ಬೀಡಿನಗುಡ್ಡೆ ಜೋಪಡಿ ನಿವಾಸಿ ಮಕ್ಕಳ ಸಮಾವೇಶ
ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ವಿದ್ಯಾಪೋಷಕ್ ವತಿಯಿಂದ ಬೀಡಿನಗುಡ್ಡೆ ಜೋಪಾಡಿ ನಿವಾಸಿ ಮಕ್ಕಳ ಸಮಾವೇಶ ಇತ್ತೀಚೆಗೆ ದೇವಾಡಿಗರ ಸಭಾಭವನದಲ್ಲಿ ನಡೆಯಿತು.
ಇಲ್ಲಿನ ಜೋಪಡಿಯಲ್ಲಿದ್ದುಕೊಂಡೇ ವಿದ್ಯಾಪೋಷಕ್ ಸಂಸ್ಥೆಯು ನೀಡಿದ ಸೋಲಾರ್ ದೀಪದ ಬೆಳಕಿನಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಪ್ರೇಮಾ ಸಭೆಯನ್ನುದ್ದೇಶಿಸಿ ತಾನು ಶ್ರಮವಹಿಸಿ ಕಲಿಯುತ್ತ ಕನಸನ್ನು ಸಾಕರಗೊಳಿಸಲು ಪ್ರಯತ್ನಿಸುತ್ತಿರುವ ವಿಚಾರವನ್ನು ಹಂಚಿಕೊಂಡರಲ್ಲದೆ, ಜೋಪಡಿಗಳಿಗೆ ತೆರಳಿ ಮಕ್ಕಳ ಶಿಕ್ಷಣವನ್ನು ಮುಂದುವರಿಸುವಂತೆ ಹೆತ್ತವರಲ್ಲಿ ಒತ್ತಾಯಿಸುತ್ತಿರುವುದಾಗಿ ಹೇಳಿದರು. ಜೋಪಾಡಿ ನಿವಾಸಿಗಳ ಮಕ್ಕಳಿಗೆ ಹಾಸ್ಟೆಲ್ ಕಟ್ಟಿಸುವಂತೆ ಆಗ್ರಹಿಸಿದ ಪ್ರೇಮಾ, ಈಗ ಸ್ಟೇಡಿಯಂ ನಿರ್ಮಾಣವಾಗುತ್ತಿರುವುದರಿಂದ ಜೋಪಡಿ ನಿವಾಸಿಗಳಿಗೆ ಕನಿಷ್ಠ ಅಗತ್ಯತೆಗಳನ್ನು ಪೂರೈಸಲು ಸ್ಥಳಾವಕಾಶದ ಕೊರತೆಯಾಗಿ ಬವಣೆ ಪಡುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತನಾಡಿ, ಜೋಪಡಿ ಎಂಬ ಪದಬಳಕೆಯ ಹಿಂದಿರುವ ಕೀಳರಿಮೆಯ ಭಾವನೆ ಬಗ್ಗೆ ಗಮನ ಸೆಳೆದರಲ್ಲದೆ, ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರಿಸಲು ವಿದ್ಯಾಪೋಷಕ್ ಸಂಸ್ಥೆಯು ಎಲ್ಲ ರೀತಿಯ ಸಹಾಯವನ್ನು ಮಾಡುವುದಾಗಿ ತಿಳಿಸಿದರು. ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ನಾಗರಾಜ್ ಅವರು ಬಡ ಮಕ್ಕಳ ಶಿಕ್ಷಣಕ್ಕಾಗಿ ಇರುವ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿ, ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಮಕ್ಕಳ ಹೆತ್ತವರು ಮುಂದಾಗಬೇಕು ಎಂದರು.
ಸಮಾವೇಶದ ಅಧ್ಯಕ್ಷತೆಯನ್ನು ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ಕಲಾರಂಗದ ಉಪಾಧ್ಯಕ್ಷ ಎಸ್. ವಿ. ಭಟ್, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಶೆಣೈ ಇದ್ದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.