ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪಕ್ಷ, ಜಾತಿಗೆ ಮ(ನ್ನ)ಣೆ ಇಲ್ಲ

Vishwanath S
Updated On : 5 Apr 2013, 11:22 am

ಮಂಗಳೂರು: ಜಿಲ್ಲೆಯ ಮತದಾರರು ಈವರೆಗೆ ಜಾತೀಯತೆ ಹಾಗೂ ಪಕ್ಷ ನೋಡಿ ಮತ ಹಾಕಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ವ್ಯಕ್ತಿ ಜತೆಗೆ ಪಕ್ಷಕ್ಕೆ ಮತದಾರರು ಬಹುಪರಾಕ್ ಹೇಳಿದ್ದಾರೆ.
ಗೌಡ, ಬ್ರಾಹ್ಮಣ ಹೆಚ್ಚಾಗಿರುವ ಸುಳ್ಯ ಹಾಗೂ ಬಿಲ್ಲವ, ಬಂಟ್ಸ್ ಅಧಿಕವಾಗಿರುವ ಮಂಗಳೂರು ದಕ್ಷಿಣದಲ್ಲಿ ಮಾತ್ರ ಪಕ್ಷ ಮಮತೆಯಲ್ಲಿ ಜನತೆ ಒಂದೇ ಪಕ್ಷದ ಒಬ್ಬರನ್ನೇ(ಅಂಗಾರ, ಯೋಗೀಶ್ ಭಟ್) ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ.
ಪಕ್ಷಗಳು ಜಾತಿಯ ಪ್ರಾಬಲ್ಯ ಗಮನಿಸಿ ಆಯಾ ಕ್ಷೇತ್ರಕ್ಕೆ ಜಾತಿವಾರು ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಅಂತಹ ಅಭ್ಯರ್ಥಿಗಳು ಗೆಲ್ಲುವುದು ಖಾತ್ರಿ ಇಲ್ಲ. ಇಲ್ಲಿ ಜಾತಿ ಪ್ರಾಬಲ್ಯದ ಕ್ಷೇತ್ರದಲ್ಲಿ ಇನ್ನೊಂದು ಜಾತಿಯ ಅಭ್ಯರ್ಥಿ ಗೆಲವು ಪಡೆಯುತ್ತಾರೆ. ಜಾತಿ ಪ್ರಾಬಲ್ಯ ಇದ್ದರೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮತದಾರರು ಜಾತೀಯತೆಯನ್ನು ನೆಚ್ಚಿಕೊಳ್ಳದಿರುವ ಉದಾಹರಣೆಯೂ ಇದೆ.
ಉಳ್ಳಾಲದಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಫರೀದ್ ನಿಧನರಾದಾಗ, ಉಪ ಚುನಾವಣೆಯಲ್ಲಿ ಅವರ ಪುತ್ರ ಯು.ಟಿ.ಖಾದರ್ ಗೆದ್ದಿದ್ದರು. ಎರಡನೇ ಅವಧಿಗೂ ಜಾತೀಯತೆಯಲ್ಲಿ ಖಾದರ್ ಗೆದ್ದಿದ್ದಾರೆ.  
ಕಳೆದ ಚುನಾವಣೆಯಲ್ಲಿ ಗೌಡ, ಮುಸ್ಲಿಂ ಹೆಚ್ಚಿರುವ ಪುತ್ತೂರಲ್ಲಿ ಬಿಜೆಪಿ ಬಂಡಾಯದಲ್ಲಿ ಬಿಜೆಪಿಗೆ(ಮಲ್ಲಿಕಾ ಪ್ರಸಾದ್) ಮತದಾರರು ಅವಕಾಶ ನೀಡಿದ್ದರು. ಬಿಲ್ಲವರ ಪ್ರಾಬಲ್ಯದ ಬೆಳ್ತಂಗಡಿಯಲ್ಲಿ ಎರಡು ಬಾರಿ ಕಾಂಗ್ರೆಸ್ (ವಸಂತ ಬಂಗೇರ)ಆಯ್ಕೆ ಮಾಡಿದ್ದಾರೆ. ಕುಡುಬಿ, ಮುಸ್ಲಿಂ ಬಾಹುಳ್ಯದ ಮಂಗಳೂರು ಉತ್ತರದಲ್ಲಿ ಬಿಜೆಪಿಯ ಕೃಷ್ಣ ಪಾಲೇಮಾರ್‌ಗೆ ಹಾಗೂ ಬಿಲ್ಲವ, ಮುಸ್ಲಿಂ ಹೆಚ್ಚಿರುವ ಬಂಟ್ವಾಳದಲ್ಲಿ ಕಾಂಗ್ರೆಸ್‌ನ ರಮಾನಾಥ ರೈ ಮತ್ತು ಬಂಟ್ಸ್, ಮುಸ್ಲಿಂ ಅಧಿಕ ಇರುವ ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ನ ಅಭಯಚಂದ್ರ ಜೈನ್‌ಗೆ ಮತದಾರರು ಎರಡು ಸಲ ಚಪ್ಪಾಳೆ ಹೊಡೆದಿದ್ದಾರೆ.
ಬಿಲ್ಲವ, ಮುಸ್ಲಿಮರು ಮೇಲುಗೈ: 2009ರ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಯಲ್ಲಿ ಬಿಲ್ಲವ 3.4 ಲಕ್ಷ, ಮುಸ್ಲಿಮರು 2.5 ಲಕ್ಷ ಮತದಾರರು ಇದ್ದಾರೆ. ಬಂಟರು 1.45 ಲಕ್ಷ, ಒಕ್ಕಲಿಗ 1.22 ಲಕ್ಷ, ಕ್ರೈಸ್ತರು 1.15 ಲಕ್ಷ, ಜಿಎಸ್‌ಬಿ 1.05 ಲಕ್ಷ, ಬ್ರಾಹ್ಮಣ 0.90 ಲಕ್ಷ, ಮೊಗವೀರ 0.85 ಲಕ್ಷ ಹಾಗೂ ಇತರರು 0.80 ಲಕ್ಷ ಸೇರಿ ಒಟ್ಟು 13 ಲಕ್ಷ ಮತದಾರರಿದ್ದರು.
ಕ್ಷೇತ್ರವಾರು ನಿರ್ಣಾಯಕ ಯಾರು?: 2008ರ ವಿಧಾನಸಭಾ ಕ್ಷೇತ್ರವಾರು ಲೆಕ್ಕಾಚಾರ ಪ್ರಕಾರ ಮಂಗಳೂರು ದಕ್ಷಿಣ ಬಿಲ್ಲವ, ಬಂಟರು. ಮಂಗಳೂರು ಉತ್ತರ ಬಂಟ್ಸ್, ಮುಸ್ಲಿಂ. ಮಂಗಳೂರು ಮುಸ್ಲಿಂ, ಮೊಗವೀರ. ಮೂಡುಬಿದಿರೆ ಬಂಟ್ಸ್, ಕ್ರೈಸ್ತರು. ಬಂಟ್ವಾಳ ಬಿಲ್ಲವ, ಮುಸ್ಲಿಂ. ಬೆಳ್ತಂಗಡಿ ಬಿಲ್ಲವ, ಗೌಡ. ಪುತ್ತೂರು ಮುಸ್ಲಿಂ, ಗೌಡ. ಸುಳ್ಯ ಗೌಡ, ಬ್ರಾಹ್ಮಣ ನಿರ್ಣಾಯಕರು. ಈಗ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಜಾತಿವಾರು ಲೆಕ್ಕಾಚಾರದಲ್ಲೂ ಶೇಕಡಾವಾರು ಪ್ರಮಾಣ ಏರಿಕೆಯಾಗಲಿದೆ.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement