ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಇಂದು ಉಡುಪಿ ಧರ್ಮಪ್ರಾಂತ್ಯದ ಮೊದಲ ಧರ್ಮಗುರು ದೀಕ್ಷೆ

Lingaraj Badiger
Updated On : 15 Apr 2013, 12:30 pm

ಉಡುಪಿ: ಕಳೆದ ಸೆಪ್ಟೆಂಬರ್‌ನಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಅಸ್ತಿತ್ವಕ್ಕೆ ಬಂದಿದ್ದು, ಈ ನೂತನ ಧರ್ಮಪ್ರಾಂತ್ಯದ ಪ್ರಥಮ ಕ್ರೈಸ್ತ ಧರ್ಮಗುರುವಾಗಿ ಮೂಡುಬೆಳ್ಳೆಯ ಮಹೇಶ್ ಡಿ' ಸೋಜಾ ಸೋಮವಾರ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರಿಂದ ದೀಕ್ಷೆ ಪಡೆಯಲಿದ್ದಾರೆ.
ಮೂಡುಬೆಳ್ಳೆ ಸಂತ ಲಾರೆನ್ಸ್ ದೇವಾಲಯಕ್ಕೆ ಒಳಪಟ್ಟ ಫ್ರೆಡ್ರಿಕ್ ಹಾಗೂ ಮೇಟಿಲ್ಡಾ ಡಿ'ಸೋಜಾ ಇವರ ಮೂವರು ಮಕ್ಕಳಲ್ಲಿ ಒಬ್ಬರಾಗಿರುವ ಮಹೇಶ್ ಪ್ರಾಥಮಿಕ ಶಿಕ್ಷಣವನ್ನು ಮೂಡುಬೆಳ್ಳೆಯಲ್ಲಿ, ಪಿಯು ಶಿಕ್ಷಣವನ್ನು ಐಕಳ ಪೊಂಪೈ ಜೂನಿಯರ್ ಕಾಲೇಜು ಹಾಗೂ ಪದವಿ ವಿದ್ಯಾಭ್ಯಾಸವನ್ನು ಶಿರ್ವ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಪೂರೈಸಿದರು.
ಬಳಿಕ ಧರ್ಮಗುರುವಾಗುವ ಇಚ್ಚೆಯಿಂದ  ಧಾರ್ಮಿಕ ಶಿಕ್ಷಣಕ್ಕಾಗಿ ಮಂಗಳೂರಿನ ಸೈಂಟ್ ಜೋಸೆಫ್ ಸೆಮಿನರಿ ಸೇರಿ ಫಿಲೋಸಫಿ ಹಾಗೂ ಥಿಯೊಲೊಜಿ ಶಿಕ್ಷಣ ಪಡೆದಿದ್ದಾರೆ.
2012ರ ಜೂ. 14ರಂದು ಮಹೇಶ್ ಧರ್ಮಗುರುವಿನ ಪೂರ್ವದೀಕ್ಷೆ (ಡಯಾಕನೆಟ್) ಅನ್ನು ಮಂಗಳೂರಿನ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿ' ಸೋಜಾ ಅವರಿಂದ ಪಡೆದಿದ್ದಾರೆ. ಬಳಿಕ ಒಂದು ವರ್ಷ ಡಿಕನ್ ಆಗಿ ಅಜೆಕಾರು ಚರ್ಚ್‌ನಲ್ಲಿ ಸೇವೆ ನೀಡಿದ್ದಾರೆ.
ಸೋಮವಾರ ಬೆಳಗ್ಗೆ 9.30ಕ್ಕೆ ಮೂಡುಬೆಳ್ಳೆ ಸಂತ ಲಾರೆನ್ಸ್‌ರ ಚರ್ಚ್‌ನಲ್ಲಿ ಉಡುಪಿಯ ಧರ್ಮಾಧ್ಯಕ್ಷರಿಂದ ಧರ್ಮಗುರುವಿನ ಧಾರ್ಮಿಕ ದೀಕ್ಷೆ ಪಡೆಯುವ ಮಹೇಶ್ ಡಿ' ಸೋಜಾ, ಉಡುಪಿ ಧರ್ಮಪ್ರಾಂತ್ಯದಲ್ಲಿ ಧರ್ಮಗುರು ದೀಕ್ಷೆ ಪಡೆದ ಪ್ರಥಮ ಧರ್ಮಗುರು ಎನಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement