ಸರಕು ನಿರ್ವಹಣೆ: ಎನ್‌ಎಂಪಿಟಿ ಶೇ.12.43 ಸಾಧನೆ
ಮಂಗಳೂರು: 2012-13ನೇ ಆರ್ಥಿಕ ವರ್ಷದಲ್ಲಿ ನವಮಂಗಳೂರು ಬಂದರು ಮಂಡಳಿ(ಎನ್‌ಎಂಪಿಟಿ) 37.04 ಮಿಲಿಯನ್ ಟನ್ ಸರಕು ನಿರ್ವಹಿಸಿದ್ದು, ಕಳೆದ ವರ್ಷಕ್ಕೆ(32.94 ಮಿಲಿಯನ್ ಟನ್) ಹೋಲಿಸಿದರೆ ಇದು ಶೇ.12.43 ಗರಿಷ್ಠ ಪ್ರಗತಿ ದಾಖಲಿಸಿದೆ ಎಂದು ಮಂಡಳಿ ಅಧ್ಯಕ್ಷ ತಮಿಳ್‌ವಾಣನ್ ತಿಳಿಸಿದ್ದಾರೆ.
ಗುರುವಾರ ಎನ್‌ಎಂಪಿಟಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾ ಯಾನ ಸಚಿವಾಲಯ ಗುರಿಗಿಂತ ಶೇ.2.88 ಸಾಧನೆ ಮಾಡಿದಂತಾಗಿದೆ. ಅದೇ ರೀತಿ ಕಲ್ಲಿದ್ದಲು, ಕಚ್ಚಾ ತೈಲ ಉತ್ಪನ್ನಗಳ ನಿರ್ವಹಣೆ ಗಣನೀಯವಾಗಿ ಹೆಚ್ಚಿಸಿದೆ. ಸರಕು ನೌಕೆಗಳ ಆಗಮನ ಶೇ.7.55 ಹೆಚ್ಚಳವಾಗಿದ್ದು, ಕಳೆದ ಅವಧಿಗಿಂತ(45,009 ಮಿಲಿಯನ್ ಟನ್)ಈ ಬಾರಿ 48,409 ಮಿಲಿಯನ್ ಟನ್ ಸರಕು ನಿರ್ವಹಿಸಲಾಗಿದೆ. 6 ಮಿಲಿಯನ್ ಟನ್ ರೇಲ್ವೆ ಸರಕು ನಿರ್ವಹಣೆ ಮಾಡಲಾಗಿದ್ದು, ಶೇ.55 ಪ್ರಗತಿ ಸಾಧಿಸಲಾಗಿದೆ ಎಂದರು.
ಕಚ್ಚಾ ತೈಲ 142.18 ಮಿಲಿಯನ್ ಟನ್, ಎಂಆರ್‌ಪಿಎಲ್ ಉತ್ಪನ್ನ 78.26 ಮಿ.ಟನ್, ಕಲ್ಲಿದ್ದಲು 69.11 ಮಿ.ಟನ್, ಖಾದ್ಯ ತೈಲ 7.83 ಮಿ.ಟನ್, ಮೆಕ್ಕೆ ಜೋಳ 1.77 ಮಿ.ಟನ್, ಸಿಮೆಂಟ್ 2.62 ಮಿ.ಟನ್, ಕಬ್ಬಿಣ ಅದಿರು 15.22 ಮಿ.ಟನ್, ಎಲ್‌ಪಿಜಿ 17.83 ಮಿ.ಟನ್, ಕೆಐಒಸಿಎಲ್ ಕಬ್ಬಿಣ 10.94 ಮಿ.ಟನ್, ಕಚ್ಚಾ ಗೇರು ಬೀಜ 6534 ಮಿ.ಟನ್ ಸೇರಿದಂತೆ ಒಟ್ಟು 48,409 ಮಿ.ಟನ್ ಸರಕು ನಿರ್ವಹಿಸಲಾಗಿದೆ ಎಂದರು.
ಕಳೆದ ಅವಧಿಯಲ್ಲಿ ಎನ್‌ಎಂಪಿಟಿ ರು. 100 ಕೋಟಿ ನಿವ್ವಳ ಲಾಭ ಗಳಿಸಿದೆ. ಎನ್‌ಎಂಪಿಟಿ ಸೊತ್ತುಗಳಿಗೆ ಇದೇ ಮೊದಲ ಬಾರಿಗೆ ಸಾಮಾನ್ಯ ವಿಮೆಗೆ ಒಳಪಡಿಸಲು ರು. 10 ಕೋಟಿ ವ್ಯಯಿಸಲು ನಿರ್ಧರಿಸಿದೆ.
ಅಭಿವೃದ್ಧಿ ಯೋಜನೆಗಳು: ಎನ್‌ಎಂಪಿಟಿ ಪಿಒಎಲ್ ಬರ್ತ್‌ನಲ್ಲಿ ರು. 79 ಕೋಟಿ ವೆಚ್ಚದಲ್ಲಿ ಟ್ಯಾಂಕರ್ ನೌಕೆ ತಂಗಲು ಬರ್ತ್ ನಿಮಾಣ ಕಾಮಗಾರಿ ಮುಕ್ತಾಯವಾಗಿದೆ. ಇದು 7.80 ಮಿ.ಟನ್ ಸರಕು ನಿರ್ವಹಣಾ ಸಾಮರ್ಥ್ಯ ಹೊಂದಿದೆ. ಎಂಆರ್‌ಪಿಎಲ್‌ನ ಎಸ್‌ಪಿಎಂ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರವೇ 18 ಮಿ.ಟನ್ ಹೆಚ್ಚುವರಿ ನಿರ್ವಹಣೆ ಸಾಮರ್ಥ್ಯದ ಘಟಕ ಶೀಘ್ರ ಕಾರ್ಯಗತಗೊಳ್ಳಲಿದೆ. ಯಾರ್ಡ್‌ನಲ್ಲಿ ಬಂದರು ರಸ್ತೆ ಅಭಿವೃದ್ಧಿಗೆ ರು. 88.75 ಕೋಟಿ ವೆಚ್ಚವಾಗಲಿದೆ. ಅಹುಜಾ ಕಂಪನಿಯಿಂದ ರು. 95 ಕೋಟಿಯಲ್ಲಿ ಎರಡನೇ ಸಿಮೆಂಟ್ ಟರ್ಮಿನಲ್ ರಚನೆಯಾಗಲಿದೆ. ಆಹಾರ ವಸ್ತು ಮತ್ತು ರಸಗೊಬ್ಬರ ದಾಸ್ತಾನಿಗೆ ರು. 9.15 ಕೋಟಿಯಲ್ಲಿ 20 ಸಾವಿರ ಟನ್ ಸಾಮರ್ಥ್ಯದ 2 ಹೆಚ್ಚುವರಿ ಶೈತ್ಯಾಗಾರ ರಚನೆಗೆ ಮಂಡಳಿ ಒಪ್ಪಿಗೆ ನೀಡಿದೆ.
ಹೊಸ 17ನೇ ಬರ್ತ್ ರಚನೆಗೆ ಸರ್ಕಾರದ ಸಮ್ಮತಿ ಸಿಕ್ಕಿದೆ. ಇದನ್ನು ರು. 137 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅವರು ವಿವರಿಸಿದರು.
ಕರಾಚಿ ಪ್ರವಾಸಿ ನೌಕೆ: ಮುಂಬಾಸದಿಂದ ವಯಾ ಕರಾಚಿ ಮುಖೇನ ನೇರ ಪ್ರವಾಸಿ ನೌಕೆಗೆ ಪ್ರಾರಂಭಿಸುವ ಪ್ರಸ್ತಾಪ ಇದೆ. ಇದರಿಂದ ಮಂಗಳೂರಿನ ಪ್ರೇಕ್ಷಣೀಯ ಸ್ಥಳ ವೀಕ್ಷಿಸುವವರಿಗೆ ಅನುಕೂಲವಾಗಲಿದೆ. ಈ ವರ್ಷದಲ್ಲಿ 15 ಐಷಾರಾಮಿ ನೌಕೆಯಲ್ಲಿ 10,196 ಮಂದಿ ಎನ್‌ಎಂಪಿಟಿಗೆ ಆಗಮಿಸಿದ್ದಾರೆ. ಕಳೆದ ಅವಧಿಯಲ್ಲಿ ಹೀಗೆ ಆಗಮಿಸಿದ ಪ್ರವಾಸಿಗರ ಸಂಖ್ಯೆ 17 ಟ್ರಿಪ್‌ನಲ್ಲಿ 10620 ಮಂದಿ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡೆಪ್ಯೂಟಿ ಮೆನೇಜರ್ ಟಿ.ಎನ್.ಮೂರ್ತಿ, ಕಾರ್ಯದರ್ಶಿ ಕ್ಯಾಪ್ಟನ್ ತಿವಾರಿ, ಟ್ರಾಫಿಕ್ ಮೆನೇಜರ್ ದೊಡ್ಡಮಹದೇವ ಹಾಜರಿದ್ದರು.