಕ್ಷೇತ್ರಗಳಿಗೆ ತೆರಳಿ ಸಮಸ್ಯೆ ಆಲಿಸಬೇಕು ಎಂದು ಕರೆ ನೀಡಿದರು.
ಶಾಸಕ ಕೆ.ಎನ್. ರಾಜಣ್ಣ  ಮಾತನಾಡಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇನ್‌ಪುಟ್ ಸಬ್ಸಿಡಿ ಬೇಡಿಕೆ, ಬಂದಿರುವ ಅನುದಾನ ಮಾಹಿತಿ ಒದಗಿಸಬೇಕು, ಬಿಡುಗಡೆಯಾಗಿರುವ ಅನುದಾನ ಚೆಕ್ ರೂಪದಲ್ಲಿ ಫಲಾನುಭವಿಗೆ ವಿತರಣೆಯಾಗದೆ ನೇರವಾಗಿ ಫಲಾನುಭವಿ ಖಾತೆಗೆ ಚೆಕ್ ನೀಡುವಂತಾಗಬೇಕು ಎಂದರು.
ಜಿ.ಪಂ. ಸದಸ್ಯ ಉಮೇಶ್  ಮಾತನಾಡಿ, ಬೆಳೆ ನಷ್ಟ ಪರಿಹಾರ ರೈತರಿಗೆ ಸಮರ್ಪಕವಾಗಿ ವಿತರಣೆಯಾಗಬೇಕು.  ಸಣ್ಣ, ದೊಡ್ಡ ರೈತರೆಂಬ ಬೇದಭಾವ ಮಾಡದೆ ಎಲ್ಲರಿಗೂ ಬೆಳೆ ಪರಿಹಾರ ವಿತರಣೆಯಾಗಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಅನುಪ್  ಮಾತನಾಡಿ, ಜಿಲ್ಲೆಯ ಸಣ್ಣ ರೈತರಿಗೆ ಸಂಬಂಧಸಿದಂತೆ 45.39ಕೋಟಿ ಹಾಗೂ ದೊಡ್‌ಡ ರೈತರಿಗೆ ಸಂಬಂಧಿಸಿದಂತೆ 12.26 ಕೋಟಿ ರು. ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಪರಿಹಾರ ರೂಪದಲ್ಲಿ ಜಿಲ್ಲೆಗೆ 17.75 ಕೋಟಿ ರು. ಬಿಡುಗಡೆಯಾಗಿದೆ ಎಂದು ವಿವರಣೆ ನೀಡಿದರು.
ತೋಟಗಾರಿಕೆ ಉಪನಿರ್ದೇಶಕಿ ಸವಿತ ಅವರು ಮಾತನಾಡಿ, ಮಾಹಿತಿ ನೀಡುತ್ತಾ, ತೆಂಗು ಪುನಶ್ಚೇತನ ಯೋಜನೆಯಡಿ ಬೆಳೆ ನಷ್ಟ ರೂಪದಲ್ಲಿ ಪ್ರತಿ ಹೆಕ್ಟೇರ್‌ಗೆ 20 ಸಾವಿರ ರು. ಪರಿಹಾರ ನಿಗದಿಯಾಗಿದ್ದು, 64 ಕೋಟಿ ರು. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಟ್ಟು ಜಿಲ್ಲೆಗೆ 7.81 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಅವ್ಯವಹಾರ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹುಚ್ಚಯ್ಯ ಅವರು ಮಾತನಾಡಿ, ನರೇಗಾ ಯೋಜನೆಯಡಿ ವರದಿಯಾಗುತ್ತಿರುವ ಅವ್ಯವಹಾರ ಪ್ರಕರಣದಿಂದ ಅಧಿಕಾರಿಗಳು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ನಿಜವಾದ ತಪ್ಪಿತಸ್ಥರ ವಿರುದ್ಧ ತನಿಖೆಯಾಗಬೇಕು.  ಥರ್ಡ್ ಪಾರ್ಟಿ ತಪಾಸಣೆ ಸಲ್ಲದು.  ತಾಂತ್ರಿಕ ಅಧಿಕಾರಿಗಳಿಂದ ಕಾಮಗಾರಿಗಳ ತಪಾಸಣೆ ನಡೆಯುವಂತಾಗಬೇಕು ಎಂದು ಆಗ್ರಹಿಸಿದರು.
ಸದಸ್ಯ ಉಮೇಶ್ , ನರೇಗಾ ಯೋಜನೆಯಡಿಯ ಹಿಂದಿನ ಎಲ್ಲಾ ಕಾಮಗಾರಿಗಳ ಬಾಬ್ತು ಚುಕ್ತ ಆಗುವವರೆಗೆ ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಜಿ.ಪಂ. ಸದಸ್ಯ ರಾಮಚಂದ್ರಪ್ಪ ಮಾತನಾಡಿ, ಸಕ್ಕಿಂಗ್ ಯಂತ್ರ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, 4 ಲಕ್ಷ ಬೆಳೆಬಾಳುವ ಯಂತ್ರವನ್ನು ಹತ್ತೂವರೆ ಲಕ್ಷ ರು. ನೀಡಿ ಖರೀದಿಸಲಾಗಿದೆ.  ಈ ಕುರಿತಂತೆ ಸಿ.ಇ.ಓ. ನೇತೃತ್ವದಲ್ಲಿ ತನಿಖೆಯಾಗಬೇಕು ಎಂದರು.
ಇದಕ್ಕೆ ಉತ್ತರಿಸಿದ ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಇ-ಟೆಂಡರ್ ಮೂಲಕ ಪಾರದರ್ಶಕ ರೀತಿಯಲ್ಲಿ ಸಕ್ಕಿಂಗ್ ಯಂತ್ರಗಳನ್ನು ಖರೀದಿಸಲಾಗಿದ್ದು, ಸಕ್ಕಿಂಗ್ ಯಂತ್ರದ ಬೆಲೆ 7.98 ಸಾವಿರ, ಸಿ.ಎಸ್.ಟಿ. ಶೇ.4ರಂತೆ 31ಸಾವಿರ, ತೆರಿಗೆ 16,598, ವ್ಯಾಟ್ 1ಲಕ್ಷ ಸೇರಿದಂತೆ ಯಂತ್ರದ ಬೆಲೆ 10 ಲಕ್ಷ ರೂ. ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದರು.
ಸ್ವತಃ ಪರಿಶೀಲನೆ: ಬೋರ್‌ವೆಲ್ ಕೊರೆತಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಹಿತಿ ನೀಡಿದಲ್ಲಿ ತನಿಖೆ ನಡೆಸಲಾಗುವುದು, ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯಲ್ಲಿ 2 ಸಾವಿರ ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಎಲ್ಲಾ ಬೋರ್‌ವೆಲ್‌ಗಳ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ತಾವೇ ಸ್ವತಃ ಬೋರ್‌ವೆಲ್ ಪರಿಶೀಲಿಸಿರುವುದಾಗಿ ತಿಳಿಸಿದರು.
ಜಿ.ಪಂ. ಸದಸ್ಯ ಡಾ. ರವಿ ಬಿ.ನಾಗರಾಜಯ್ಯ ಅವರು ಮಾತನಾಡಿ, ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ, ಸಮಯಕ್ಕೆ ಸರಿಯಾಗಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಉಪಕರಣಗಳನ್ನು ಅಳವಡಿಸುತ್ತಿಲ್ಲ.  ಹಲವೆಡೆ ಕಾಮಗಾರಿಗಳು ಮುಗಿದಿದ್ದರೂ ಬೆಸ್ಕಾಂ ವತಿಯಿಂದ ಕೆಲಸ ಆಗುತ್ತಿಲ್ಲ.  ಬೋರ್ ಕೊರೆದ ತಿಂಗಳಾದರೂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಕುಡಿಯುವ ನೀರಿನ ಯೋಜನೆಗಾಗಿ ಜಿ.ಪಂ. ವತಿಯಿಂದ ಬೆಸ್ಕಾಂಗೆ ಕೋಟ್ಯಂತರ ರು. ಅನುದಾನ ವರ್ಗಾಯಿಸಿದ್ದರೂ ಕೆಲಸ ಆಗುತ್ತಿಲ್ಲ ಎಂದು ತಿಳಿಸಿದರು.
ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಉತ್ತರಿಸಿ, ಜಿಲ್ಲೆಯಲ್ಲಿ 333 ಕುಡಿಯುವ ನೀರಿನ ಯೋಜನೆಯ ವಿದ್ಯುದ್ದೀಕರಣ ಪ್ರಕರಣಗಳು ಬಾಕಿ ಇದ್ದು, ಕುಣಿಗಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ 48 ಪ್ರಕರಣಗಳು ಬಾಕಿ ಇದ್ದು, ಈ ಪೈಕಿ 10ಣ ಪ್ರಕರಣಗಳಿಗೆ ಸರ್ವೀಸ್ ಮಾಡಲಾಗಿದ್ದು, ಜೂನ್ ತಿಂಗಳೊಳಗಾಗಿ 38 ಪ್ರಕರಣಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತ್ಯೇಕ ನಿರ್ವಹಣೆ ಮಾಡಿ
ಕುಡಿಯುವ ನೀರಿನ ವಿದ್ಯುತ್ ಉಪಕರಣ ಮತ್ತು ಟಿ.ಸಿ. ಸರಬರಾಜಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನಿರ್ವಹಣೆ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಗೋವಿಂದರಾಜು ಸೂಚಿಸಿದರು.
ಅವರು ಸಾಮಾನ್ಯ ಸಭೆಯಲ್ಲಿ ಮಾತನಾಡಿ ಸಾಧ್ಯವಾದ್ದಲ್ಲಿ ಕುಡಿಯುವ ನೀರಿನ ಟಿ.ಸಿ.ಯ ಬಣ್ಣ ಬದಲಾಯಿಸುವಂತೆ ಸೂಚಿಸಿದರು.
ತುಮಕೂರು ಜಿಲ್ಲೆಗೆ 156 ಪ್ರೌಢಶಾಲೆ ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ 40 ಕೋಟಿ ರು. ಬಿಡುಗಡೆಯಾಗಿದ್ದು, ಇದುವರೆಗೂ ಕಾಮಗಾರಿಗಳು ಆರಂಭಗೊಂಡಿಲ್ಲ ಎಂಬ ಜಿ.ಪಂ. ಸದಸ್ಯ ಡಾ ರವಿ ಬಿ.ನಾಗರಾಜಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಜಿ.ಪಂ. ಸಿ.ಇ.ಓ. ಗೋವಿಂದರಾಜು  ಈ ಕುರಿತಂತೆ ತಾವು ಸಂಬಂಧಿಸಿದ ಏಜೆನ್ಸಿಯೊಂದಿಗೆ ಮಾತನಾಡಿದ್ದು, ಇನ್ನೊಂದು ವಾರದೊಳಗಾಗಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
 ತಪ್ಪಿದಲ್ಲಿ ಸದರಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದರು.
ಯಡಿಯೂರು, ಮಾರ್ಕೋನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 4 ವರ್ಷದ ಹಿಂದೆ ಆರಂಭಗೊಂಡ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ, ಇದಕ್ಕೆ ಕಾರಣ ನೀಡುವಂತೆ ಹಾಗೂ  ದೇವರಾಜು ಅರಸು ನಿಗಮದ ವತಿಯಿಂದ ಪ್ರತಿ ತಾಲೂಕಿಗೆ 100 ರಂತೆ ಜಿಲ್ಲೆಯ 10 ತಾಲೂಕುಗಳಿಗೆ ಮಂಜೂರಾಗಿರುವ ಅಲೆಮಾರಿ, ಅರೆ ಅಲೆಮಾರಿಗಳ ವಸತಿ ಯೋಜನೆಯ ಪ್ರಗತಿ ವಿವರ ನೀಡುವಂತೆ ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement