ಉಡುಪಿ ಜಿಲ್ಲಾದ್ಯಂತ ವಿದ್ಯುತ್ ಸತತ ಕಡಿತ
ಉಡುಪಿ: ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯವಾಗುತ್ತಿದೆ. ನಗರ ಪ್ರದೇಶದಲ್ಲಿ ಸರಾಸರಿ 5ರಿಂದ 7 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 8 - 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ನಿಲ್ಲಿಸಲಾಗುತ್ತಿದೆ.
ಪರೀಕ್ಷೆಗಳನ್ನೆದುರಿಸುತ್ತಿರುವ ವಿದ್ಯಾರ್ಥಿಗಳು, ವಿದ್ಯುತ್ ಪಂಪ್ ಬಳಸುವ ರೈತರು, ಸಣ್ಣ ಉದ್ದಿಮೆದಾರರು ತತ್ತರಿಸುತ್ತಿದ್ದಾರೆ. ಆದರೂ, ಯಾಕೆ ಹೀಗೆ... ಇನ್ನಷ್ಟು ದಿನ ಹೀಗೆ... ಎಂದು ಕೇಳುವವರೂ ಇಲ್ಲ... ಇದಕ್ಕೆ ಉತ್ತರಿಸುವವರೂ ಇಲ್ಲ.
ಪ್ರತಿಭಟನೆ ನಡೆಸಬೇಕಾಗಿದ್ದ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಗೂಬೆ ಹೊರಿಸಿ ಸುಮ್ಮನಾಗಿದ್ದರೆ, ಆಡಳಿತ ಪಕ್ಷ ವಿರೋಧ ಪಕ್ಷದ ಮೇಲೆ ಸಿಟ್ಟು ಕಾರಿ ತಾನೂ ಸುಮ್ಮನಾಗಿಬಿಟ್ಟಿದೆ. ವೋಟ್ ರಾಜಕೀಯಕ್ಕೆ ಜಿಲ್ಲೆಯ ಬಡಪಾಯಿ ಮತದಾರ ಬಲಿಪಶುವಾಗುತ್ತಿದ್ದಾನೆ. ವಿದ್ಯುತ್ ಪೂರೈಕೆ ಮಾಡುವ ಮೆಸ್ಕಾಂನ್ನು ಕೇಳಿದರೆ ಉತ್ಪಾದನೆಯೇ ಇಲ್ಲ ಎನ್ನುವ ಸಿದ್ಧ ಉತ್ತರ ದೊರೆಯುತ್ತಿದೆ.
ಕಲ್ಲಿದ್ದಲು ಇಲ್ಲ- ನೆಪ: ಲೆಕ್ಕಕ್ಕೆ ಉಡುಪಿ ಜಿಲ್ಲೆಯಲ್ಲಿ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಯುಪಿಸಿಎಲ್) ಉಷ್ಣ ವಿದ್ಯುತ್ ಸ್ಥಾವರ ಇದೆ. ಆದರೆ, ಅದು ಸರಿಯಾಗಿ ವಿದ್ಯುತ್ ಉತ್ಪಾದನೆ ಮಾಡಿರುವ ದಾಖಲೆ ಇಲ್ಲ. ಪ್ರಸ್ತುತ 1 ಘಟಕದಿಂದ ಕೇವಲ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇನ್ನೊಂದು ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಕಾರಣ ಕಲ್ಲಿದ್ದಲು ಪೂರೈಕೆ ಇಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ.
ಹಣ ಪಾವತಿಗೆ ಬಾಕಿ: ವಾಸ್ತವ ಬೇರೆಯೇ ಇದೆ. ರಾಜ್ಯ ಬಿಜೆಪಿ ಸರ್ಕಾರ ಈ ಯುಪಿಸಿಎಲ್ನಿಂದ ವಿದ್ಯುತ್ ಖರೀದಿಸುತ್ತಿದೆ. ಆದರೆ, ಅದರ ಹಣವನ್ನು ಪೂರ್ತಿ ಪಾವತಿಸಿಲ್ಲ. ನೂರಾರು ಕೋಟಿ ರು. ಬಾಕಿ ಇರಿಸಿದೆ. ಹಿಂದಿನ ಇಂಧನ ಸಚಿವೆ ಮತ್ತು ಯುಪಿಸಿಎಲ್ ಮಧ್ಯೆ ವಿದ್ಯುತ್ ಖರೀದಿ ದರಕ್ಕೆ ಸಂಬಂಧಪಟ್ಟಂತೆ 'ಒಪ್ಪಂದ' ಆಗಿರದೇ ಪಾವತಿ ಬಾಕಿಯಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಯುಪಿಸಿಎಲ್ ಅಧಿಕಾರಿ.
ಆದ್ದರಿಂದ ಕಲ್ಲಿದ್ದಲು ಪೂರೈಕೆ ಇಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಯುಪಿಸಿಎಲ್ ವಿದ್ಯುತ್ ಉತ್ಪಾದನೆ ನಿಲ್ಲಿಸಿ, ಜನತೆಗೆ ತೊಂದರೆ ಕೊಡುವ ಮೂಲಕ ರಾಜ್ಯ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಿ ತನ್ನ ಬಾಕಿ ವಸೂಲಿ ತಂತ್ರ ಹೂಡಿದೆ.
ಸರ್ಕಾರ ಯುಪಿಸಿಎಲ್ಗೆ ಪಾವತಿಯನ್ನು ಬಾಕಿ ಇಟ್ಟಿದೆಯೇ... ಇಟ್ಟಿದ್ದರೆ ಎಷ್ಟು... ಯಾಕೆ...? ಅದನ್ನು ಪಾವತಿ ಮಾಡಿ ಸಮಸ್ಯೆಯನ್ನು ಯಾಕೆ ನಿವಾರಿಸುತ್ತಿಲ್ಲ ಎನ್ನುವುದೂ ಕೂಡ ನಿಗೂಢವಾಗಿದೆ. ಉಡುಪಿಯ ಜನಪ್ರತಿನಿಧಿಗಳು ಚಕಾರ ಎತ್ತದಿರುವುದು ಅಚ್ಚರಿಗೆ ಕಾರಣವಾಗಿದೆ.
ಬಿಜೆಪಿ ವೈಫಲ್ಯಕ್ಕೆ ಕೈಗನ್ನಡಿ: ಪ್ರಮೋದ್
ವಿದ್ಯುತ್ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪರೀಕ್ಷೆಯ ಸಮಯವಾದ್ದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾ.ಪಂ. ಮತ್ತು ನಗರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೇ ನೀರು ಪಂಪ್ ಮಾಡಲಾಗದೇ ಜನರ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಬಿಜೆಪಿ 5 ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವಾಗ ದಿನದ 24 ಗಂಟೆ ನಿರಂತರ ವಿದ್ಯುತ್ ನೀಡುವುದಾಗಿ ಹೇಳಿತ್ತು. ಆದರೆ, ಅದನ್ನು ಈಡೇರಿಸದೆ ಭ್ರಷ್ಟಾಚಾರದಲ್ಲಿ ಮುಳುಗಿ, ಜನರ ಹಿತ ಮರೆತಿದೆ. ವಿದ್ಯುತ್ ಕಡಿತ ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಇತ್ತೀಚೆಗೆ ಹೇಳಿದ್ದಾರೆ.
ಯುಪಿಎ ಸರ್ಕಾರ ವಿದ್ಯುತ್ ಪೂರೈಕೆ ತಡೆ: ಬಿಜೆಪಿ
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೊಸ ವಿದ್ಯುತ್ ಸ್ಥಾವರಗಳನ್ನು ನಿರ್ಮಾಣ ಮಾಡಿದೆ. ಬಿಜೆಪಿಯ ಈ ಸಾಧನೆ ಸಹಿಸದೆ ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿಕೆ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಮರುಳುಗೊಳಿಸುವ ತಂತ್ರ, ರಾಜಕೀಯ ಪ್ರೇರಿತವಾದದ್ದು ಎಂದು ಬಿಜೆಪಿ ಟೀಕಿಸಿದೆ. ಜನರ ಮೇಲೆ ಕಾಳಜಿ ಇದ್ದರೆ ಪ್ರಮೋದ್ ಮಧ್ವರಾಜ್ ಕೇಂದ್ರ ಯುಪಿಎ ಸರ್ಕಾರ ತಡೆ ಹಿಡಿದಿರುವ ರಾಜ್ಯಕ್ಕೆ ಲೋಡ್ ಡಿಸ್ಟ್ರಿಬ್ಯೂಟಿಂಗ್ ಸೆಂಟರ್ನಿಂದ ಬರಬೇಕಾದ ವಿದ್ಯುತ್ ತಕ್ಷಣ ಬಿಡುಗಡೆಗೆ ಕೇಂದ್ರ ನಾಯಕರ ಮೇಲೆ ಒತ್ತಡ ಹೇರಬೇಕು ಎಂದು ಉಡುಪಿ ಬಿಜೆಪಿ ಒತ್ತಾಯಿಸಿದೆ.