ಹೊಸ್ಮಾರು ಮಗುವಿನೊಂದಿಗೆ ತಾಯಿ ನಾಪತ್ತೆ
ಕಾರ್ಕಳ: ಇಲ್ಲಿನ ಮಾಳ ಗ್ರಾಮದ ಹೊಸ್ಮಾರು ಎಂಬಲ್ಲಿ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಕಾಣೆಯಾದ ಘಟನೆ ಏ. 4ರಂದು ನಡೆದಿದ್ದು, ತಡವಾಗಿ ಬೆಳೆಕಿಗೆ ಬಂದಿದೆ. ಕಾಣೆಯಾದವರು ಆಶಾ (22) ಆಕೆ ಇಲ್ಲಿನ ನಿವಾಸಿ ಲಲಿತಾ ಶೆಟ್ಟಿ ಮತ್ತು ಮಹಾಬಲ ಶೆಟ್ಟಿ ಎಂಬವರ ಮಗಳು. ಈಕೆ ತನ್ನ ಒಂದುವರೆ ವರ್ಷದ ಮಗು ವರ್ಷಿತ್ನನ್ನು ಎತ್ತಿಕೊಂಡು ಅಂದು ಮಧ್ಯಾಹ್ನ 1 ಗಂಟೆಗೆ ತನ್ನ ಗಂಡನ ಮನೆ ಮುನಿಯಾಲಿಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅತ್ತ ಗಂಡನ ಮನೆಗೂ ಹೋಗದೆ ಇತ್ತ ತವರು ಮನೆಗೂ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ತಾಯಿ ಲಲಿತಾ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವನದಲ್ಲಿ ಜಿಗುಪ್ಸೆ: ಮಹಿಳೆ ಆತ್ಮಹತ್ಯೆ
ಕೋಟ: ಇಲ್ಲಿನ ಕಕ್ಕುಂಜೆ ಗ್ರಾಮದ ಬಾಳೆಹಿತ್ಲು ಎಂಬಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಮೃತರು ಮಾಲತಿ (35). ಆಕೆ ಇಲ್ಲಿನ ನಿವಾಸಿ ನಾರಾಯಣ ಕುಲಾಲ್ ಎಂಬವರ ಮಗಳು, ಮಾನಸಿಕ ಅಸ್ವಸ್ಥೆಯಾಗಿದ್ದು, ತನ್ನ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಯಾರೂ ಇಲ್ಲದ ವೇಳೆ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದುದಾಗಿದೆ. ಈ ಬಗ್ಗೆ ನಾರಾಯಣ ಕುಲಾಲ್ ಅವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿತಿಮೀರಿದ ಮದ್ಯಪಾನ: ವ್ಯಕ್ತಿ ಸಾವು
ಪಡುಬಿದ್ರಿ: ಇಲ್ಲಿನ ಪಡುಬಿದ್ರಿ ಪೇಟೆಯಲ್ಲಿ ಸುರತ್ಕಲ್ನ ವ್ಯಕ್ತಿಯೊಬ್ಬರು ಮದ್ಯಪಾನ ಮಾಡಿ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರು ದತ್ತಾರಾಮ್ (51), ದ.ಕ. ಜಿಲ್ಲೆಯ ಸುರತ್ಕಲ್ನ ವಿಶ್ವನಾಥ ದೇವಾಲಯದ ಸಮೀಪದ ನಿವಾಸಿ. ಅವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಮಂಗಳವಾರ ಬೆಳಗ್ಗೆ 9.30 ಗಂಟೆಗೆ ಗ್ಯಾರೇಜಿನ ಪಕ್ಕದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಪತ್ನಿ ಜಯಶ್ರೀ ಅವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.