ಕೊಣಾಜೆ ಪುತ್ತಿಗೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ನಿರ್ಧಾರ
ಉಪ್ಪಿನಂಗಡಿ: ಇಲ್ಲಿನ ಕೊಣಾಜೆ ಪುತ್ತಿಗೆ ಗ್ರಾಮಸ್ಥರಿಗೆ ರಸ್ತೆಯೂ ಇಲ್ಲ, ನಳ್ಳಿ ಇದ್ದರೂ ನೀರಿಲ್ಲ.. ಹಲವಾರು ಭಾಗಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ! ಇಷ್ಟೆಲ್ಲ ಸಮಸ್ಯೆಗಳನ್ನು ಅನುಭವಿಸುವಂತೆ ಮಾಡಿದ ರಾಜಕಾರಣಿಗಳ ಗಮನ ಸೆಳೆಯಲು ಇಲ್ಲಿನ ಗ್ರಾಮಸ್ಥರು ಈಗ ವಿಧಾನಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
'ನಾವೂ ನಾಗರಿಕ ಸಮಾಜದ ಭಾಗವಾಗಿದ್ದೇವೆ. ನಮಗೂ ಸೌಲಭ್ಯಗಳನ್ನು ನೀಡಿ' ಎಂದು ಯಾಚಿಸುತ್ತಾ ಬಂದರೂ ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಮುಖಂಡರು, ಪಕ್ಷದ ಅಭ್ಯರ್ಥಿಗಳು, ಮತ ಯಾಚನೆಗೆಂದು ಬಂದವರು ಸ್ಪಂದಿಸುವ ಭರವಸೆಗಳನ್ನು ಮಾತ್ರ ನೀಡುತ್ತಾರೆ. ಆದರೆ ಚುನಾವಣೆ ಕಳೆದ ಬಳಿಕ ಗೆದ್ದವರು ಆ ಕಡೆ ತಲೆ ಹಾಕಿಲ್ಲ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕರಿಸುವ ದಿಟ್ಟ ನಿರ್ಧಾರಕ್ಕೆ ಬಂದಿದ್ದಾರೆ.
ಅಪಾಯಕಾರಿ ಗುಂಡ್ಯ ಸೇತುವೆ: ಕಳೆದ 15 ವರ್ಷಗಳ ಹಿಂದೆ ಗುಂಡ್ಯ ಹೊಳೆಗೆ ನಿರ್ಮಾಣವಾದ ತೂಗು ಸೇತುವೆ ಈ ಭಾಗದ ಜನತೆಗೆ ಆಶಾಕಿರಣವಾಗಿತ್ತು. ಇದೀಗ ಸಮರ್ಪಕ ನಿರ್ವಹಣೆ ಇಲ್ಲದೆ ಇದ್ದ ಸೇತುವೆಯೂ ಅಪಾಯಕಾರಿಯಾಗಿ ದುಃಸ್ಥಿತಿಗೆ ತುತ್ತಾಗಿದೆ.
ರಸ್ತೆ ನೆಟ್ಟಗಿಲ್ಲ: ಕೊಣಾಜೆ ಪುತ್ತಿಗೆ ಭಾಗಕ್ಕೆ ಸರಿಯಾದ ರಸ್ತೆ ಇಲ್ಲದಿರುವುದು ಇನ್ನೊಂದು ಶಾಪ. ಈ ಭಾಗದ ಜನತೆ ಪೇಟೆ ವ್ಯವಹಾರಕ್ಕಾಗಿ ಕಲ್ಲುಗುಡ್ಡೆ ರಸ್ತೆ ಮೂಲಕ ಪ್ರಯಾಣಿಸಬೇಕಾಗುತ್ತದೆ. ಸುಮಾರು 7 ಕಿ.ಮೀ. ದೂರದ ಈ ರಸ್ತೆ ಕಾಡಿನ ಮಧ್ಯ ಭಾಗದಲ್ಲಿ ಹಾದು ಹೋಗುತ್ತಿದ್ದು, ಬೇಸಗೆ ಕಾಲದಲ್ಲಿ ಜೀಪ್ ಮಾತ್ರ ಸಂಚರಿಸುತ್ತದೆ. ಮಳೆಗಾಲದಲ್ಲಂತೂ ಯಾವ ವಾಹನಗಳೂ ಹೋಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅನಾರೋಗ್ಯ ಉಂಟಾದರೂ ರಾತ್ರಿ ವೇಳೆಯಲ್ಲಿ ವಾಹನದವರು ಇಲ್ಲಿಗೆ ಬರಲು ಒಪ್ಪುತ್ತಿಲ್ಲ. ಇಲ್ಲಿನ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಆಹಾರ ಸಾಮಗ್ರಿಗಳನ್ನು ಕಲ್ಲುಗುಡ್ಡೆ ಪೇಟೆಯಲ್ಲಿ ಇಳಿಸಿ ಹೋಗಲಾಗುತ್ತದೆ. ಅಲ್ಲಿಂದ ಜೀಪ್ ಮೂಲಕ ಸಾಗಿಸಬೇಕಾಗುತ್ತದೆ.
ನೀರು, ವಿದ್ಯುತ್ ಕನಸಿನ ಮಾತು: ಈ ಭಾಗದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಎರಡು ಸಾರ್ವಜನಿಕ ಬೋರ್ವೆಲ್ಗಳು ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ. ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ, ವಿದ್ಯುತ್ ಸಂಪರ್ಕ ಇದ್ದರೂ ವಿದ್ಯುತ್ ಸರಿಯಾಗಿ ಇರುವುದಿಲ್ಲ, ವೋಲ್ಟೇಜ್ ಸಮಸ್ಯೆಯೂ ಇದೆ.
ಮತದಾನದ ಮಾತೇ ಇಲ್ಲ
ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಎಂದು ಹತ್ತು ಹಲವು ಬಾರಿ ಜನಪ್ರತಿನಿಧಿಗಳಿಗೆ ಲಿಖಿತ ಮನವಿಗಳನ್ನು ನೀಡಿದ್ದೇವೆ. ಈ ಭಾಗದ ಸಮಸ್ಯೆಗಳನ್ನು ಆಲಿಸಲು ಸ್ವತಃ ಜಿಲ್ಲಾಧಿಕಾರಿ ಬಂದರೂ ಯಾವುದೇ ಬದಲಾವಣೆ ಆಗಿಲ್ಲ. ಪುತ್ತೂರು ತಹಸೀಲ್ದಾರ್, ಕಡಬ ತಹಸೀಲ್ದಾರ್ ಸ್ವತಃ ಸಮಸ್ಯೆಗಳನ್ನು ಕಣ್ಣಾರೆ ಕಂಡರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನಮಗೆ ಅತೀವ ನೋವುಂಟಾಗಿದೆ. ಜನಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಬಂದು ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಾರೆ. ಈ ಎಲ್ಲ ಕಾರಣಗಳಿಂದ ನಮಗೆ ಭ್ರಮ ನಿರಸನವಾಗಿದೆ. ನಮ್ಮ ಹತ್ತು ಹಲವು ಮೂಲಭೂತ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸಿದ ಹೊರತು ಮತದಾನದಲ್ಲಿ ಭಾಗವಹಿಸುವ ಮಾತೇ ಇಲ್ಲ ಎಂದು ಊರ ಪ್ರಮುಖರಾದ ಬೇಬಿ ಕಿರಣ್, ಹೇಮಚಂದ್ರ, ಶಿವರಾಜ್ ಬನಾರಿ, ಸುಂದರ ಬಿ.ಆರ್. ಚಂದ್ರಶೇಖರ, ಕೇಶವ, ನಿರಂಜನ, ದಿನೇಶ್, ಶ್ರೀಧರ, ಶ್ರೀಧರ ಬೈದಡ್ಕ, ಪುರುಷೋತ್ತಮ, ತಿಮ್ಮಪ್ಪ ಅಲ್ನಾಟ, ಸೂರಪ್ಪ ಕನಿಯ, ರಾಮಣ್ಣ, ಯತೀಶ, ಹೊನ್ನಪ್ಪ ಮೊದಲಾದವರ ಉಪಸ್ಥಿತಿಯ ಸಭೆಯಲ್ಲಿ ನಾಗರಿಕರು ಸ್ಪಷ್ಟ ನಿರ್ಧಾರ ಕೈಗೊಂಡಿದ್ದಾರೆ.