ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಒಂದ್ಸಾರಿನೂ ರಿಬ್ಬನ್ ಕತ್ತರಿಸದ ಶ್ರೀನ್ವಾಸಣ್ಣ

Lingaraj Badiger
Updated On : 17 Apr 2013, 1:28 am

ಉಡುಪಿ: ನಮ್ಮ ಶಾಸಕರಿಗೆ, ಜನಪ್ರತಿನಿಧಿಗಳಿಗೆ ಭೂಮಿಗೆ ಗುದ್ದಲಿ ಹೊಡೆಯೋದು, ಗುಂಡಿಗೆ ಕಲ್ಲು ಹಾಕೋದು, ರಿಬ್ಬನ್ ಕತ್ತರಿಸೋದು ಎಂದ್ರೆ ಬಹಳ ಪ್ರೀತಿ. ದಿವಸಕ್ಕೆ ಇಂತಹ ಹತ್ತಾರು ಕಾರ್ಯಕ್ರಮಗಳಲ್ಲಿ ಬೇಕಾದರೂ ಭಾಗವಹಿಸುತ್ತಾರೆ, ಕಾರ್ಯಕರ್ತರಿಂದ ಚಪ್ಪಾಳೆ ಹೊಡೆಸಿಕೊಳ್ಳುತ್ತಾರೆ, ಫೋಟೋಗಳಿಗೆ ಫೋಸು ನೀಡುತ್ತಾರೆ, ಪತ್ರಿಕೆಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ...
 ಆದರೆ ಇಲ್ಲೊಬ್ಬ ಶಾಸಕರಿದ್ದಾರೆ. ಅವರು ಸತತ 3 ಬಾರಿ ಗೆದ್ದಿದ್ದಾರೆ, ಈ 15 ವರ್ಷಗಳಲ್ಲಿ ಅವರು ಒಂದೇ ಒಂದು ಬಾರಿಯೂ ರಿಬ್ಬನ್ ಕತ್ತರಿಸಿಲ್ಲ, ಕಲ್ಲು ಹಾಕಿಲ್ಲ, ಗುದ್ದಲಿನೂ ಹೊಡೆದಿಲ್ಲ... ಈ ಬಾರಿಯೂ ಮತ್ತೆ ಚುನಾವಣೆಗೆ ನಿಂತಿದ್ದಾರೆ, ಗೆದ್ದು ಶಾಸಕನಾದರೆ ಮುಂದೆಯೂ ಇದನ್ನೆಲ್ಲ ಮಾಡೋದಿಲ್ಲಾ ಎನ್ನುತ್ತಾರೆ.
 ಇವರೇ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯಾನೆ ಶ್ರೀನ್ವಾಸಣ್ಣ. ಇದುವರೆಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದ ಅವರು ಎಲ್ಲವೂ ಸರಿಯಾಗಿ ಇದ್ದಿದ್ರೆ ಈಗಲೂ ಉಳಿದವರಂತೆ ಅವರು ಶಾಸಕರಾಗಿಯೇ ಇರ್ತಿದ್ರು. ಆದರೆ ಬಿಜೆಪಿ ಸರ್ಕಾರ ಅವರಿಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಬೆಂಗಳೂರಿಗೆ ಕರೆದು ನಂತರ ನಿರಾಕರಿಸಿದ್ದರಿಂದ ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಆದ್ದರಿಂದ 5 ವರ್ಷ ಪೂರ್ತಿ ಆಗುವುದಕ್ಕೆ ಇನ್ನೇನೂ 6 ತಿಂಗಳು ಇದೆ ಎನ್ನುವಾಗಲೇ ಅವರು ಮಾಜಿ ಶಾಸಕರಾಗಿಬಿಟ್ಟಿದ್ದಾರೆ. ಆದರೂ ಈಗ ಮತ್ತೆ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.
ಕಾರ್ಯಕ್ರಮಗಳೆಂದರೆ ಅಲರ್ಜಿ: ಪಕ್ಷದ ಕಾರ್ಯಕ್ರಮಗಳಾಗಲಿ, ಸರ್ಕಾರಿ ಕಾರ್ಯಕ್ರಮಗಳಾಗಲಿ ಶೆಟ್ರಿಗೆ ಮೊದಲಿನಿಂದಲೂ ಒಂಥರಾ ಅಲರ್ಜಿ. ಇಂಥ ಕಾರ್ಯಕ್ರಮಗಳಿಗೆ ಒಪ್ಪಿಕೊಳ್ಳುವುದು, ಭಾಗವಹಿಸುವುದು ತುಂಬಾ ಕಡಿಮೆ. ಇದು ಅವರ ಮೇಲೆ ವಿರೋಧಿಗಳು ಮಾಡುವ ಆರೋಪವೂ ಹೌದು.
ಅವರು ಶಾಸಕರಾಗಿದ್ದಾಗಲೂ ಉಡುಪಿಗೆ ಬಿಜೆಪಿಯ ಯಾರೇ ದೊಡ್ಡ ನಾಯಕರು ಬರಲಿ, ಎಂತಹ ದೊಡ್ಡ ಸಮಾವೇಶ ನಡೆಸಲಿ ಶ್ರೀನಿವಾಸ ಶೆಟ್ಟರು ಅದಕ್ಕೆಲ್ಲಾ ಹಾಜರಾಗುತ್ತಿದ್ದದ್ದು ಬಹಳ ಅಪರೂಪ.
ನಾನ್ ಬರುದಿಲ್ಲೆ...: ಇನ್ನು ತಮ್ಮ ಶಾಸಕರ ನಿಧಿಯಿಂದಾಗಲಿ ಅಥವಾ ಸರ್ಕಾರದ ಅನುದಾನಗಳಿಂದಾಗಲಿ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಾಗ ಅದರ ಗುದ್ದಲಿ ಪೂಜೆ ಮಾಡುವುದಕ್ಕಾಗಲಿ, ಶಂಕುಸ್ಥಾಪನೆ ನೆರವೇರಿಸುವುದಕ್ಕಾಗಲಿ ಅವರು ಹೋಗುವುದೇ ಇಲ್ಲ. ಅಧಿಕಾರಿಗಳೇನೋ ಶಿಷ್ಟಾಚಾರ ಅಂತ ಅವರನ್ನು ಕರೆಯುತ್ತಾರೆ ಆದರೆ ಶ್ರೀನಿವಾಸ ಶೆಟ್ಟರು 'ಸಭೆ ಗಿಭೆ ಎಂತ ಬ್ಯಾಡ್ದೆ, ನಾನ್ ಬರುದಿಲ್ಲೆ, ನೀವೇ ಕಾಮಗಾರಿ ಶುರು ಮಾಡಿ...' ಎಂದು ಹೇಳುತ್ತಾರೆ.
 ಯಾಕ್ ಸ್ವಾಮಿ ನೀವ್ ಹೀಗೆ... ಎಂದು ಕೇಳಿದ್ರೆ, ಸರ್ಕಾರದ ಹಣ, ಜನರ ಅಭಿವೃದ್ಧಿಯ ಕಾಮಗಾರಿ, ಅದರ ಮಧ್ಯೆ ನಾನೆಂತಕ್ಕೆ ಕೈ ಹಾಕಬೇಕು, ಶಂಕುಸ್ಥಾಪನೆ, ಉದ್ಘಾಟನೆ ಅಂತ ಸುಮ್ನೆ ಹಣ, ಸಮಯ ಎರಡೂ ವೇಸ್ಟ್. ಅದೆಲ್ಲಾ ಮಾಡ್ದೇ ಇದ್ರೆ ಅಭಿವೃದ್ಧಿ ಕಾಮಗಾರಿ ಆಗುದಿಲ್ವಾ, ಇಷ್ಟು ವರ್ಷ ನನ್ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ವಾ ಎನ್ನುತ್ತಾರೆ ಶೆಟ್ಟರು.
- ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement