ಕಾಮಕೇಳಿ ಸಿಡಿ ತನಿಖೆ: ಪೇಜಾವರಶ್ರೀ ಆಗ್ರಹ
ಉಡುಪಿ: ಉಡುಪಿಯ ಶಾಸಕ ಕೆ. ರಘುಪತಿ ಭಟ್ ಆರೋಪಿತರಾಗಿರುವ ಕಾಮಕೇಳಿಯ ಸಿ.ಡಿ.ಯನ್ನು ಕೂಲಂಕಶ ತನಿಖೆಗೆ ಒಳಪಡಿಸಬೇಕು, ಆರೋಪಿ ರಘುಪತಿ ಭಟ್ ಅಥವಾ ಈ ಸಿ.ಡಿ. ತಯಾರಿಸಿದವರಲ್ಲಿ ಯಾರೇ ತಪ್ಪಿತಸ್ಥರಾದರೂ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಈ ಕಾಮಕೇಳಿಯ ಸಿ.ಡಿ. ಬಹಿರಂಗಗೊಂಡ ಹಿನ್ನೆಲೆಯಲ್ಲಿ, ಉಡುಪಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಜಾಪ್ರಭುತ್ವ ಸಂರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮಂಗಳವಾರ ನಗರ ಚಿತ್ತರಂಜನ್ ವೃತ್ತದಲ್ಲಿ 'ಪ್ರಜಾಪ್ರಭುತ್ವದ ಮಾನ ಉಳಿಸಿ' ಎಂಬ ಸಮಾವೇಶ ಆಯೋಜಿಸಲಾಗಿತ್ತು.
ಯಾರನ್ನೂ ಆರೋಪಿಸಲಾರೆ: ಈ ಸಮಾವೇಶದಲ್ಲಿ ಭಾಗವಹಿಸಿದ್ದ ಪೇಜಾವರ ಶ್ರೀಗಳು, ಕಾಮಕೇಳಿ ಸಿ.ಡಿ.ಯ ಸತ್ಯಾಸತ್ಯತೆಯನ್ನು ಪೂರ್ಣ ನಂಬಲಾರೆ. ತಾಂತ್ರಿಕವಾಗಿ ಕೃತಕ, ಸುಳ್ಳು ಸಿ.ಡಿ.ಗಳನ್ನು ತಯಾರಿಸುವುದಕ್ಕೆ ಸಾಧ್ಯವಿದೆ. ಆದ್ದರಿಂದ ಈ ಸಿ.ಡಿ. ಬಗ್ಗೆ ಪೂರ್ಣ ತನಿಖೆ ಆಗಬೇಕು. ಅದಕ್ಕೆ ಮೊದಲು ತಾನು ಯಾರನ್ನೂ ಅಪರಾಧಿ ಎಂದು ಹೇಳಲಾರೆ ಅಥವಾ ಸಿ.ಡಿ. ತಯಾರಿಸಿದ್ದಕ್ಕೆ ಯಾವುದೇ ಪಕ್ಷದ ಮೇಲೆ ಆರೋಪ ಹೊರಿಸಲಾರೆ ಎಂದು ಸ್ಪಷ್ಟವಾಗಿ ಹೇಳಿದರು. ಇಂದು ಹುಚ್ಚೆದ್ದು ಕುಣಿಯುತ್ತಿರುವ ವಿಜ್ಞಾನ, ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ಗಳ ಹಾವಳಿ, ಅಶ್ಲೀಲ ಚಿತ್ರಗಳ ವೀಕ್ಷಣೆಗಳ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಾತನಾಡಿದ ಹೊಸ್ಮಾರು ಶ್ರೀವಿಖ್ಯಾತಾನಂದ ಸ್ವಾಮೀಜಿ, ಈ ರೀತಿ ಯಾವುದೇ ವ್ಯಕ್ತಿಯ ತೇಜೋವಧೆ ಸರಿಯಲ್ಲ ಎಂದರಲ್ಲದೆ, ಈ ಕೃತ್ಯಕ್ಕೆ ಹೊರಗಿನವರಲ್ಲ, ರಾಜಕೀಯದೊಳಗಿವರೇ ಕಾರಣ ಎಂದು ಅಭಿಪ್ರಾಯಪಟ್ಟರು.
ವೈಯಕ್ತಿಕ ಮಾನಹಾನಿ ತಪ್ಪು: ಧರ್ಮದರ್ಶಿ ಹರಿಕೃಷ್ಣ ಪುನರೂರು, ಈ ರೀತಿ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾನಹಾನಿ ಸರಿಯಲ್ಲ. ಈ ಕಾಮಕೇಳಿ ಸಿ.ಡಿ. ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು. ದ.ಕ. ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ರಾಜಕೀಯ ಅನೈತಿಕತೆಯತ್ತ ಸಾಗುತ್ತಿದೆ. ನೈತಿಕತೆ ಕಳೆದುಕೊಂಡವರಿಂದ ಈ ಕೃತ್ಯ ನಡೆದಿದೆ ಎಂದರು.
ಉದ್ಯಮಿ ರಾಘವೇಂದ್ರ ಆಚಾರ್ಯ, ಬಿಜೆಪಿ ನಾಯಕ ಜ್ಞಾನವಸಂತ ಶೆಟ್ಟಿ, ಕಚ್ಚೂರು ಮಾಲ್ದಿದೇವಿ ದೇವಳದ ರಾಮ, ಕುಡುಬಿ ಸಮಾಜದ ನಾರಾಯಣ, ಮೊಗವೀರ ನಾಯಕ ರಾಮ ಕಾಂಚನ್, ಬ್ರಾಹ್ಮಣ ಪರಿಷತ್ನ ರಂಜನ್ ಕಲ್ಕೂರ ಇದ್ದರು. ವಾಸುದೇವ ಭಟ್ ಕಾರ್ಯಕ್ರಮ ಸಂಯೋಜಿಸಿದರು.