ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೇಂದ್ರ ಹಣಹಾಸು ಇಲಾಖೆ ಕಾರ್ಯದರ್ಶಿ ಗುಜರಾಲ್‌ಗೆ ನ್ಯಾಯಾಂಗನಿಂದನೆ ನೋಟಿಸ್

Vishwanath S
Updated On : 6 Apr 2013, 12:28 pm

ಬೆಂಗಳೂರು: ಮಲೆನಾಡಿನ ಅಡಕೆ ಬೆಳೆಗಾರರಿಗೆ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತರುವಲ್ಲಿ ವಿಫಲವಾಗಿರುವ ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿ ಜೆ.ಎಸ್. ಗುಜರಾಲ್ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
10 ಎಕರೆಗೂ ಕಡಿಮೆ ಜಮೀನು ಹೊಂದಿರುವ ಅಡಕೆ ಬೆಳೆಗಾರರ ಸಾಲ ಮನ್ನಾ ಪ್ರಸ್ತಾವನೆಯನ್ನು ಮೂರು ತಿಂಗಳಲ್ಲಿ ಜಾರಿಗೆ ತರುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದ ಸರ್ಕಾರದ ವಿರುದ್ಧ ಮಲೆನಾಡು ಕಿಸಾನ್ ಸಂಘ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎನ್.ಕೆ.ಪಾಟೀಲ್ ಹಾಗೂ ನ್ಯಾ.ಸಿ.ಆರ್.ಕುಮಾರಸ್ವಾಮಿ ಅವರಿದ್ದ ವಿಭಾಗೀಯ ಪೀಠ, ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ  ಜಿಲ್ಲೆಗಳಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಎಂಬ ಗೋರಕ್ ಸಿಂಗ್ ವರದಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಅನುಕೂಲಕರವಾಗುವಂತಹ ಯೋಜನೆಯನ್ನು ಜಾರಿಗೆ ತರಲು ಮೂರು ತಿಂಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದರು. ಆದರೆ, ಇಲ್ಲಿಯವರೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಬಂಧ ತಾವು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅರ್ಜಿಯೇನಿತ್ತು?:  ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಡುತ್ತಿರುವ ಹಳದಿ ರೋಗ,  ಬೇರು ರೋಗ ಹಾಗೂ ಕೊಳೆ ರೋಗಗಳಿಂದ ಅಡಕೆ ಬೆಳೆಗಾರರ ವಾರ್ಷಿಕ ಆದಾಯ ಹತ್ತು ಪಟ್ಟು ಇಳಿಮುಖವಾಗಿದೆ.  ಇದರಿಂದ ಕಡಿಮೆ ಪ್ರಮಾಣದ ಜಮೀನು ಹೊಂದಿರುವ ರೈತರು ಸಾಲ ಮರುಪಾವತಿ ಮಾಡಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಕುರಿತು ಅಧ್ಯಯನ ನಡೆಸಿ, 10 ಎಕರೆಗೂ ಕಡಿಮೆ ಜಮೀನು ಹೊಂದಿರುವ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು 2009ರಲ್ಲಿ ಗೋರಕ್ ಸಿಂಗ್ ವರದಿ ಶಿಫಾರಸು ಮಾಡಿದೆ.
ಅಲ್ಲದೆ, ಉತ್ತರ ಕನ್ನಡದ ಅಡಕೆ ಬೆಳೆಗಾರರ ಸಂಕಷ್ಟವನ್ನು ಗಮನದಲ್ಲಿರಿಸಿಕೊಂಡು 2012ರ ಜನವರಿ 13ರಂದು ಕೇಂದ್ರ ಸರ್ಕಾರ  'ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಅಡಕೆ ಬೆಳೆಗಾರರ ಪುನಶ್ಚೇತನ ಹಾಗೂ ಇಳುವರಿ ಹೆಚ್ಚಳ' ಯೋಜನೆಯನ್ನು ಜಾರಿಗೆ ತಂದಿದೆ. ಇದರ ಜಾರಿಯ ಜವಾಬ್ದಾರಿಯನ್ನು ನಬಾರ್ಡ್ ಹಾಗೂ ರಾಜ್ಯದ ಎಸ್‌ಎಲ್‌ಬಿಸಿ ಕನ್ವೇನರ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್‌ಗಳಿಗೆ ವಹಿಸಿದೆ. ಆದರೆ, ಇಲ್ಲಿಯವರೆಗೆ ಅದು ಜಾರಿಗೆ ಬಂದಿಲ್ಲ.  ಇಲ್ಲಿಯವರೆಗೆ ಮೂರು ಜಿಲ್ಲೆಗಳಲ್ಲಿ ಒಟ್ಟು 42 ಸಾವಿರ ಹೆಕ್ಟೇರ್ ಅಡಕೆ ಬೆಳೆಯುವ ಪ್ರದೇಶ ಕೊಳೆ ಹಾಗೂ ಹಳದಿ ರೋಗದಿಂದ ನಾಶವಾಗಿವೆ. ಇದರಿಂದ ಅಡಕೆ ಬೆಳೆಯನ್ನೇ ನಂಬಿದ್ದ ರೈತರು ಬೀದಿ ಪಾಲಾಗಿದ್ದಾರೆ. ಜಮೀನು ರಕ್ಷಿಸಿಕೊಳ್ಳುವ ಸಲುವಾಗಿ ಮಾಡಿದ್ದ ಸಾಲವನ್ನು ಮರುಪಾವತಿ ಮಾಡಲಾಗದ ಪರಿಸ್ಥಿತಿಗೆ ಸಿಲುಕಿದ್ದಾರೆ. ಅನೇಕರು ಸಾಲ ಭಾದೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ತಕ್ಷಣ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿ ನೀಡಿರುವ ವರದಿಯ ಶಿಫಾರಸುಗಳನ್ನು ಜಾರಿಗೆ ತಂದು ಸಾಲಮನ್ನಾ ಮಾಡಬೇಕು ಎಂದು ಮಲೆನಾಡು ಸಂಘರ್ಷ ಕ್ರಿಯಾ ಹೋರಾಟ ಸಮಿತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement