ವಿದ್ಯಾರ್ಥಿನಿ ಜತೆ ಸಂಭಾಷಣೆಗೆ ಆಕ್ಷೇಪ; ಹಲ್ಲೆ
ಪುತ್ತೂರು: ವಿದ್ಯಾರ್ಥಿನಿಯೊಬ್ಬಳೊಂದಿಗೆ ಮಾತನಾಡಿದರೆಂಬ ಕಾರಣಕ್ಕೆ ಭಿನ್ನ ಕೋಮಿನ ವಿದ್ಯಾರ್ಥಿಗೆ 12 ಮಂದಿಯ ತಂಡ ಹಲ್ಲೆ ನಡೆಸಿದ ಘಟನೆ ಪುತ್ತೂರು ನೆಲ್ಲಿಕಟ್ಟೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ವಿದ್ಯಾರ್ಥಿ, ನರಿಮೊಗ್ರು ಗ್ರಾಮದ ಪುರುಷರಕಟ್ಟೆ ನಿವಾಸಿ ಹಸೈನಾರ್ ಅವರ ಪುತ್ರ ಜುಬೈರ್ ಹಲ್ಲೆಗೊಳಗಾದ ವಿದ್ಯಾರ್ಥಿ. ಸೋಮವಾರ ಮಧ್ಯಾಹ್ನ ತರಗತಿ ಮುಗಿಸಿ ಪುತ್ತೂರು ಪೇಟೆಗೆ ನಡೆದುಕೊಂಡು ಬರುತ್ತಿದ್ದಾಗ ಕೆಯ್ಯೂರು ಗ್ರಾಮದ ಮಾಡಾವಿನ ಇಬ್ಬರು ವ್ಯಕ್ತಿಗಳು ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದನ್ನು ಪ್ರಶ್ನಿಸಿ ಹಲ್ಲೆ ನಡೆಸಿದರು.
ಅದೇ ವೇಳೆ ಸುಮಾರು 10 ಮಂದಿಯಿದ್ದ ತಂಡ ನನ್ನನ್ನು ನೆಲ್ಲಿಕಟ್ಟೆಯಿಂದ ಬಸ್ ನಿಲ್ದಾಣ ತನಕ ಅಟ್ಟಿಸಿಕೊಂಡು ಬಂದು ಹಲ್ಲೆ ನಡೆಸಿದರು ಎಂದು ಗಾಯಾಳು ಜುಬೈರ್ ಆರೋಪಿಸಿದ್ದಾನೆ.
ಜುಬೈರ್ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.