ವಿಚಾರವಂತರಿಗಿಂತ ಅಲ್ಲಮ ಜನಪ್ರಿಯ
ಮಂಗಳೂರು: ಸಂಪ್ರದಾಯದ ಪೂರ್ಣ ಪ್ರತಿಪಾದನೆಯನ್ನು ಮಾಡದ ಅಲ್ಲಮ ಇಂದಿನ ವಿಚಾರವಂತರಿಗಿಂತ ಹೆಚ್ಚು ಜನಪ್ರಿಯ ಎಂದು ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಹೇಳಿದ್ದಾರೆ.
ಅಲ್ಲಮಪ್ರಭು ಪೀಠ ಕಾಂತಾವರ, ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕರ್ನಾಟಕ ತಿಯೊಲಾಜಿಕಲ್ ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಶನಿವಾರ ನಗರದ ಸಹೋದಯ ಸಭಾಂಗಣದಲ್ಲಿ 'ಅಲ್ಲಮ: ಒಂದು ಪ್ರವೇಶ' ವಿಚಾರ ಸಂಕಿರಣದಲ್ಲಿ ಅಲ್ಲಮ-ವಿಷಯ ಪ್ರವೇಶ ಕುರಿತು ಮಾತನಾಡಿದರು.
ಅಲ್ಲಮ ಯಾವುದೇ ಕಟ್ಟುಪಾಡಿಗೆ ಒಳಗಾದವರಲ್ಲ, ಭಾಷೆ, ಜಾತಿ, ಭೌಗೋಳಿಕ ಪಂಥ ಮೀರಿ ಬೆಳೆದಿದ್ದಾರೆ. ವಚನ ಸಾಹಿತ್ಯ ಕನ್ನಡ ನಾಡಿನ ಪ್ರಜಾ ಸಾಹಿತ್ಯವಾಗಿದ್ದು, ಇದು ಕರಾವಳಿಗೂ ಪ್ರಸ್ತುತ. ಜಾನಪದದಿಂದ ಮೂಡಿಬಂದ ಸಾಹಿತ್ಯ ಉತ್ತಮವಾಗಿದ್ದು, ಇಂದಿಗೂ ಅಲ್ಲಮನ ಚಿಂತನೆಗಳು ಪ್ರಸ್ತುತವಾಗಿದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ವಿಚಾರ ಸಂಕಿರಣ ಉದ್ಘಾಟಿಸಿ, ಅಲ್ಲಮನ ವಿಚಾರ ಮಂಥನ ನಡೆಯಬೇಕು ಎಂದು ಆಶಿಸಿದರು. ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಅಲ್ಲಮಪ್ರಭು ಪೀಠ ಪ್ರಧಾನ ನಿರ್ದೇಶಕ ನಾ.ಮೊಗಸಾಲೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಧ್ಯಕ್ಷ ಯಶೋಧರ ಪಿ.ಕರ್ಕೇರ, ಸಂಚಾಲಕ ಎ.ವಿ.ನಾವಡ, ನಿರ್ದೇಶಕ ಕಲ್ಲೂರು ನಾಗೇಶ ಹಾಜರಿದ್ದರು. ಬಳಿಕ ಅಲ್ಲಮನ ಬದುಕು ವ್ಯಕ್ತಿತ್ವ, ಅಲ್ಲಮನ ವಚನಗಳ ವೈಶಿಷ್ಟ್ಯ, ಕನ್ನಡ ಸಾಂಸ್ಕೃತಿಕ ನಾಯಕ ಅಲ್ಲಮ, ವರ್ತಮಾನದಲ್ಲಿ ಅಲ್ಲಮನ ಪ್ರಸ್ತುತತೆ ಬಗೆಗೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು.