ಕುಂದಾಪುರ ತಾಪಂ ಸದಸ್ಯರಿಬ್ಬರ ಅಮಾನತು ರದ್ದು
ಉಡುಪಿ: ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ಪ್ರಸನ್ನ ಕುಮಾರ್ ಹಾಗೂ ಗೌರಿ ದೇವಾಡಿಗ ಇವರ ಅಮಾನತನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ರದ್ದುಗೊಳಿಸಿದ್ದಾರೆ. ಪ್ರಸನ್ನ ಕುಮಾರ್ ಮತ್ತು ಗೌರಿ ದೇವಾಡಿಗ ಅವರು ಬಿಜೆಪಿಯ ಮಾಜಿ ಶಾಸಕ, ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಬೆಂಬಲ ನೀಡಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ಅವರಿಬ್ಬರನ್ನೂ ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.
ಅದರ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರಿಬ್ಬರ ಅಮಾನತನ್ನು ರದ್ದುಗೊಳಿಸಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಣಯ್ ಕುಮಾರ್ ಅವರ ಶಿಫಾರಸಿನ ಮೇರೆಗೆ ಜಿಲ್ಲಾಧ್ಯಕ್ಷರು ಈ ಆದೇಶ ಹೊರಡಿಸಿದ್ದಾರೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಸೀದಿಗೆ ಕಲ್ಲು ತೂರಾಟ, ಸ್ಥಳೀಯರಿಗೆ ಹಲ್ಲೆ: ಖಂಡನೆ
ಉಡುಪಿ: ಕೆಲವು ದಿನಗಳ ಹಿಂದೆ ಇಲ್ಲಿನ ನೇಜಾರಿನ ಮಸೀದಿಗೆ ಕಲ್ಲು ತೂರಾಟ ಮಾಡಿ ಮಸೀದಿಯ ಗಾಜುಗಳನ್ನು ಪುಡಿ ಮಾಡಿ, ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಕೃತ್ಯವು ಖಂಡನೀಯವಾಗಿದೆ.
ಈ ಪ್ರದೇಶದಲ್ಲಿ ತಲತಲಾಂತರಗಳಿಂದ ಶಾಂತಿ ಸೌಹಾರ್ದ ಹಾಗೂ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಾ ಬಂದ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಬಾಂಧವರಲ್ಲಿ ಚುನಾವಣಾ ಸಂದರ್ಭದಲ್ಲಿ ದ್ವೇಷದ ವಿಷ ಬೀಜವನ್ನು ಭಿತ್ತಿ ಕೋಮು ಗಲಭೆಯನ್ನು ಹುಟ್ಟು ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಸಮಾಜ ದ್ರೋಹಿಗಳನ್ನು ಜಾತಿ ಮತ ಬೇಧವೆಂದೆಣಿಸದೆ, ಯಾವುದೇ ಒತ್ತಡಕ್ಕೂ ಮಣಿಯದೆ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.