ತುಳುನಾಡಿನ ಮತ್ಸ್ಯಕನ್ಯೆಗೀಗ 'ಮನೋ'ಚಿಕಿತ್ಸೆ...
ಉಡುಪಿ: ಆಗ ಆಕೆ ತುಳುನಾಡಿನ 30ರ ಹರೆಯದ ಜಕ್ಕ ಜವ್ವಂದಿ. ಆ ಕಾಲದಲ್ಲಿ ಮಹಿಳೆಯರಿಗೆ ರಾಜಕೀಯ ಅಂದ್ರೆ ಇನ್ನೂ ಅಷ್ಟಾಗಿ ಆಕರ್ಷಣೆ ಹುಟ್ಟಿರಲಿಲ್ಲ. ಆದರೂ ಆ ಕಾಲದಲ್ಲಿ ಪತಿಯ ಪ್ರೋತ್ಸಾಹ, ಒತ್ತಾಯಕ್ಕೆ ಮಣಿದು ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದದ್ದು ಮಾತ್ರವಲ್ಲ ವಿಧಾನಸೌಧಕ್ಕೆ ಪ್ರಥಮ ಪ್ರವೇಶದಲ್ಲೇ ಮಂತ್ರಿಯೂ ಆದರು.
ನಂತರ ಮತ್ತೆ ಎರಡು ಬಾರಿ ಸ್ಪರ್ಧಿಸಿ ಗೆದ್ದು ಮತ್ತೆರಡು ಬಾರಿ ಮಂತ್ರಿಯೂ ಆದರು. ಬಳಿಕ ಸ್ಪರ್ಧಿಸಿದ ಎರಡು ಚುನಾವಣೆಗಳಲ್ಲಿ ಸೋತರು. ಕೊನೆಗೆ ಬಿಜೆಪಿಗೆ ಪಕ್ಷಾಂತರ ಮಾಡಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ನಂತರ ಮರಳಿ ಮಾತೃ (ಕಾಂಗ್ರೆಸ್) ಪಕ್ಷಕ್ಕೆ ಹೋದರು. ಮೊನ್ನೆಮೊನ್ನೆವರಗೆ ಯಾವುದಾದರೊಂದು ರಾಜ್ಯದ ರಾಜ್ಯಪಾಲರಾಗಬೇಕು ಎಂದು ಹಾತೊರೆಯುತ್ತಿದ್ದರು, ಈಗ ಮನೋವೈದ್ಯರೊಬ್ಬರಲ್ಲಿ ಆಪ್ತಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಅವರೇ ಉಡುಪಿಯ ಮತ್ಸ್ಯಕನ್ಯೆ ಮನೋರಮಾ ಮಧ್ವರಾಜ್.
ಮೊದಲ ಸ್ಪರ್ಧೆಯಲ್ಲೇ ಗೆಲವು: ಕಡಲವೀರರಾದ ಮೊಗವೀರ ಸಮುದಾಯದವರಾದ ಅವರು 1972ರಲ್ಲಿ ಮೊದಲ ಬಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಾಗ ತುಂಬು ಹರೆಯ. ಅತ್ಯಂತ ಆಕರ್ಷಕ ದೈಹಿಕ ವ್ಯಕ್ತಿತ್ವವನ್ನು ಹೊಂದಿದ್ದ ಅವರಿಗೆ ರಾಜಕೀಯ ಜೀವನದುದ್ದಕ್ಕೂ ಬಹಳ ದೊಡ್ಡ ಅಭಿಮಾನಿ ಬಳಗವೇ ಇತ್ತು.
ನೇರ ನಡೆ - ನುಡಿಯ ಕಾರಣಕ್ಕೆ ಒಂದಷ್ಟು ವಿವಾದಗಳೂ ಅವರಿಗೆ ತಗಲಿಕೊಂಡಿತ್ತು.
1978, 1985, 1989ರಲ್ಲಿ ನಡೆದ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮನೋರಮಾಗೆ ವಿಜಯಲಕ್ಷ್ಮಿ ಒಲಿದಿದ್ದಳು.
ಅವರು ಗೆದ್ದ ಎಲ್ಲ ಸಂದರ್ಭದಲ್ಲೂ ಸಚಿವೆ ಪಟ್ಟ ಪಡೆಯುವಷ್ಟು ಪ್ರಭಾವಿ ಮಹಿಳೆಯಾಗಿದ್ದರು. ಮೊದಲ ಮೂರು ಬಾರಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆಯಾಗಿದ್ದ ಮನೋರಮಾ ಕೊನೆಯ ಬಾರಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.
1983 ಮತ್ತು 1994ರಲ್ಲಿ ಸೋಲುಂಡಿದ್ದ ಮನೋರಮಾ, 2000ದಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗುತ್ತಿದ್ದಂತೆ ಮತ್ತೆ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯಾದರು. ನಂತರ ಬಿಜೆಪಿಗೆ ಪಕ್ಷಾಂತರ ಮಾಡಿದ ಮನೋರಮಾ 2004ರಲ್ಲಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆದು ಸಂಸದೆಯೂ ಆದರು. ಸಂಸತ್ನಲ್ಲಿ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪರ ಮತದಾನ ಮಾಡದೇ ಬಿಜೆಪಿಯೊಂದಿಗೆ ನಿಷ್ಟುರ ಕಟ್ಟಿಕೊಂಡರು. 2009ರಲ್ಲಿ ಮತ್ತೆ ಮಾತೃಪಕ್ಷದ 'ಕೈ' ಹಿಡಿದರು. ಬಿಜೆಪಿ ಪರ ಸಂಸತ್ನಲ್ಲಿ ಮತದಾನ ಮಾಡದಿದ್ದಕ್ಕೆ ಕಾಂಗ್ರೆಸ್, ಮನೋರಮಾಗೆ ರಾಜ್ಯಪಾಲ ಹುದ್ದೆ ನೀಡುವ ಭರವಸೆ ನೀಡಿತ್ತು. ಆದರದು ಕೈಗೂಡಲಿಲ್ಲ.
ಅವರಿಗೀಗ 70 ವರ್ಷ ದಾಟಿದೆ... ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಕಾಂಗ್ರೆಸ್ ಕೂಡ ದೂರ ಇಟ್ಟಿದೆ. ಸಹಜವಾಗಿಯೇ ಮನಸು ನೊಂದಿದೆ... ನೊಂದ ಮನಸ್ಸು ಈಗ ಚಿಕಿತ್ಸೆ ಪಡೆಯುತ್ತಿದೆ.
ಸೀಮೆಎಣ್ಣೆ ಕಾಳಸಂತೆ ಮಾರಾಟಕ್ಕೆ ಫುಲ್ಸ್ಟಾಪ್
1980- 90ರ ನಡುವೆ ರಾಜ್ಯದಲ್ಲಿ ಸೀಮೆಎಣ್ಣೆಯನ್ನು ಕಾಳಸಂತೆಯಲ್ಲಿ ಮಾರುವುದು ಬಹಳ ದೊಡ್ಡ ಮಾಫಿಯಾವೇ ಆಗಿ ಬೆಳೆದಿತ್ತು. ಆಗ ಸೀಮೆಎಣ್ಣೆಗೆ ಬಣ್ಣ ಇರಲಿಲ್ಲ. 1989ರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಮನೋರಮಾ ನೀಲಿ ಬಣ್ಣದ ಸೀಮೆಎಣ್ಣೆಯನ್ನು ಸಹಕಾರಿ ಕೇಂದ್ರ, ಗ್ರಾಹಕ ಕೇಂದ್ರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿದರು. ಇದರಿಂದ ಸೀಮೆಎಣ್ಣೆ ಕಾಳಸಂತೆ ದಂಧೆಗೆ ಕೊಡಲಿ ಏಟು ಬಿತ್ತು. ಇಂದಿಗೂ ಸೀಮೆಎಣ್ಣೆ ಕಾಳಸಂತೆಗೆ ಫುಲ್ಸ್ಟಾಪ್ ಬಿದ್ದಿದೆ.
ಸಂಸದೆಯಾಗಿದ್ದಾಗ ಉಡುಪಿಯಲ್ಲಿ ನಾಗಾರ್ಜುನ- ಲ್ಯಾಂಕೋ ಕಂಪೆನಿಗಳ ಉಡುಪಿ ಪವರ್ ಕಾರ್ಪೊರೇಶನ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗದಂತೆ ಹಠ ಹಿಡಿದು ಹೋರಾಟ ನಡೆಸಿದ್ದರು. ಅದಕ್ಕಾಗಿ ಬಿಜೆಪಿ ಶಾಸಕರ, ನಾಯಕರ ವಿರೋಧವನ್ನೂ ಕಟ್ಟಿಕೊಂಡಿದ್ದರು.
-ಸುಭಾಶ್ಚಂದ್ರ ಎಸ್. ವಾಗ್ಳೆ