ನರಸಿಂಹ ತಾಲೂಕು ಸಾಕ್ಷರ ಸಂಯೋಜಕ
ಪಾವಗಡ: ತಾಲೂಕು ಸಾಕ್ಷರ ಭಾರತ್ ಯೋಜನೆ ತಾಲೂಕು ಸಂಯೋಜಕರಾಗಿ ಶಿಕ್ಷಕ ಆರ್.ಎಂ.ನರಸಿಂಹ ಅಧಿಕಾರ ವಹಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ರೂಪಿಸಲು ಕಳೆದ 5ವರ್ಷಗಳ ಹಿಂದೆ ಸಾಕ್ಷರ ಭಾರತ್ ಎಂಬ ಯೋಜನೆ ಕೇಂದ್ರ ಸರ್ಕಾರ ಅನುಷ್ಠಾನ ಜವಾಬ್ದಾರಿಯನ್ನು ಆಡಳಿತ ನಿರ್ವಹಣೆ ತಾಪಂಗೆ ವಹಿಸಿದೆ. ಮಧುಗಿರಿ ಉಪ ನಿರ್ದೇಶಕರ ಆದೇಶದ ಮೇರೆಗೆ ಈ ಹಿಂದೆ ಸಾಕ್ಷರ್ ಭಾರತ್ ಯೋಜನೆಯ ತಾಲೂಕು ಸಂಯೋಜಕರಾಗಿ ನಿಯೋಜನೆಗೊಂಡಿದ್ದ ಚಂದ್ರಶೇಖರ್ ಎಂಬುವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ತಾ,ಬ್ಯಾಡನೂರು ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರನ್ನಾಗಿ ನಿಯೋಜಿಸಲಾಗಿದ್ದು ಖಾಲಿ ಇದ್ದ ತಾ,ಸಂಯೋಜಕರ ಹುದ್ದೆಗೆ ತಾಲೂಕು ರಾಯಚರ್ಲು ಗ್ರಾಮದ ಆರ್.ಎಂ.ನರಸಿಂಹ ಎಂಬುವರನ್ನು ನಿಯೋಜಿಸಿರುವುದಾಗಿ ತಾಪಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ತರಬೇತಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಗಳಿಗೆ ಸೇರಿದ ಅರ್ಹ ನಿರುದ್ಯೋಗಿ ಮಹಿಳೆ-ಪುರುಷ ಅಭ್ಯರ್ಥಿಗಳಿಗೆ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಫ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮೈಸೂರು ಈ ಸಂಸ್ಥೆಯ ಮೂಲಕ 5 ವಿವಿಧ ಕೋರ್ಸುಗಳಲ್ಲಿ ಉಚಿತ ತರಬೇತಿ, ಊಟ ಮತ್ತು ವಸತಿ ಸೌಲಭ್ಯದೊಂದಿಗೆ ಕಲ್ಪಿಸಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ತುಮಕೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜೂ.16 ರೊಳಗೆ ಕಚೇರಿಗೆ ಸಲ್ಲಿಸಲು ತಿಳಿಸಿದೆ.
ನಿವೃತ್ತ ಪೊಲೀಸರ ಸಭೆ
ತುಮಕೂರು: ತುಮಕೂರು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆಯನ್ನು ಜೂ. 3 ರಂದು ಬೆಳಗ್ಗೆ 11 ಗಂಟೆಗೆ ತುಮಕೂರು ಬಿ.ಎಚ್. ರಸ್ತೆಯಲ್ಲಿರುವ ಹೊಯ್ಸಳ ಹೊಟೇಲ್ ಸಭಾಂಗಣದಲ್ಲಿ ಮಾಲೂರಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ತಪ್ಪದೆ ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಲು ಹಾಗೂ ಹೆಚ್ಚಿನ ವಿವರಕ್ಕೆ 96208-39620 ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಅಧ್ಯಕ್ಷ ಮಾಲೂರಪ್ಪ ಕೋರಿದ್ದಾರೆ.
ಮಧುಗಿರಿಯಲ್ಲಿ ಹೆಚ್ಚಿದ ತಾಪಮಾನ
ಮಧುಗಿರಿ: ಮಧುಗಿರಿಯಲ್ಲಿ ಈಚೆಗೆ ಬಿದ್ದ ಮಳೆ ತಂಪೆರೆದರೂ ಕೂಡ ಏಲ್ಲೋ ಒಂದು ಕಡೆ ಏರಿದ ಧಗೆ ಬೇಸಿಗೆ ರಣಬಿಸಿಲ ತಾಪಮಾನ ಹೆಚ್ಚಳದಿಂದ ಜನರನ್ನು ಹೈರಾಣಗೊಳಿಸುತ್ತಿದೆ.
ರೈತರ, ಕೃಷಿಕರ ಹಾಗೂ ಜನರ ನಿರೀಕ್ಷೆಗೆ ತಕ್ಕಂತೆ ಮಳೆ ಬಿದ್ದು ತಾಲೂಕಿನ ಕೆಲವು ಕೆರೆ ಕುಂಟೆಗಳಿಗೆ ಅಲ್ಪ ಸ್ವಲ್ಪ ನೀರು ಹರಿದಿದೆ. ಇದರಿಂದ ಜನರಲ್ಲಿ ಹರ್ಷ ಕಂಡು ಬರುತ್ತಿದೆ. ತಾಲೂಕಿನ ಕೊಡಿಗೇನಹಳ್ಳಿ, ಐ.ಡಿ.ಹಳ್ಳಿ ಹಾಗೂ ಮಿಡಿಗೇಶಿ ಹೋಬಳಿಗಳಲ್ಲಿ ಶುದ್ಧ ಕುಡಿವ ನೀರಿಲ್ಲದೆ ಪ್ಲೋರೈಡ್ ನೀರು ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಜನತೆ ಬಳಲುವಂತಾಗಿದೆ.ಆಂದ್ರದ ಬಯಲು ಪ್ರದೇಶದ ಗಡಿಗೆ ಹೊಂದಿರುವ ಈ ಹೋಬಳಿಗಳಲ್ಲಿ ರಣ ಬಿಸಿಲು ಹೊತ್ತಿ ಉರಿಯುತ್ತಿದ್ದು ಬಡ ಜೀವ ತಣಿಸಿಕೊಳ್ಳಲು ಶುದ್ಧ ಜಲಕ್ಕಾಗಿ ಜನರು ಪರದಾಡುವಂತಾಗಿದೆ. ಆದಾಗ್ಯೂ ಹವಮಾನದಲ್ಲಿ ಹೆಚ್ಚುತ್ತಿರುವ ಬಿಸಿಲ ತಾಪಮಾನ ಧಗೆಯಿಂದ ವೀಪರಿತ ಸಕೆ, ಮೈ ಬೆವರ ನೀರು ಇಳಿಸುವ ನಿಟ್ಟಿನಲ್ಲಿ ಜನರು ಈ ಹೊತ್ತಿ ಉರಿವ ಬಿಸಿಲ ಧಗೆಗೆ ಬಸವಳಿದಿದ್ದಾರೆ. ರಾತ್ರಿ ವೇಳೆ ಹಳ್ಳಿಗಳಲ್ಲಿ ಜನ ಮನೆ ಮುಂದೆ ಮಲಗಬೇಕಾದ ಅನಿವಾರ್ಯತೆ ಒದಗಿದೆ.
ತಿಪಟೂರು: ವೈಷ್ಣವ ಸಂಘ ನಾಳೆ ಅಸ್ತಿತ್ವಕ್ಕೆ
ತಿಪಟೂರು: ಪಟ್ಟಣದ ವೈಷ್ಣವ ಸಂಘದ ವತಿಯಿಂದ ವಿಶಿಷ್ಟಾದ್ವೈತ ಸಿದ್ಧಾಂತ ಶಿರೋಮಣಿ ರಾಮಾನುಜಾಚಾರ್ಯರ ತಿರುನಕ್ಷತ್ರ ಹಾಗೂ ವೈಷ್ಣಣ ಸಂಘ ಪ್ರಾರಂಭೋತ್ಸವವು ತಾಲೂಕಿನ ಹಿಂಡಿಸ್ಕೆರೆ ಜ್ಯೋತಿ ಎಸ್ಟೇಟ್‌ನಲ್ಲಿ ಜೂ.1ರ ಭಾನುವಾರ ನಡೆಯಲಿದೆ ಎಂದು ಸಂಘದ ವಕ್ತಾರ ಗುಂಗರಮಳೆ ಮುರಳಿಧರ ತಿಳಿಸಿದ್ದಾರೆ. ಸಾನ್ನಿಧ್ಯವನ್ನು ಮಹಾ ಸುದರ್ಶನ ಹಿರೇಮಗಳೂರು ಬದರಿನಾಥ್‌ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಮಾಧವಾಚಾರ್ಯರು ವಹಿಸಲಿದ್ದಾರೆ.
ಕ್ಯಾಂಪ್ಕೋ ಶಾಖೆಗೆ ಜೂ.3 ರಂದು ಚಾಲನೆ
ಶಿರಾ: ಇಲ್ಲಿನ ಮುಖ್ಯರಸ್ತೆಯ ಸಹಕಾರಿ ಭಂಡಾರದ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಕ್ಯಾಂಪ್ಕೋ ಶಾಖೆಯನ್ನು ಜೂ.3 ರಂದು ರೈತರಿಗೆ ಅನುಕೂಲಗಳನ್ನು ಕಲ್ಪಿಸುವ ದೃಷ್ಟಿಯಿಂದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎ ಪಿಎಂಸಿ) ಆವರಣದಲ್ಲಿನ ನೂತನ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದು ಕ್ಯಾಂಪ್ಕೋ ಅಧಿಕಾರಿಗಳು ತಿಳಿಸಿದ್ದಾರೆ. ಅಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರ ಉದ್ಘಾಟನೆ ನೆರವೇರಿಸುವರು. ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆ ವಹಿಸುವರು. ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ, ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಜಿಪಂ ಸದಸ್ಯ ಅರೆಹಳ್ಳಿ ರಮೇಶ್, ಸಹಕಾರಿ ಭಂಡಾರದ ಅಧ್ಯಕ್ಷ ಚಂದ್ರಶೇಖರ ಆರಾಧ್ಯ ಮತ್ತಿತರರು ಹಾಜರಿರುವರು ಎಂದು ಪ್ರಕಟಣೆ ತಿಳಿಸಿದೆ.
ದೇವಾಲಯ ಪ್ರಾರಂಭೋತ್ಸವ
ಹುಳಿಯಾರು: ಹೋಬಳಿಯ ಜೋಡಿ ತಿರುಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೊಲ್ಲಾಪುರ ಮಹಾಲಕ್ಷ್ಮೀದೇವಿ ದೇವಾಲಯದ ವಿಮಾನಗೋಪುರದ ಮಹಾ ಕುಂಭಾಭಿಷೇಕ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಎರಡು ದಿನಗಳ ಕಾಲ ನೆರವೇರಿತು. ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಹೊಸಹಳ್ಳಿಯ ಕೊಲ್ಲಾಪುರದಮ್ಮ, ಹೊಸಳ್ಳಿಪಾಳ್ಯದ ಅಂತರಗಟ್ಟೆ ಆಗಮನದೊಂದಿಗೆ ಆಂಧ್ರದ ಆದವಾನಿಯ ಜಗದ್ಗುರು ಶಂಕರಾನಂದ ಸರಸ್ವತಿ ಸಂಸ್ಥಾನ ಮಠಾಧೀಶ ಸುಬ್ರಮಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ವಿಶೇಷ ಪೂಜೆ ನೆರವೇರಿದವು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಕೊಲ್ಲಾಪುರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಪಂ ಕ್ರಿಯಾಯೋಜನೆ
ತುಮಕೂರು: ಲಿಂಕ್ ಡಾಕ್ಯೂಮೆಂಟ್ ಪ್ರಕಾರ 2014-15ನೇ ಸಾಲಿಗೆ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮದಡಿ ಒಟ್ಟು ರು. 35,200.82ಲಕ್ಷ ಅನುದಾನ ನಿಗದಿಯಾಗಿದ್ದು, ಈ ಪೈಕಿ ತುಮಕೂರು ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ ರು.15,158.14 ಲಕ್ಷ, ತಾಲೂಕು ಪಂಚಾಯತ್‌ಗೆ ರು.16,420.59 ಲಕ್ಷ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ ರು.36,22.9 ಲಕ್ಷ ನಿಗದಿಪಡಿಸಲಾಗಿದೆ ಎಂದು ಜಿಪಂ ಸಿಇಒ ತಿಳಿಸಿದ್ದಾರೆ. ಇದೇ ರೀತಿ ಯೋಜನೇತರ ಕಾರ್ಯಕ್ರಮಗಳಿಗೆ ರು.79195.48 ಲಕ್ಷ ನಿಗದಿಪಡಿಸಲಾಗಿದ್ದು, ಇದರಲ್ಲಿ ಜಿಪಂ ಕಾರ್ಯಕ್ರಮಗಳಿಗೆ ರು. 23,750.22 ಲಕ್ಷ ಹಾಗೂ ತಾಪಂ ಕಾರ್ಯಕ್ರಮಗಳಿಗೆ 55445.26 ಲಕ್ಷ ನಿಗಧಿಯಾಗಿದ್ದು ಜಿಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ಪ್ರಸಕ್ತ ಸಾಲಿನ ಜಿಪಂ ಕಾರ್ಯಕ್ರಮಗಳಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಒಟ್ಟು ರು.40015.89 ಲಕ್ಷಗಳಿಗೆ ಕ್ರಿಯಾ ಯೋಜನೆ ಅನುಮೋದಿಸಿದಂತಾಗಿದೆ ಎಂದು ತಿಳಿಸಿದ್ದಾರೆ.
ನೋಂದಣಿ ಕಡ್ಡಾಯ
ತುಮಕೂರು: ಬಾಲನ್ಯಾಯ ಕಾಯ್ದೆ ಅನ್ವಯ ಈಗಾಗಲೇ ಹೊಸದಾಗಿ ಮಕ್ಕಳ ಪಾಲನಾ ಕೇಂದ್ರಗಳನ್ನು ಆರಂಭಿಸಿರುವ ಹಾಗೂ ಪ್ರಸ್ತುತ ಮಕ್ಕಳ ಪಾಲನಾ ಕೇಂದ್ರಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ. ಜೂ.30ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಜಿಯನ್ನು ಪಡೆದು ಸ್ವಯಂ ಸೇವಾ ಸಂಸ್ಥೆಗಳನ್ನು ಬಾಲನ್ಯಾಯ ಕಾಯ್ದೆಯಡಿ ನೋಂದಣಿ ಮಾಡಿಸುವಂತೆ ತಿಳಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 5ನೇ ಅಡ್ಡರಸ್ತೆ, ಅಶೋಕ ನಗರ, ತುಮಕೂರು. ದೂ.0816-2260021 ಸಂಪರ್ಕಿಸಲು ಕೋರಿದೆ.