ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೆಣ್ಣು ಭ್ರೂಣ ಹತ್ಯೆಯಿಂದ ಸಾಮಾಜಿಕ ಅಸಮತೋಲನ

Srinivasa Murthy VN
Updated On : 29 May 2014, 11:52 am

ಕುಣಿಗಲ್ : ಯಾವುದೇ ಧರ್ಮಗ್ರಂಥಗಳಲ್ಲೂ ಲಿಂಗಭೇದ ಮಾಡಬೇಕೆಂಬುದನ್ನು ಸಮರ್ಥಿಸಿಲ್ಲ ಮತ್ತು ಭ್ರೂಣ ಹತ್ಯೆ ಮಹಾಪಾಪ ಎಂದೇ ಸಾರಿವೆ. ಆದರೆ ಕೆಲವರು ಮೂಢನಂಬಿಕೆಯಿಂದಾಗಿ ಹೆಣ್ಣು ಭ್ರೂಣ ಹತ್ಯೆಯಿಂದ ಸಾಮಾಜಿಕ ಅಸಮತೋಲನ ಜೊತೆಯಲ್ಲಿ ಸಮಾಜದಲ್ಲಿ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದು ನ್ಯಾಯಾಧೀಶ ಸಾಗರ್ ಪಾಟೀಲ್ ತಿಳಿಸಿದರು.
ಬುಧವಾರ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರಿ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಸಾರ್ವಜನಿಕ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಭ್ರೂಣ ಹತ್ಯೆ ನಿಷೇಧ ಕಾಯಿದೆ ಬಗ್ಗೆ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿ, ದೇಶದಲ್ಲಿ ಸಾವಿರ ಪುರುಷರಿಗೆ 930 ಮಹಿಳೆಯರಿದ್ದಾರೆ. 70 ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಕಾರಣ ಅವಲೋಕಿಸಿದಾಗ ಕೆಲವರು ಮೂಢನಂಬಿಕೆಗೆ ಒಳಗಾಗಿ ಹೆಣ್ಣು ಭ್ರೂಣ ಹತ್ಯೆಯಂತ ಪಾಪಕೃತ್ಯಗಳಲ್ಲಿ ತೊಡಗಿದ್ದರಿಂದ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಭ್ರೂಣ ಲಿಂಗ ಪತ್ತೆ ಮಾಡುವುದು, ಮಾಡಿಸುವುದು ಎರಡೂ ಶಿಕ್ಷಾರ್ಹ ಅಪರಾಧವಾಗಿದೆ. ವೈದ್ಯರು ಇನ್ನಾದರೂ ಈ ಬಗ್ಗೆ ಅರಿವನ್ನು ಹೊಂದಿ ತಮ್ಮ ವೃತ್ತಿಯಲ್ಲಿ ಬದ್ಧತೆ
ಮೆರೆಯಬೇಕಿದೆ ಎಂದರು.
ಕಳವಳಕಾರಿ ಸಂಗತಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ, ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಅತ್ತೆಯಾದವರೇ ಹೆಣ್ಣುಭ್ರೂಣ ಹತ್ಯೆಗೆ ಪ್ರೋತ್ಸಾಹ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಭೂಮಿಯ ಮೇಲೆ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಸಮಾನವಾಗಿ ಜೀವಿಸುವ ಹಕ್ಕನ್ನು ಹೊಂದಿದ್ದು, ಭ್ರೂಣ ಪರೀಕ್ಷೆಗೆ ಪ್ರೋತ್ಸಾಹ ನೀಡಿರುವುದು ಸೇರಿದಂತೆ ಕೃತ್ಯಕ್ಕೆ ಸಹಕರಿಸುವುದೂ ಸಹ ಗಂಭೀರ ಅಪರಾಧವಾಗುತ್ತದೆ. ಕಾರಣ ಈ ಬಗ್ಗೆ ಅರಿವನ್ನು ಹೊಂದಿ ಇಂತಹ ಅಕ್ರಮ ಚಟುವಟಿಕೆಗೆ ಪ್ರೋತ್ಸಾಹ ಮಾಡಬಾರದೆಂದು ಮನವಿ ಮಾಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಭಾಗ್ಯ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆಯಿಂದಾಗುವ ಹಲವು ಸಮಸ್ಯೆಗಳ ಬಗ್ಗೆ ವಿವರಿಸುವಾಗ, ನ್ಯಾಯಾಧೀಶರ ಮುಂದೆ ಕೆಲ ಮಹಿಳೆಯರು ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದು, ಭ್ರೂಣ ಪರೀಕ್ಷೆ ಮಾಡಿ ಲಿಂಗ ಯಾವುದೆಂದು ತಿಳಿಸುವವರು ನಿಮ್ಮಂತಹ ವೈದ್ಯರು, ವೈದ್ಯರು ಲಿಂಗ ಯಾವುದೆಂದು ಹೇಳದಿದ್ದರೆ, ಪೋಷಕರಿಗೆ ಹೆಣ್ಣೋ, ಗಂಡೋ ತಿಳಿಯುವುದಿಲ್ಲ. ಆದ್ದರಿಂದ ವೈದ್ಯರು ಸರಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಈ ಅನಿಷ್ಠ ಪದ್ಧತಿಯೇ ಇರೊಲ್ಲ. ಮೊದಲು ನೀವು ಸರಿಯಾಗಿರಿ ಎಂದು ವಾದಕ್ಕೆ ಇಳಿದರು, ನಂತರ ಹಿರಿಯ ವಕೀಲರೊಬ್ಬರು, ಸಾರ್ವಜನಿಕರಿಗೆ ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡುವ ಸಮಯ ನೀಡಲಾಗುವುದೆಂದು ಸುಮ್ಮನಿರಿಸಿದರು.  ಹಿರಿಯ ವಕೀಲ ಬಿ.ಕೆ. ವೆಂಕಟಕೃಷ್ಣರಾವ್ ಮತ್ತು ವಿಶಾಲಕ್ಷಿ ಭ್ರೂಣ ಹತ್ಯೆ ನಿಷೇಧ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು.  ವಕೀಲರ ಸಂಘದ ಅಧ್ಯಕ್ಷ ಚಂದ್ರೇಗೌಡ, ಎಪಿಪಿ ವೆಂಕಟಲಕ್ಷ್ಮಮ್ಮ, ವಕೀಲರಾದ ಶಂಕರ್, ಲೋಕೇಶ್, ಚಂದ್ರಶೇಖರ್, ರಂಗಸ್ವಾಮಿ, ದಯಾನಂದ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement