ಉಡುಪಿ ಜಿಲ್ಲೆ: 9 ನಾಮಪತ್ರ ಸಲ್ಲಿಕೆ
ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ 5ನೇ ದಿನವಾದ ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳು ನಾಮಪತ್ರಗಳು ಸಲ್ಲಿಸಿದ್ದಾರೆ. ಇದರೊಂದಿಗೆ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಇದುವರೆಗೆ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಂಗಳವಾರ ಕಾಂಗ್ರೆಸ್‌ನಿಂದ 1, ಬಿಜೆಪಿಯಿಂದ 1, ಬಿಎಸ್ಪಿ ಪಕ್ಷದಿಂದ 1, ಜೆಡಿಯು ಪಕ್ಷದಿಂದ 1 ಮತ್ತು ಪಕ್ಷೇತರ 5 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿದ್ದ ಕಾಪು ಕ್ಷೇತ್ರದ ಅಭ್ಯರ್ಥಿ ಲಾಲಾಜಿ ಮೆಂಡನ್ ಮಂಗಳವಾರ ಪುನಃ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಅಮೀರ್ ಹಂಜಾ (ಪಕ್ಷೇತರ), ಅಬ್ದುಲ್ ಹಕೀಂ (ಪಕ್ಷೇತರ), ರೋನಾಲ್ಡ್ ಕ್ಯಾಸ್ಟೆಲಿನೋ (ಪಕ್ಷೇತರ), ಶ್ರೀಕಾಂತ ಬಿ. ಆಚಾರ್ಯ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.
ಕಾರ್ಕಳ ಕ್ಷೇತ್ರಕ್ಕೆ ಹಾಲಿ ಶಾಸಕ ಎಚ್. ಗೋಪಾಲ ಭಂಡಾರಿ (ಕಾಂಗ್ರೆಸ್) ಭಾರಿ ಸಂಖ್ಯೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ತಾಲೂಕು ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಉದಯ (ಬಿಎಸ್ಪಿ), ಮಂಜುನಾಥ ಕೆ. (ಜೆಡಿಯು), ಶ್ರೀಧರ ಪೇದೆಮನೆ (ಪಕ್ಷೇತರ) ಮತ್ತು ಗಣೇಶ್ ಪ್ರಸಾದ್ ಶೆಟ್ಟಿ (ಪಕ್ಷತರ) ನಾಮಪತ್ರ ಸಲ್ಲಿಸಿದ್ದಾರೆ. ಕುಂದಾಪುರ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.