ಕ್ರೈಸ್ತರಿಗೆ ಸತತ 'ಕೈ' ಟಿಕೆಟ್: ಬಿಜೆಪಿಗೆ ಸತತ 4 ವಿಜಯ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ 40 ವರ್ಷಗಳಿಂದ ಕಾಂಗ್ರೆಸ್ ಕ್ರೈಸ್ತ ಅಭ್ಯರ್ಥಿಗಳಿಗೆ ಮೀಸಲಿರಿಸಿದೆ. ಇದರಲ್ಲಿ 3 ಬಾರಿ ಕ್ರೈಸ್ತ ಶಾಸಕರು ವಿಧಾನಸೆ ಪ್ರವೇಶಿಸಲು ಶಕ್ತರಾಗಿದ್ದಾರೆ.
1972ರಲ್ಲಿ ಎಡ್ಡಿ ಸಲ್ದಾನ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾದರು. 1978ರಲ್ಲಿ ಪಿ.ಎಫ್. ರಾಡ್ರಿಗಸ್ ಕಾಂಗ್ರೆಸ್.ನಿಂದ ಗೆದ್ದರು. 1983ರಲ್ಲಿ ಬಿಜೆಪಿಯಿಂದ ಧನಂಜಯ ಕುಮಾರ್ ರಾಡ್ರಿಗಸ್ ಅವರನ್ನು ಸೋಲಿಸಿ ಕಾಂಗ್ರೆಸ್ ಕೈಯಿಂದ ಕ್ಷೇತ್ರವನ್ನು ಕಸಿದುಕೊಂಡರು. ಬಿಜೆಪಿಗೆ ಹೆಚ್ಚು ಖುಷಿ ಪಡಲು ಸಾಧ್ಯವಾಗಲಿಲ್ಲ. 1985ರಲ್ಲಿ ಬ್ಲೇಸಿಯಸ್ ಡಿಸೋಜ ಕಾಂಗ್ರೆಸ್.ನಿಂದ ಸ್ಪರ್ಧಿಸಿ ಗೆದ್ದರು. 1989ರಲ್ಲಿ ಬ್ಲೇಸಿ, ಬಿಜೆಪಿಯ ಯೋಗೀಶ್ ಭಟ್ಟರನ್ನು ಸೋಲಿಸಿದರು. 1994ರಿಂದ ಬಿಜೆಪಿ ಯೋಗೀಶ್ ಭಟ್ಟರ ಮೂಲಕ ಸತತವಾಗಿ ಕ್ಷೇತ್ರವನ್ನು ಗೆಲ್ಲುತ್ತಿದೆ. ಪ್ರತಿ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬದಲಿಸುತ್ತಿದೆ. ಬ್ಲೇಸಿ ಬಳಿಕ ಲ್ಯಾನ್ಸ್.ಲಾಟ್ ಪಿಂಟೋ, ಐವನ್ ಡಿಸೋಜ ಸ್ಪರ್ಧಿಸಿ ಸೋತಿದ್ದಾರೆ.
ಕ್ರೈಸ್ತ ಅಭ್ಯರ್ಥಿಗಳು ಸತತವಾಗಿ ಸೋಲುತ್ತಿದ್ದರೂ ಅವರನ್ನೇ ಅಭ್ಯರ್ಥಿಗಳನ್ನಾಗಿಸಲು ಕಾರಣವೂ ಇದೆ. ಕಾಂಗ್ರೆಸ್ ರಾಜ್ಯದಲ್ಲಿ ಬೆಂಗಳೂರಿನ ಭಾರತಿನಗರ ಮತ್ತು ಮಂಗಳೂರಿನ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿ ಬಾರಿಯೂ ಕ್ರೈಸ್ತರಿಗೇ ಟಿಕೆಟ್ ಕೊಡುತ್ತಿದೆ. ಒಂದು ವೇಳೆ ಟಿಕೆಟ್ ನಿರಾಕರಿಸಿದರೆ ಕ್ರೈಸ್ತರು ಮುನಿಸಿಕೊಂಡಾರು ಎಂಬ ಭಯ.
ಈ ಬಾರಿ ಕಾಂಗ್ರೆಸ್ ಗೆಲವಿಗೆ ಆಸೆ ಪಡಲು ಕಾರಣ ಇದೆ. ಇದಕ್ಕೆ ಕಾರಣ ಬಿಜೆಪಿ ವಿರೋಧಿ ಅಲೆ. ಮಹಾನಗರ ಪಾಲಿಕೆಯ 38 ವಾರ್ಡ್.ಗಳು ಸೇರಿ ದಕ್ಷಿಣ ವಿಧಾನಸಭೆ ಕ್ಷೇತ್ರ ರೂಪುಗೊಂಡಿದೆ. 38 ವಾರ್ಡ್.ಗಳಲ್ಲಿ ಕಾಂಗ್ರೆಸ್.ಗೆ ಬಿದ್ದ ಮತಗಳು 52,401. ಬಿಜೆಪಿ ಒಟ್ಟು ಪಡೆದ ಮತಗಳಿಗಿಂತ 7,837 ಮತ ಹೆಚ್ಚು.
8,760 ಅಂತರ: 2008ರ ವಿಧಾನಸಭೆ ಚುನಾವಣೆಯಲ್ಲಿ ಯೋಗೀಶ್ ಭಟ್ 60,133 ಮತಗಳಿಸಿದರೆ ಕಾಂಗ್ರೆಸ್.ನ ಐವನ್ 51,373 ಮತಗಳಿಸಿದ್ದರು. ಮತಗಳ ಅಂತರ 8,760. ಆದರೆ 2009 ಲೋಕಸಭೆ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಸೋಲುಂಡರೂ ಇದೇ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್.ಗಿಂತ 4,582 ಮತ ಹೆಚ್ಚು ಬಾಚಿದ್ದರು!
ಲೋಬೊ ಮುಂದೆ: ಈ ಬಾರಿ ಗೆಲವು ಸುಲಭ ಎಂಬ ಕಾರಣಕ್ಕೆ ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿಗೆ ಹುಟ್ಟಿದ್ದಾರೆ. ಆದರೆ ಟಿಕೆಟ್.ಗೆ ಅಂತಿಮ ಸಮರ ನಡೆಯುತ್ತಿರುವುದು ಜೆ.ಆರ್.ಲೋಬೋ ಮತ್ತು ಐವನ್ ಡಿಸೋಜ ನಡುವೆ. ಲೋಬೋಗೆ ಜನಾರ್ದನ ಪೂಜಾರಿ, ಪಾಲಿಕೆ ಕಾರ್ಪೊರೇಟರ್.ಗಳ ಬೆಂಬಲ ಇದ್ದರೆ, ಐವನ್.ಗೆ ಯುವ ಕಾಂಗ್ರೆಸ್.ನಲ್ಲಿ ಬೆಂಬಲಿಗರಿದ್ದಾರೆ. ಐವನ್ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರೆ ಲೋಬೋ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದವರು. ಸ್ವಯಂ ನಿವೃತ್ತಿ ಪಡೆದು 6 ತಿಂಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದರು. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಐವನ್ ಬೆಂಬಲಿಗರು ರಾದ್ದಾಂತ ನಡೆಸಿದ್ದರು.
8,750: ಕೇರಳಕ್ಕೆ ಸ್ತ್ರೀರಾಜ್ಯ ಎಂದು ಪುರಾಣ ಕಾಲದಲ್ಲಿ ಹೇಳುತ್ತಿದ್ದರು. ಅದಕ್ಕೆ ಒತ್ತಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಜನಸಂಖ್ಯೆಯೂ ಹೆಚ್ಚು. ದಕ್ಷಿಣ ಕ್ಷೇತ್ರದಲ್ಲಿ 1,03,566 ಮಹಿಳಾ ಮತದಾರರು ಇದ್ದರೆ, ಪುರುಷರ ಸಂಖ್ಯೆ 94,816. ಸ್ತ್ರೀಶಕ್ತಿ ಹೆಚ್ಚಳ 8,750.
ಕಾಂಗ್ರೆಸ್.ನಿಂದ ಗೆದ್ದವರೆಲ್ಲ ಸಚಿವರೇ!
1957ರಲ್ಲಿ ಕಾಂಗ್ರೆಸ್.ನಿಂದ ವೈಕುಂಠ ಬಾಳಿಗ ಸಿಪಿಐ ಅಭ್ಯರ್ಥಿ ಶಾಂತರಾಮ ಪೈ ಅವರನ್ನು ಸೋಲಿಸಿದರು. 1962ರಲ್ಲಿ ಮಣೇಲು ಶ್ರೀನಿವಾಸ ನಾಯಕ್, ಸಿಪಿಐನ ಪೈ ಅವರನ್ನು ಮತ್ತೆ ಮಣಿಸಿದರು. 1967ರಲ್ಲಿ ಕಾಂಗ್ರೆಸ್.ನ ಶ್ರೀನಿವಾಸ ನಾಯಕ್ ಪಕ್ಷೇತರ ಅಭ್ಯರ್ಥಿ ಬಶೀರ್.ನನ್ನು ಸೋಲಿಸಿದರು. ಬಳಿಕ ಕಾಂಗ್ರೆಸ್.ನಲ್ಲಿ ಕ್ರೈಸ್ತ ಅಭ್ಯರ್ಥಿಗಳೇ ಸ್ಪರ್ಧಿಸತೊಡಗಿದರು. ವೈಕುಂಠ ಬಾಳಿಗಾ, ಶ್ರೀನಿವಾಸ ನಾಯಕ್, ಎಡ್ಡಿ ಸಲ್ದಾನ, ರಾಡ್ರಿಗಸ್, ಬ್ಲೇಸಿ ಡಿಸೋಜ ಎಲ್ಲರೂ ಸಚಿವ ಸ್ಥಾನ ಪಡೆದು ಅಧಿಕಾರ ಗಳಿಸಿದ್ದು ಇಲ್ಲಿನ ವಿಶೇಷ. ಬಿಜೆಪಿಯಿಂದ ನಾಲ್ಕು ಬಾರಿ ಯೋಗೀಶ್ ಭಟ್ಟರು ಗೆದ್ದರೂ ಸಚಿವರಾಗದೆ ಇರುವುದು ಕೂಡಾ ವಿಶೇಷ. ಧನಂಜಯ ಕುಮಾರ್ ಶಾಸಕರಾದಾಗ ಅಧಿಕಾರ ಸಿಗದಿದ್ದರೂ ಸಂಸದನಾಗಿ ಗೆದ್ದು ಸಚಿವ ಸ್ಥಾನ ಖುಷಿ ಅನುಭವಿಸಿದರು.
ನೇರ ಸ್ಪರ್ಧೆ: ಬಿಜೆಪಿಯಿಂದ ಯೋಗೀಶ್ ಭಟ್ ಟಿಕೆಟ್ ಖಚಿತವಾಗಿದೆ. ಜೆಡಿಎಸ್.ನಿಂದ ಸದಾನಂದ ಶೆಟ್ಟಿ ಎಂದು 2 ತಿಂಗಳ ಮೊದಲೇ ಘೋಷಣೆಯಾಗಿದ್ದರೂ ಸ್ಪರ್ಧೆ ಆರಂಭ ಆಗುವ ಮೊದಲೇ ಶೆಟ್ಟರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಉಳಿದಂತೆ ಸಿಪಿಎಂ ಸ್ಪರ್ಧಿಸಲಿದೆ, ಆದರೆ ಪರಿಣಾಮ ನಗಣ್ಯ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.
-ಜಿತೇಂದ್ರ ಕುಂದೇಶ್ವರ