ಬಿಜೆಪಿ ಅಧಿಕಾರಕ್ಕೆ ಯತ್ನ: ಡೀವಿ
ಮಂಗಳೂರು: ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಯತ್ನಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, 2014 ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.
5ರ ಬಳಿಕ ಅಭ್ಯರ್ಥಿ ಪಟ್ಟಿ: ರಾಜ್ಯದ ಚುನಾವಣಾ ಸಮಿತಿ ಸೇರಿ 175 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದೆ. ಎ.5ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ದೆಹಲಿಗೆ ಆಗಮಿಸಲಿದ್ದು, ಅಂದು ಅಭ್ಯರ್ಥಿಯ ಪಟ್ಟಿಗೆ ಅನುಮೋದನೆ ಸಭೆ ನಡೆಯಲಿದೆ. ಬಳಿಕವೇ ಪಟ್ಟಿ ಬಿಡುಗಡೆಯಾಗಲಿದೆ. ಬಿಜೆಪಿ ಪಕ್ಷ ಈಗ ಶೇ.90ರಷ್ಟು ಕ್ರಿಮಿನಲ್, ಕಳಂಕಿತರಿಲ್ಲದೆ ಸ್ವಚ್ಛವಾಗಿದೆ. ಹಾಗಾಗಿ ಅಭ್ಯರ್ಥಿ ಆಯ್ಕೆ, ಪಟ್ಟಿ ಬಿಡುಗಡೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಉಡುಪಿ ಶಾಸಕ ರಘುಪತಿ ಭಟ್ ಸಿಡಿ ಪ್ರಕರಣದ ಹಿಂದೆ ಷಡ್ಯಂತರ ಇದ್ದು, ಇದನ್ನು ತನಿಖೆ ನಡೆಸುವುದಾಗಿ ಪಕ್ಷ ಹೇಳಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ದೃಷ್ಟಿಯಿಂದ ಅವರು ಈಗಾಗಲೇ ಸ್ಪರ್ಧಿಸುವುದಿಲ್ಲ ಎಂದಿದ್ದು, ಅವರ ನೇತೃತ್ವದಲ್ಲೇ ಉಡುಪಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ತಾನು ಸ್ಪರ್ಧಿಸುವ ವಿಚಾರದಲ್ಲಿ ಪಕ್ಷ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಬಳಿಕ ಪಕ್ಷ ಶಿಸ್ತಿಗೆ ಒತ್ತು ನೀಡಲಾಗಿದೆ. ಕೆಜೆಪಿಯಲ್ಲಿ ಗುರುತಿಸಿರುವ ಸಂಸದ ರಾಘವೇಂದ್ರ ವಿರುದ್ಧ ಕ್ರಮಕ್ಕೆ ಪಕ್ಷದ ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ರೇಣುಕಾಚಾರ್ಯ ಅಂಥವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಾಂಗ್ರೆಸ್ ಬಹುಮತದ ಬೀದರ್, ಗುಲ್ಬರ್ಗಗಳಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಧಾರವಾಡದ ಸ್ಥಳೀಯಾಡಳಿತ ಸದಸ್ಯರು ಸಾಮೂಹಿಕ ಬಿಜೆಪಿ ಸೇರಿದ್ದಾರೆ. ಬಿಜೆಪಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ಬದಿಗಿರಿಸಿ, ನಂತರ 2 ವರ್ಷದ ಪಾರದರ್ಶಕ ಆಡಳಿತ ನೀಡಿದೆ. ಹೈದರಾಬಾದ್ ಕರ್ನಾಟಕಕ್ಕೆ ಕೇಂದ್ರ ವಿಶೇಷ ಸ್ಥಾನಮಾನ ನೀಡಿದರೂ ಹಣಕಾಸಿನ ನೆರವು ನೀಡಿಲ್ಲ. ಕಾಂಗ್ರೆಸ್ನ ಕುಟಿಲ ನೀತಿಯನ್ನು ಜನತೆಯ ಮುಂದಿಡುವುದಾಗಿ ಹೇಳಿದರು.
17ರಂದು ಪ್ರಣಾಳಿಕೆ ಬಿಡುಗಡೆ: ರಾಜ್ಯದ ಹಿತವನ್ನು ಲಕ್ಷದಲ್ಲಿರಿಸಿ ಎ.17ರಂದು ಬಿಜೆಪಿ ಪ್ರಣಾಳಿಕೆ ಪ್ರಕಟಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಭಿವೃದ್ಧಿ ಕುರಿತ ಪ್ರತ್ಯೇಕ ಪ್ರಣಾಳಿಕೆ ಇರುವುದು ಎಂದರು.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮಾಡಿದ್ದು ಪಕ್ಷದ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸಿದ್ದೇ ವಿನಃ ಅವರ ವೈಯಕ್ತಿಕ ಯೋಜನೆಗಳಲ್ಲ ಎಂದು ಸ್ಪಷ್ಟಪಡಿಸಿದ ಡೀವಿ, ಕೆಜೆಪಿ ಸೇರಿದ ಒಬ್ಬೊಬ್ಬರೇ ಹೊರಹೋಗುತ್ತಿದ್ದಾರೆ. ಕೆಜೆಪಿ ಭವಿಷ್ಯ ಈ ಚುನಾವಣೆಗೆ ಕೊನೆಗೊಳ್ಳಲಿದೆ ಎಂದರು.