ಸುಬ್ರಹ್ಮಣ್ಯ ಭಾರತೀ ಶ್ರೀಗೆ ಪೂರ್ಣಕುಂಭ
ಹುಳಿಯಾರು : ಹೋಬಳಿ ಜೋಡಿ ತಿರುಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೋಲ್ಹಾಪುರ ಮಹಾಲಕ್ಷ್ಮೀ ದೇವಿ ದೇವಾಲಯದ ವಿಮಾನಗೋಪುರದ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ ಆಗಮಿಸಿದ ಆಂಧ್ರಪ್ರದೇಶದ ಆದವಾನಿಯ ಜಗದ್ಗುರು ಶಂಕರಾನಂದ ಸರಸ್ವತಿ ಮಹಾಸಂಸ್ಥಾನದ ಮಠಾಧೀಶರಾದ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮೀಜಿಯವರನ್ನು ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಬೆಂಗಳೂರಿನಿಂದ ಆಗಮಿಸಿದ ಸ್ವಾಮಿಗಳನ್ನು ಗ್ರಾಮ ಪ್ರವೇಶದ್ವಾರದಲ್ಲಿ ಎದುರುಗೊಂಡು ಮಂಗಳವಾದ್ಯ ಹಾಗೂ ಪೂರ್ಣಕುಂಭಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಗ್ರಾಮದ ಶ್ರೀ ಚಂದ್ರಮೌಳೇಶ್ವರ ಮತ್ತು ಆಂಜನೇಯಸ್ವಾಮಿ ದೇವಾಲಯಗಳಿಗೆ ಭೇಟಿಕೊಟ್ಟು ಮಧ್ಯಾಹ್ನದ ಪೂಜೆಯ ನಂತರ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಪುರೋಹಿತರಾದ ಮಂಜುನಾಥ ಶರ್ಮ, ಲಕ್ಷ್ಮೀನರಸಿಂಹಯ್ಯ, ಸತ್ಯನಾರಾಯಣ, ಮಂಜುನಾಥ್, ಸೂರ್ಯನಾರಾಯಣರಾವ್, ನಂಜುಂಡರಾವ್, ನಾಗರಾಜು, ರಾಧಾಕೃಷ್ಣ ಇನ್ನಿತರರಿದ್ದರು.
ಶುಕ್ರವಾರ ಶ್ರೀಕ್ಷೇತ್ರ ಬೆಲುಗೂರಿನ ಬಿಂಧು ಮಾಧವ ಶರ್ಮ ಸ್ವಾಮಿಗಳ ಆಗಮಿಸಲಿದ್ದು ಮಹಾಗಣಾಪತಿ ಪೂಜೆ, ಕಲಶಾರ್ಚನೆ, ಶ್ರೀಸೂಕ್ತ ಹೋಮ, ನವಗ್ರಹ, ಪುರಸ್ಸರ ಷೋಡಶ ಕಲಾ ಹೋಮ ನಡೆಯಲಿದೆ.
ಸುಹಾಸಿನಿಯರಿಂದ ಶ್ರೀಲಲಿತಾ ಸಹಸ್ರನಾಮ ಪಾರಾಯಣ, ಶ್ರೀಚಂಡಿಕಾಹವನ ಕಾರ್ಯದೊಂದಿಗೆ ಪಂಚಾಮೃತಾಭಿಷೇಕ ಸೇವೆ ನಡೆದು ನಂತರ ಮಹಾಕುಂಭಾಭಿಷೇಕ ಮಹಾಬಲಿ ಪ್ರಧಾನ, ಮಹಾಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಕಾರ್ಯ ನಡೆಯಲಿದೆ.