ನಾಲ್ವರು ಕೋಟ್ಯಧಿಪತಿ ಅಭ್ಯರ್ಥಿಗಳು
ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಇದುವರೆಗೆ ನಾಮಪತ್ರ ಸಲ್ಲಿಸಿರುವ 13 ಮಂದಿ ಅಭ್ಯರ್ಥಿಗಳ ಪೈಕಿ 4 ಮಂದಿ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಿದ್ದಾರೆ. ಅವರಲ್ಲಿಯೂ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಉಳಿದವರೆಲ್ಲಗಿಂತಲೂ ಶ್ರೀಮಂತರಾಗಿದ್ದಾರೆ.
ಉಳಿದಂತೆ ಬಿಜೆಪಿಯ ಉಡುಪಿ ಅಭ್ಯರ್ಥಿ ಸುಧಾಕರ ಶೆಟ್ಟಿ, ಬಿಜೆಪಿಯ ಮಾಜಿ ಶಾಸಕ ಕುಂದಾಪುರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಂಗ್ರೆಸ್ ಪಕ್ಷದ ಬೈಂದೂರಿನ ಗೋಪಾಲ ಪೂಜಾರಿ ಅವರು ಕೂಡ ಕೋಟ್ಯಾಧಿಪತಿಗಳಾಗಿದ್ದಾರೆ.
ಪ್ರಮೋದ್ ಮಧ್ವರಾಜ್ (45, ಪಿಯುಸಿ) ಅವರು ಸೋಮವಾರ ಸಲ್ಲಿಸಿದ ನಾಮಪತ್ರದ ಜೊತೆಗೆ ಒಟ್ಟು 95,50,36,864 ಮೌಲ್ಯದ ಆಸ್ತಿ ವಿವರಗಳನ್ನು ತೋರಿಸಿದ್ದಾರೆ. ರು. 43,98,91,385 ಸಾಲವನ್ನು ಹೊಂದಿದ್ದು, ಅವರು ಕಳೆದ ಆರ್ಥಿಕ ವರ್ಷದಲ್ಲಿ ರು. 18,12,20,780 ಆದಾಯ ತೆರಿಗೆಯನ್ನೂ ಪಾವತಿಸಿದ್ದಾರೆ.
ಸುಧಾಕರ ಶೆಟ್ಟರಿಗೆ ಚಿನ್ನಾಭರಣಗಳ ಮೇಲೆ ಆಸೆ ಹೆಚ್ಚು. ಅವರು ಸುಮಾರು 250 ಗ್ರಾಂ ಅಂದರೆ ಸುಮಾರು ರು. 16.56 ಲಕ್ಷ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಅವರು ಒಟ್ಟು ಆಸ್ತಿ ಮೌಲ್ಯ ರು. 1,16,56,331 ಮತ್ತು ಸಾಲ ರು. 5 ಲಕ್ಷ ಮಾತ್ರ. ಪತ್ನಿ ಬಳಿ 500 ಗ್ರಾಂ ಚಿನ್ನ, ಮಗಳ ಬಳಿ ರು. 46.62 ಲಕ್ಷ ಮೌಲ್ಯದ ಆಸ್ತಿ ಇದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ (62, ಬಿಎಸ್ಸಿ) ಆಸ್ತಿಯ ಅರ್ಧಕ್ಕಿಂತಲೂ ಹೆಚ್ಚು ಸಾಲ ಹೊಂದಿದ್ದಾರೆ. ಅವರ ಬಳಿ ಒಟ್ಟು ರು. 1,63,58,925 ಆಸ್ತಿಪಾಸ್ತಿಗಳಿವೆ. ಸುಮಾರು ರು. 69,68,971 ಸಾಲವನ್ನೂ ಮಾಡಿದ್ದಾರೆ. ಅವಿವಾಹಿತ 62ರ ಹರೆಯದ ಬಿಎಸ್ಸಿ ಪದವಿಧರ ಹಾಲಾಡಿ ಆದಾಯ ತೆರಿಗೆ ಪಾವತಿಸಿಲ್ಲ. ಬೆಂಗಳೂರಿನಲ್ಲೊಂದು ಸೈಟು, ಊರಲ್ಲಿ ಸುಮಾರು ರು. 82 ಲಕ್ಷ ಮೌಲ್ಯದ ಪಿತ್ರಾರ್ಜಿತ ಜಮೀನು ಹೊಂದಿದ್ದಾರೆ.
ಕೆ. ಗೋಪಾಲ ಪೂಜಾರಿ (53, ಎಸ್ಸೆಸ್ಸೆಲ್ಸಿ) ಹೊಟೇಲ್ ಉದ್ಯಮಿ, ಅವರು ಒಟ್ಟು ರು. 12,64,48,181 ಆಸ್ತಿಪಾಸ್ತಿ ಹೊಂದಿದ್ದಾರೆ. ಜೊತೆಗೆ ಸುಮಾರು ರು. 3.13 ಕೋಟಿ ಸಾಲ ಹೊಂದಿದ್ದಾರೆ. ಕಳೆದ ಸಾಲಿನಲ್ಲಿ ಸುಮಾರು ರು. 19.60 ಲಕ್ಷ ಆದಾಯ ತೆರಿಗೆಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಅವರ ಪತ್ನಿ ಹೆಸರಿನಲ್ಲಿಯೂ ರು. 2.73 ಕೋಟಿ ಮೌಲ್ಯದ ಆಸ್ತಿ ಮತ್ತು ರು. 24 ಲಕ್ಷ ಸಾಲವೂ ಇದೆ.
ಶಿವರಾಮ ಶೆಟ್ಟಿ ಮಲ್ಯಾಡಿ (58, ಎಸ್ಸೆಸ್ಸೆಲ್ಸಿ) ಕಾಂಗ್ರೆಸ್ ಪಕ್ಷದಿಂದ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಕೋಟ್ಯಾಧಿಪತಿಯಾಗುವುದಕ್ಕೆ ಕೆಲವೇ ಲಕ್ಷ ರುಪಾಯಿಗಳಿಂದ ವಂಚಿತರಾಗಿದ್ದಾರೆ. ಅವರು ಸಲ್ಲಿಸಿದ ಅಫಿದವಿತ್‌ನಂತೆ ಒಟ್ಟು ರು. 99,25,132 ಆಸ್ತಿ ಹೊಂದಿದ್ದಾರೆ. ಸುಮಾರು ರು. 1.07 ಲಕ್ಷ ಸಾಲ ಮಾಡಿರುವ ಅವರು ಕಳೆದ ಸಾಲಿನಲ್ಲಿ ರು. 9.16 ಲಕ್ಷ ಆಸ್ತಿ ತೆರಿಗೆಯನ್ನೂ ಸಲ್ಲಿಸಿದ್ದಾರೆ.
ಲಾಲಾಜಿ ಮೆಂಡನ್ (53, ಬಿಕಾಂ) ಕಾಪು ಕ್ಷೇತ್ರದಲ್ಲಿ ಬಿಜೆಪಿಯಿಂದ 2ನೇ ಬಾರಿ ಶಾಸಕರಾಗಿ 3ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ತಮ್ಮ ಪ್ರಸ್ತುತ ಬಳಿ ರು. 62,28,302 ಆಸ್ತಿ ಮತ್ತು ರು. 45,80,655 ಸಾಲ ಇರುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷದಲ್ಲಿ ರು. 7.90 ಲಕ್ಷ ಆದಾಯ ತೆರಿಗೆ ಪಾವತಿಸಿದ್ದಾರೆ.
ಸುನಿಲ್ ಕುಮಾರ್ (37, ಬಿಎ) ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಪತ್ನಿಯ ಆಸ್ತಿಯೂ ಸೇರಿದರೇ ಕೋಟ್ಯಾಧಿಪತಿ. ಅವರ ಒಟ್ಟು ಆಸ್ತಿ ರು. 89,02,582 ಗಳಾದರೆ ಪತ್ನಿಯ ಆಸ್ತಿ ರು. 61,34,737 ಗಳಾಗಿವೆ. ರು. 24.29 ಲಕ್ಷ ಸಾಲ ಮಾಡಿದ್ದಾರೆ.