ಉಡುಪಿ ಜಿಲ್ಲೆಗೆ 3 ರಾಷ್ಟ್ರೀಯ ಪ್ರಶಸ್ತಿ
ಕ.ಪ್ರ.ವಾರ್ತೆ ಉಡುಪಿ ಏ.5-
ಭಾರತ ಸರ್ಕಾರವು ಪಂಚಾಯತ್‌ರಾಜ್ ಸಂಸ್ಥೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ ಪಂಚಾಯಿತಿ (ಜಿಪಂ, ತಾಪಂ, ಗ್ರಾಪಂ) ಸಂಸ್ಥೆಗಳಿಗೆ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ಈ ಮೂರು ಪ್ರಶಸ್ತಿಗಳು ಉಡುಪಿ ಜಿಲ್ಲೆಗೆ ಸಂದಿವೆ ಮತ್ತು 3 ಪ್ರಶಸ್ತಿಗಳನ್ನು ಒಂದೇ ಜಿಲ್ಲೆ ಪಡೆದುಕೊಂಡಿರುವುದು ದೇಶದಲ್ಲಿಯೇ ಪ್ರಥಮವಾಗಿದ್ದು, ಒಂದು ದಾಖಲೆಯಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಪಂ ಸಿಇಒ ಎಸ್.ಎ. ಪ್ರಭಾಕರ ಶರ್ಮ, 2012-13ನೇ ಸಾಲಿನ ಈ ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನಾ ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿ ಜಿಪಂ, ಕಾರ್ಕಳ ತಾಪಂ ಹಾಗೂ ಮತ್ತು ಮರವಂತೆ ಗ್ರಾಪಂಗಳು ಆಯ್ಕೆಯಾಗಿವೆ ಎಂದರು. ಈ ಪ್ರಶಸ್ತಿಗಳನ್ನು 24ರಂದು ನಡೆಯುವ 'ಪಂಚಾಯತ್‌ರಾಜ್ ದಿವಸ' ಆಚರಣೆ ಸಮಾರಂಭದಲ್ಲಿ ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪಡೆದ ಜಿಪಂಗೆ 40 ಲಕ್ಷ, ತಾಪಂಗೆ 20 ಲಕ್ಷ ಹಾಗೂ ಗ್ರಾಪಂಗೆ 14 ಲಕ್ಷ ಪ್ರೋತ್ಸಾಹ ಅನುದಾನವನ್ನೂ ಪ್ರಶಸ್ತಿಯೊಂದಿಗೆ ನೀಡಲಾಗುತ್ತದೆ ಎಂದರು.